ಸೋಮವಾರಪೇಟೆ: ಸಮೀಪದ ತಾಕೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ, ಕಿರಗಂದೂರು, ತಾಕೇರಿ ಬಿ., ಕೋವರ್‍ಕೊಲ್ಲಿ ಅಂಗನವಾಡಿ ಕೇಂದ್ರ ವ್ಯಾಪ್ತಿಯನ್ನು ಒಳಗೊಂಡಂತೆ ಪೋಷಣ ಅಭಿಯಾನ ಕಾರ್ಯಕ್ರಮ ನಡೆಯಿತು.
ಸ್ಥಳೀಯ ಮಹಿಳಾ ಸಮಾಜದ ಅಧ್ಯಕ್ಷೆ ಚಂದ್ರ ಬಿದ್ದಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ನಾಗವೇಣಿ, ಕಾವೇರಿ, ಚಂದ್ರಿಕಾ, ದಾಕ್ಷಾಯಿಣಿ, ಗ್ರಾ.ಪಂ. ಕಾರ್ಯದರ್ಶಿ ಶಂಕರ್, ಆರೋಗ್ಯ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಶನಿವಾರಸಂತೆ: ಸಮೀಪದ ಮುಳ್ಳೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಿತ್ತಲಕೇರಿ ಮತ್ತು ನಿಡ್ತಕೊಪ್ಪಲು ಅಂಗನವಾಡಿಗಳ ಸಹಭಾಗಿತ್ವದಲ್ಲಿ ನಡೆದ ಪೋಷಣ ಅಭಿಯಾನ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿಜಿಕುಮಾರ್ ಉದ್ಘಾಟಿಸಿ ಚಾಲನೆ ನೀಡಿದರು.
ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತೆ ಜಿ.ಎನ್. ಸ್ವಾತಿ ಮಾತನಾಡಿ, ಗರ್ಭಿಣಿ ಮತ್ತು ಮಕ್ಕಳ ತಾಯಂದಿರಲ್ಲಿ ಪೋಷಕಾಂಶಗಳ ಅರಿವು ಮೂಡಿಸಿ ಅವರಿಗೆ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಭಾಗಿತ್ವದಲ್ಲಿ ನಡೆಯುತ್ತಿದೆ ಎಂದರು.
ಓ.ಆರ್.ಎಸ್. ಬಳಕೆಯ ವಿಧಾನ, ಕೈ ತೊಳೆಯುವ ವಿಧಾನ ಹಾಗೂ ಕೊರೊನಾ ವಿರುದ್ಧ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಅವರು ತಿಳಿಸಿದರು.
ಆಶಾ ಕಾರ್ಯಕರ್ತೆ ರೂಪಾ, ಗರ್ಭಿಣಿ ಸ್ತ್ರೀಯರಾದ ದೀಪಿಕಾ, ಚೈತ್ರಾ, ಸುನೀತಾ, ಗೀತಾ ಅವರಿಗೆ ಸೀಮಂತ ಕಾರ್ಯ ನಡೆಸಿಕೊಟ್ಟರು. ಮುಳ್ಳೂರು, ಹಿತ್ತಲಕೇರಿ, ನಿಡ್ತಕೊಪ್ಪಲು ಅಂಗನವಾಡಿ ಕಾರ್ಯಕರ್ತೆಯರಾದ ಜಯಾ, ಸವೀನಾ, ತ್ರಿವೇಣಿ ಕಾರ್ಯಕ್ರಮ ನಿರ್ವಹಿಸಿದರು.ಗುಡ್ಡೆಹೊಸೂರು: ಇಲ್ಲಿನ ಸಮುದಾಯಭವನದಲ್ಲಿ ನಂಜರಾಯಪಟ್ಟಣ ವರ್ತುಲದ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ವತಿಯಿಂದ ಷೋಷಣ ಅಭಿಯಾನ ಮತ್ತು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಆಶಾ ಮತ್ತು ನಿವೃತ ಶಿಕ್ಷಕಿ ಐಯ್ಯೇಟ್ಟಿ ಸಾವಿತ್ರಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಭಾರತಿ ಮುಂತಾದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಲ್ಲಿನ ಪಿಡಿಓ ಶ್ಯಾಂ ಅವರು ಹಾಜರಿದ್ದು ಕೊರೊನಾ ಬಗ್ಗೆ ಗ್ರಾ.ಪಂ. ವತಿಯಿಂದ ಅನುಸರಿಸುತ್ತಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದ ಆರೋಗ್ಯ ಇಲಾಖೆಯ ಅಧಿಕಾರಿ ಭವಾನಿ ಮಾತನಾಡಿ, ಗರ್ಭಿಣಿಯರು ತಮ್ಮ ಆರೋಗ್ಯವನ್ನು ಯಾವ ರೀತಿ ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ನಂಜರಾಯಪಟ್ಟಣ ವರ್ತುಲದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹಾಜರಿದ್ದರು. ಅಂಗನವಾಡಿ ಶಿಕ್ಷಕಿ ಲತಾ ಕಾರ್ಯಕ್ರಮ ನೀರೂಪಿಸಿ, ರೂಪ ವಂದಿಸಿದರು.