ಆಲೂರುಸಿದ್ದಾಪುರ, ಅ. 5 : ಸರಕಾರದ ಅಂಗ ಸಂಸ್ಥೆಯಾಗಿದ್ದ ವಿದ್ಯುತ್ ಸಂಸ್ಥೆಗಳು ಸರಕಾರದ ಅಧಿನದ ಪ್ರಕಾರ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದವು. ಇದೀಗ ರಾಜ್ಯ ಸರಕಾರ ಕರ್ನಾಟಕದಲ್ಲಿ ಎಲ್ಲಾ ವಿದ್ಯುತ್ ಸಂಸ್ಥೆಗಳನ್ನು ಖಾಸಗೀಕರಣ ಗೊಳಿಸಲು ನಿರ್ಣಯಿಸಿರುವ ಕ್ರಮವನ್ನು ವಿದ್ಯುತ್ ಕಂಪೆನಿ ಮತ್ತು ಸಿಬ್ಬಂದಿಗಳು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಆಲೂರುಸಿದ್ದಾಪುರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಸಂಸ್ಥೆ ಉಪ ಶಾಖೆಯ ಸಿಬ್ಬಂದಿಗಳು ಸೋಮವಾರ ಮಧ್ಯಾಹ್ನದ ಮೇಲೆ ಶಾಖಾ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ಖಾಸಗೀಕರಣ ಕ್ರಮವನ್ನು ಆಲೂರುಸಿದ್ದಾಪುರ ಚೆಸ್ಕಾಂ ಶಾಖಾ ಕಚೇರಿ ತೀವ್ರವಾಗಿ ವಿರೋಧಿಸಿದೆ. ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಮಧ್ಯಾಹ್ನದ ನಂತರ ಶಾಖಾ ಕಚೇರಿ ಎದುರು ಪತ್ರಿಭಟನೆ ನಡೆಸಿ ರಾಜ್ಯ ಸರಕಾರದ ವಿರುದ್ಧ ವಿದ್ಯುತ್ ಕಂಪೆನಿಗಳ ಖಾಸಗೀಕರಣ ಕ್ರಮವನ್ನು ಸರಕಾರ ಕೈಬಿಡುವಂತೆ ಘೋಷಣೆ ಕೂಗಿದರು. ಪ್ರತಿಭಟನೆ ಯಲ್ಲಿ ಆಲೂರುಸಿದ್ದಾಪುರ ಚೆಸ್ಕಾಂ ಶಾಖಾಧಿಕಾರಿ ಪಿ.ಸಿ.ರಮೇಶ್, ಮಾಪಕ ಓದುಗ ಎಂ.ಆರ್. ರಂಗಸ್ವಾಮಿ, ಕಿರಿಯ ಪವರ್ ಮೆನ್ ಕುಮಾರ್, ಸಿದ್ದಪ್ಪ, ಪರಶುರಾಮ್, ಹನುಮಂತ, ಮುಜೀಬ್, ಲೋಕೇಶ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಕುಶಾಲನಗರ : ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣ ಪ್ರಸ್ತಾವನೆಗೆ ರಾಜ್ಯ ಸರಕಾರ ಸಮ್ಮತಿಸಬಾರದು ಎಂದು ಒತ್ತಾಯಿಸಿ ಸೆಸ್ಕಾಂನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಯಿತು. ಖಾಸಗೀಕರಣ ವಿರೋಧಿಸಿ ರಾಜ್ಯಾದ್ಯಂತ ಕರೆ ನೀಡಿದ ಪ್ರತಿಭಟನೆಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಕುಶಾಲನಗರದ ಪ್ರಾಥಮಿಕ ಸಂಘದ ಸದಸ್ಯರು ಕಪ್ಪು ಪಟ್ಟಿ ಧರಿಸಿ ಬೆಂಬಲ ವ್ಯಕ್ತಪಡಿಸಿದರು. ನಂತರ ಕಪ್ಪು ಪಟ್ಟಿ ಧರಿಸಿ ಸೇವೆಗೆ ಹಾಜರಾದರು.