ಮಡಿಕೇರಿ, ಅ. 2: ಕಳೆದ ಮೂರು ವರ್ಷಗಳಿಂದ ಉತ್ತರಕೊಡಗಿನ ಪುಷ್ಪಗಿರಿತಪ್ಪಲು ಶ್ರೇಣಿಯ ಗ್ರಾಮೀಣ ಜನತೆ ಪ್ರಾಕೃತಿಕ ವಿಕೋಪ ನಡುವೆ, ಕೃಷಿ ಫಸಲು ನಷ್ಟದೊಂದಿಗೆ ಕಷ್ಟಕೋಟಲೆ ಅನುಭವಿಸುತ್ತಿದ್ದರೂ, ಕೂಡ ಕಂದಾಯ ಇಲಾಖೆಯ ಮಂದಿ ಕೇವಲ ರಸ್ತೆ ಬದಿ ಮಂದಿಗೆ ಸೀಮಿತ ಪರಿಹಾರ ಕಲ್ಪಿಸಿ ನೈಜ ರೈತರನ್ನು ಕಡೆಗಣಿಸಿ ಕೃಷಿ ಫಸಲು ನಷ್ಟವನ್ನು ಗುರುತಿಸಿ ಸೂಕ್ತ ಪರಿಹಾರ ಕಲ್ಪಿಸುತ್ತಿಲ್ಲ ಎಂಬ ಅಸಮಾಧಾನ ಕೇಳಿಬರತೊಡಗಿದೆ. ಈ ಬಗ್ಗೆ ಜಿಲ್ಲಾಡಳಿತ ಖುದ್ದು ಗಮನ ಹರಿಸಬೇಕೆಂದು ನೊಂದ ಕೃಷಿಕರು ಒತ್ತಾಯಿಸಿದ್ದಾರೆ.ಉತ್ತರಕೊಡಗಿನ ಗಾಳಿಬೀಡು, ಮಕ್ಕಂದೂರು, ಗರ್ವಾಲೆ, ಶಾಂತಳ್ಳಿ, ಬೆಟ್ಟದಳ್ಳಿ ವ್ಯಾಪ್ತಿಯ ಉಪಗ್ರಾಮಗಳ ರೈತರ ಸಂಕಷ್ಟಗಳನ್ನು ಯಾರೂ ಪರಿಗಣಿಸುತ್ತಿಲ್ಲ ಎಂದು ಅನೇಕರು ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ. ಕುಗ್ರಾಮಗಳಿಂದ ಜಾಗತಿಕ ಕೊರೊನಾ ನಡುವೆ ವಾಹನಗಳ ಕೊರತೆಯ ಬವಣೆಯಲ್ಲಿಯೂ, ಕಷ್ಟ ಕಾರ್ಪಣ್ಯಗಳ ಕುರಿತು ಕಂದಾಯ ಅಧಿಕಾರಿಗಳಿಗೆ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದರೆ ನಿರ್ಲಕ್ಷ್ಯ ತಳೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

(ಮೊದಲ ಪುಟದಿಂದ) ಪುಷ್ಪಗಿರಿ ಬೆಟ್ಟ ತಪ್ಪಲುವಿನ ಕುಮಾರಳ್ಳಿ, ಕುಡಿಗಾಣ, ಕೊತ್ನಳ್ಳಿ, ಚಿಂಕ್ಯಳ್ಳಿ ಸೇರಿದಂತೆ ಅನೇಕ ಗ್ರಾಮೀಣ ರೈತರು ಗ್ರಾಮಲೆಕ್ಕಿಗರು ಮತ್ತು ಸಂಬಂಧಿಸಿದ ಕಂದಾಯ ನಿರೀಕ್ಷಕರಿಗೆ ಕೃಷಿ ಫಸಲು ನಷ್ಟ ಸಂಬಂಧ ಅರ್ಜಿ ಸಲ್ಲಿಸಿದರೆ, ತಾವು ಖುದ್ದು ಪರಿಶೀಲಿಸಲು ಬರುವದಾಗಿ ಹಾರಿಕೆ ಉತ್ತರದೊಂದಿಗೆ ಗ್ರಾಮಗಳಿಗೆ ತಿರುಗಿಯೂ ನೋಡುತ್ತಿಲ್ಲ ಎಂದು ರೈತರು ಟೀಕಿಸಿದ್ದಾರೆ.

