ಮಡಿಕೇರಿ, ಅ. 5: ಜಾಗತಿಕ ಕೊರೊನಾ ಸೋಂಕಿನಿಂದ ಪಾರಾಗಲು ಪ್ರತಿಯೊಬ್ಬರು ಕಡ್ಡಾಯ ವಾಗಿ ಮಾಸ್ಕ್ ಧರಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ. ಮೋಹನ್ ಹಾಗೂ ವೈದ್ಯಕೀಯ ವಿಜ್ಞಾನ ಕಾಲೇಜಿನ ಜಿಲ್ಲಾ ಆಸ್ಪತ್ರೆ ಮುಖ್ಯಸ್ಥ ಡಾ. ಕಾರ್ಯಪ್ಪ ಕರೆ ನೀಡಿದ್ದಾರೆ.ಇಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲೆಯಲ್ಲೆಡೆ ಕೊರೊನಾ ಸೋಂಕು ಹೆಚ್ಚಾಗುವುದರೊಂದಿಗೆ, ಸಾವು ಸಂಭವಿಸುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದ ವೈದ್ಯಾಧಿಕಾರಿಗಳು, ಈಗಿನ ಪರಿಸ್ಥಿತಿಯಲ್ಲಿ ಔಷಧಿ ಕಂಡು ಹಿಡಿಯುವ ತನಕ, ಜನತೆ ಸ್ವಯಂ ಜಾಗೃತರಾಗಿ ಮಾಸ್ಕ್ ಧರಿಸುವುದ ರಿಂದ ಮಾತ್ರ ತಮ್ಮ ಪ್ರಾಣ ಉಳಿಸಿ ಕೊಳ್ಳಲು ಸಾಧ್ಯವೆಂದು ಅಭಿಪ್ರಾಯ ಪಟ್ಟರು. ಮಾಸ್ಕ್ ಧರಿಸದಿದ್ದರೆ ಇನ್ನು ಮುಂದೆ ಪೊಲೀಸ್ ಇಲಾಖೆ ಶಿಸ್ತು ಕ್ರಮ ತೆಗೆದುಕೊಳ್ಳಲಿದೆ ಎಂದು ಅವರುಗಳು ಸುಳಿವು ನೀಡಿದರು.ಕೋವಿಡ್-19 ಹರಡದಂತೆ ನೋಡಿಕೊಳ್ಳಲು ಮಾಸ್ಕ್ನ್ನು ಮೂಗು ಮತ್ತು ಬಾಯಿ ತುಂಬಾ ಸರಿಯಾಗಿ ಮುಚ್ಚಬೇಕು. ಎಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಸುದ್ದಿಗೋಷ್ಠಿ ನಡೆಸಿ ಅವರುಗಳು ಮಾತನಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್ ಬಳಸುವುದೇ ಲಸಿಕೆಯಾಗಿದೆ. (ಮೊದಲ ಪುಟದಿಂದ) ಮಾಸ್ಕ್ನ್ನು ಸರಿಯಾಗಿ ಬಳಸುವುದು ಮತ್ತು ಸಾಬೂನಿನಿಂದ ಕೈತೊಳೆಯುವುದರಿಂದ ಕೋವಿಡ್-19 ನಿಯಂತ್ರಿಸಬಹುದಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಡಾ. ಕಾರ್ಯಪ್ಪ ಕೋರಿದರು.
ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಸರ್ಕಾರದ ಮಾರ್ಗಸೂಚಿಯಂತೆ ಮಾಡಲಾಗುತ್ತಿದೆ. ಇತ್ತೀಚೆಗಿನ ಮಾರ್ಗ ಸೂಚಿಯಂತೆ ಕೋವಿಡ್-19 ನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಕುಟುಂಬದವರೇ ಅವರವರ ಜಮೀನು ಅಥವಾ ಸ್ಮಶಾನದಲ್ಲಿ ಮಾಡಬಹುದಾಗಿದೆ. ಈ ಸಂಬಂಧ ತಹಶೀಲ್ದಾರರು ಮತ್ತು ತಾ.ಪಂ.ಇ.ಒಗಳ ನೇತೃತ್ವದ ತಂಡವು ಅಂತ್ಯಕ್ರಿಯೆ ಮೇಲುಸ್ತುವಾರಿ ನೋಡಿಕೊಳ್ಳಲಿದೆ ಎಂದು ಡಾ. ಕೆ.ಮೋಹನ್ ಹೇಳಿದರು.
