ಗೋಣಿಕೊಪ್ಪ ವರದಿ, ಅ. 3: ವಿದ್ಯುತ್ ಸಮಸ್ಯೆ ಸರಿಪಡಿಸಲು ಸೆಸ್ಕ್‍ಗೆ 15 ದಿನಗಳ ಗಡುವು ನೀಡಿರುವ ಸಾಮೂಹಿಕ ನಾಯಕತ್ವದ ರೈತ ಸಂಘ ಹಸಿರು ಸೇನೆ, ಗೋಣಿಕೊಪ್ಪ ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದೆ.

ಸಾಮೂಹಿಕ ನಾಯಕತ್ವದ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದು, ಶ್ರೀಮಂಗಲ, ಬಿರುನಾಣಿ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

ಶ್ರೀಮಂಗಲ, ಕುಟ್ಟ ಗ್ರಾಮಕ್ಕೆ ತಡೆರಹಿತ ವಿದ್ಯುತ್ ಸಂಪರ್ಕ ಕಳೆದ ಒಂದು ವರ್ಷದಿಂದ ಅನುಷ್ಠಾನ ಗೊಂಡಿದೆ; ಇದು ಕಳಪೆಯಿಂದ ಕೂಡಿದೆ. ಹಾಗೂ ಬಿರುನಾಣಿ ಮತ್ತು ಪೂಕೊಳ ಗ್ರಾಮದಲ್ಲಿ ಕೂಡ ವಿದ್ಯುತ್ ಸಮಸ್ಯೆ ನಿರಂತರವಾಗಿದೆ. ದಿವಸಕ್ಕೆ ಕೇವಲ ಒಂದೆರಡು ಗಂಟೆ ಮಾತ್ರ ವಿದ್ಯುತ್ ಪೂರೈಕೆಯಾಗುತ್ತಿದೆ. ಇದರಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ, ಮಕ್ಕಳ ಆನ್‍ಲೈನ್ ಶಿಕ್ಷಣಕ್ಕೆ ತೊಂದರೆ ಯಾಗಿದೆ. ಈ ಸಮಸ್ಯೆಯನ್ನು 15 ದಿನಗಳ ಒಳಗೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಗೋಣಿಕೊಪ್ಪ ಸೆಸ್ಕ್ ಕಚೇರಿಯ ಎದುರು ರೈತರನ್ನು ಸೇರಿಸಿ ಪ್ರತಿಭಟನೆ, ರಸ್ತೆ ತಡೆ ಮಾಡಲಾ ಗುವುದು ಎಂದು ಎಚ್ಚರಿಸಿದ್ದಾರೆ.