ಮಡಿಕೇರಿ, ಅ. 4: ಕೇಂದ್ರ ಸರಕಾರವು ರೈತ ವಿರೋಧಿ ಕೃಷಿ ಮಸೂದೆ ಜಾರಿಗೊಳಿಸುವ ಮುಖಾಂತರ ಬಂಡವಾಳ ಶಾಹಿಗಳ ರಕ್ಷಣೆಯೊಂದಿಗೆ; ರೈತರ ಶೋಷಣೆಯಲ್ಲಿ ತೊಡಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಟೀಕಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಕಾಂಗ್ರೆಸ್ ಸರಕಾರ ಊಳುವವನಿಗೆ ಭೂಮಿ ಕಲ್ಪಿಸಿದ್ದರೆ, ಬಿಜೆಪಿ ಉಳ್ಳವರಿಗೆ ಜಮೀನು ಕಲ್ಪಿಸಲು ಹೊರಟಿದೆ ಎಂದು ಆರೋಪಿಸಿದರು. ಉತ್ತರ ಪ್ರದೇಶದಲ್ಲಿ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ; ಅಲ್ಲಿನ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಅತ್ಯಾಚಾರ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿದ್ದಾರೆ. ಮನ್ ಕೀ ಬಾತ್‍ನಲ್ಲೂ ಮಹಿಳೆಯರ ಪರವಾಗಿ ಮಾತನಾಡುತ್ತಿಲ್ಲ. ಇಂತಹ ಘಟನೆಗಳಿಗೆ ಪ್ರಧಾನಿಯ ಸಹಮತವಿದೆಯೇ ಎಂಬ ಅನುಮಾನ ಜನರಿಗೂ ಕಾಡುತ್ತಿದೆ ಎಂದು ಲೇವಡಿ ಮಾಡಿದರು.

ಕೋವಿಡ್ ಸಂದರ್ಭದಲ್ಲಿ ರೈತ ವಿರೋಧಿ ಕಾನೂನು ಜಾರಿಗೆ ತರಲಾಗಿದೆ. ಅದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಕಾನೂನು ಬಾಹಿರ ಮಸೂದೆಗಳನ್ನು ಕೇಂದ್ರವು ಸತತವಾಗಿ ಜಾರಿಗೆ ತರುತ್ತಿದೆ ಎಂದು ಆಪಾದಿಸಿದರು.

ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈರುಳ್ಳಿ ಬೆಲೆ ಹೆಚ್ಚಳವಾಗಿದ್ದ ವೇಳೆ, ತಾವು ಈರುಳ್ಳಿಯನ್ನೇ ಸೇವಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದರು ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಮುಖಂಡ ಬ್ರಿಜೇಶ್ ಕಾಳಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಡಿಸಿಸಿ ಖಜಾಂಚಿ ನಂದಕುಮಾರ್, ಸುರೇಶ್, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಸದಾ ಮುದ್ದಪ್ಪ ಹಾಜರಿದ್ದರು.