ಅಂತ್ಯಕ್ರಿಯೆಗಾಗಿ ಸರ್ಕಾರದಿಂದ ಯಾವುದೇ ರೀತಿಯ ಹಣ ಬಿಡುಗಡೆಯಾಗುವುದಿಲ್ಲ. ಕೋವಿಡ್-19 ನಿಂದ ಮೃತಪಟ್ಟವರನ್ನು ಸಂಬಂಧಪಟ್ಟ ಸ್ಥಳಕ್ಕೆ ಶ್ರದ್ಧಾಂಜಲಿ ವಾಹನದ ಮೂಲಕ ತೆಗೆದುಕೊಂಡು ಹೋಗಲಾಗುತ್ತದೆ. ಸರ್ಕಾರದ ಆಂಬುಲೆನ್ಸ್ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿಗೆ ಒಂದರಂತೆ ಬಾಡಿಗೆ ವಾಹನ ಪಡೆಯಲಾಗುವುದು ಎಂದು ಅವರು ವಿವರಿಸಿದರು.
ಕೋವಿಡ್ ಆಸ್ಪತ್ರೆಯಲ್ಲಿ ಬಿಸ್ಕೆಟ್ ಮತ್ತಿತರ ಲಘು ಆಹಾರದಲ್ಲಿ ಯಾವುದೇ ರೀತಿಯಲ್ಲಿ ದುರುಪಯೋಗವಾಗಿಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಸುವ್ಯವಸ್ಥಿತ ರೀತಿಯಲ್ಲಿ ಕೋವಿಡ್ ಆಸ್ಪತ್ರೆಯನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀಕ್ಷಕ ಡಾ. ಲೋಕೇಶ್ ಮಾತನಾಡಿ ಕೋವಿಡ್ ಆಸ್ಪತ್ರೆಯಲ್ಲಿ ಕುಡಿಯಲು ಬಿಸಿ ನೀರು; ಸ್ನಾನಕ್ಕೆ ಗೀಸರ್ ವ್ಯವಸ್ಥೆ ಮಾಡಲಾಗಿದೆ. ಈ ಸಂಬಂಧ ಯಾವುದೇ ಕೊರತೆಯಿಲ್ಲ. ಆಸ್ಪತ್ರೆಗೆ ಬರುವ ಮತ್ತು ಹೋಗುವ ಯಾವುದೇ ವಸ್ತುಗಳಿಗೆ ಸಂಬಂಧಿಸಿದಂತೆ ಸಿ.ಸಿ.ಟಿ.ವಿ. ಅಳವಡಿಸಿದ್ದು, ಯಾವುದೇ ಲೋಪ ಉಂಟಾಗಿಲ್ಲ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 8 108 ತುರ್ತು ಆಂಬುಲೆನ್ಸ್ ವಾಹನ, 18 ಆಂಬುಲೆನ್ಸ್ ವಾಹನಗಳು ಹಾಗೂ ಮೆಡಿಕಲ್ ಕಾಲೇಜು ವ್ಯಾಪ್ತಿಯಲ್ಲಿ 3 ಆಂಬುಲೆನ್ಸ್ ವಾಹನಗಳಿವೆ. ಕೋವಿಡ್ ಆಸ್ಪತ್ರೆಯಲ್ಲಿ 1 ಟಿ.ವಿ ಇದೆ. ಮಾಸ್ಕ್ ಧರಿಸದಿರುವ ಸಂಬಂಧ 1800 ಪ್ರಕರಣಗಳು ದಾಖಲಾಗಿದೆ ಎಂದು ಡಾ. ಕೆ. ಮೋಹನ್ ತಿಳಿಸಿದರು.