ತಾಂತ್ರಿಕ ತೊಡಕು : ತಾವು ಹೊಂದಿರುವ ಕೃಷಿ ಭೂಮಿ ಕುಟುಂಬದ ಹಿರಿಯ (ಪಟ್ಟೆದಾರ) ವ್ಯಕ್ತಿ ಹೆಸರಿನಲ್ಲಿದ್ದು, ಇಂತಹ ಕುಟುಂಬಗಳಲ್ಲಿ ನಾಲ್ಕಾರು ರೈತರು ತಮ್ಮ ಜಮೀನಿನ ಪಾಲುಪರಿಕತ್ತು ಮಾಡಿಕೊಂಡು ಜೀವನ ಸಾಗಿಸುವದಾಗಿದೆ. ಆದರೆ ಕಂದಾಯ ಅಧಿಕಾರಿಗಳು ಇದನ್ನೇ ನೆಪಮಾಡಿ ಕೊಂಡು ಮಳೆ ಹಾನಿ ಸಂದರ್ಭ ಮತ್ತು ಕಾಡಾನೆ ಹಾವಳಿಯಿಂದ ನಷ್ಟ ಉಂಟಾಗಿರುವ ಬಗ್ಗೆ ಅರ್ಜಿ ಸಲ್ಲಿಸಿದರೆ ತಿರಸ್ಕರಿಸುತ್ತಿದ್ದಾರೆ ಎಂದು ಅವರುಗಳು ದೂರಿದ್ದಾರೆ.

ಪ್ರಸಕ್ತ ಮಳೆಯಿಂದ ಏಲಕ್ಕಿ, ಕಾಫಿ, ಒಳ್ಳೆಮೆಣಸು, ಬಾಳೆ, ಅಡಿಕೆ ಇತ್ಯಾದಿ ಕೊಳೆರೋಗದಿಂದ ಅಪಾರ ನಷ್ಟ ಹೊಂದಿದ್ದು, ಭತ್ತದ ನಾಟಿಗಳು ಕೂಡ ಹಾನಿಗೀಡಾಗಿವೆ. ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಾರ್ಗ ಸೂಚಿಯಂತೆ ಅರ್ಜಿ ಸಲ್ಲಿಸಿದರೆ, ಸಂಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಅಸಡ್ಡೆ ತೋರುತ್ತಿದ್ದಾರೆ ಎಂದು ಬೊಟ್ಟು ಮಾಡಿದ್ದಾರೆ.

ತನಿಖೆಗೆ ಆಗ್ರಹ : ಇಂತಹ ಅಧಿಕಾರಿಗಳ ಕಾರ್ಯವೈಖರಿಯಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ, ಮೇಲಧಿಕಾರಿಗಳು ಖುದ್ದು ಸ್ಥಳ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮದೊಂದಿಗೆ ರೈತರಿಗೆ ನ್ಯಾಯರೀತಿಯಲ್ಲಿ ಪರಿಹಾರ ಒದಗಿಸಬೇಕೆಂದು ಕುಮಾರಳ್ಳಿ ವಿಜಯಕುಮಾರ್ ಹಾಗೂ ಇತರರು ಆಗ್ರಹಿಸಿದ್ದಾರೆ. ಈ ಭಾಗದಿಂದ 2018ರಲ್ಲಿ ಅನೇಕ ರೈತರಿಗೆ ಅಪಾರ ನಷ್ಟ ಎದುರಾಗುತ್ತಿದ್ದು, ಕಂದಾಯ ಅಧಿಕಾರಿಗಳು ಹೋಬಳಿ ಕೇಂದ್ರಗಳ ಪ್ರಭಾವಿಗಳಿಗೆ ಸೀಮಿತವಾಗಿ ಪರಿಹಾರ ಕಲ್ಪಿಸಿ ಕೈತೊಳೆದುಕೊಳ್ಳುತ್ತಿ ದ್ದಾರೆ ಎಂದು ಗ್ರಾಮದ ತಮ್ಮಯ್ಯ, ಲಕ್ಷ್ಮಣಯ್ಯ ಮುಂತಾದ ರೈತರು ಅಸಮಾಧಾನ ತೋಡಿಕೊಂಡಿದ್ದಾರೆ.

ಕೊಡಗಿನಲ್ಲಿ ಅಧಿಕ ಮಳೆಬೀಳುವ ಗ್ರಾಮೀಣ ಜನತೆಯ ಕಷ್ಟ ಆಲಿಸಲು ಜಿಲ್ಲಾಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಆಯಾ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ವಾಸ್ತವ ಪರಿಗಣಿಸಿ ಸೂಕ್ತ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ನೊಂದ ರೈತರು ‘ಶಕ್ತಿ’ ಮುಖಾಂತರ ಗಮನ ಸೆಳೆದಿದ್ದಾರೆ.

ನೂರೆಂಟು ತೊಂದರೆ : ಶಾಂತಳ್ಳಿಯಿಂದ ಪುಷ್ಪಗಿರಿಗೆ ತೆರಳುವ ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸೌಕರ್ಯವೂ ಇಲ್ಲದೆ, ಮಳೆಯ ಹೊಡೆತ, ಕೊರೊನಾ ಆತಂಕ ನಡುವೆ ನೂರೆಂಟು ಸಮಸ್ಯೆಗಳ ಸುಳಿಯಲ್ಲಿ ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ನೂರಾರು ರೂಪಾಯಿ ವ್ಯಯಿಸಿ ಕಚೇರಿ ಕೆಲಸಗಳಿಗೆ ಧಾವಿಸಿದರೆ, ರೈತರ ಕಷ್ಟ, ಇತರ ಸಮಸ್ಯೆಗಳನ್ನು ಅಲ್ಲಿ ಕೇಳುವವರೇ ಸಿಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.