ಸೋಮವಾರಪೇಟೆ, ಅ. 2: ಸೋಮವಾರ ಪೇಟೆಯಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಈರ್ವರು ಆರೋಪಿಗಳನ್ನು ಸೋಮವಾರಪೇಟೆ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ಧ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.ಸೋಮವಾರಪೇಟೆ ಪಟ್ಟಣ ಸಮೀಪದ ಹಾನಗಲ್ಲುಬಾಣೆ ನಿವಾಸಿ ವಿನಯ್ ಹಾಗೂ ಕುಶಾಲನಗರದ ಅತ್ತೂರು ಸಮೀಪದ ಗೊಂದಿಬಸವನಹಳ್ಳಿ ಗ್ರಾಮ ನಿವಾಸಿ ನಿಧೀಶ್ ಎಂಬವರನ್ನು ವಶಕ್ಕೆ ಪಡೆದ ಪೊಲೀಸರು, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.ಗುಡ್ಡೆಹೊಸೂರು ಸಮೀಪದ ಬೆಂಡೆಬೆಟ್ಟದ ಅಕ್ಷಯ್ ಎಂಬಾತನಿಂದ ರೂ. 20 ಸಾವಿರಕ್ಕೆ ಅರ್ಧ ಕೆ.ಜಿ. ಗಾಂಜಾವನ್ನು ಖರೀದಿಸಿ, ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಯಮಹ ರೇ (ಕೆ.ಎ.12 ಆರ್ 0682) ವಾಹನದಲ್ಲಿ ಸಾಗಾಟಗೊಳಿಸುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಲಾಗಿದೆ.ಅಕ್ರಮವಾಗಿ ಗಾಂಜಾವನ್ನು ಸಾಗಾಟಗೊಳಿಸುತ್ತಿದ್ದ ಬಗ್ಗೆ ದೊರೆತ ಖಚಿತ ಸುಳಿವಿನ ಆಧಾರದ ಮೇರೆ ಇಲ್ಲಿನ ನಗರೂರು ಜಂಕ್ಷನ್ ಬಳಿಯಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ, ವಾಹನಕ್ಕೆ ತಡೆಯೊಡ್ಡಿ ತಪಾಸಣೆ ನಡೆಸಿದ ಸಂದರ್ಭ ಈರ್ವರು ಆರೋಪಿಗಳ ಬಳಿ ಅರ್ಧ ಕೆ.ಜಿ. ಗಾಂಜಾ ಪತ್ತೆಯಾಗಿದೆ. ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಾದಾಮಿ ಅವರ ಸಮಕ್ಷಮ ಆರೋಪಿಗಳ ಸಹಿತ ವಾಹನ ಹಾಗೂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

(ಮೊದಲ ಪುಟದಿಂದ) ಇವರುಗಳಿಗೆ ಗಾಂಜಾ ಮಾರಾಟ ಮಾಡಿದ ಅಕ್ಷಯ್ ತಲೆಮರೆಸಿಕೊಂಡಿದ್ದು, ಆತನ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಡಿವೈಎಸ್‍ಪಿ ಶೈಲೇಂದ್ರ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಕ್ರೈಂ ವಿಭಾಗದ ಎಸ್.ಐ. ವಿರೂಪಾಕ್ಷ, ಸಿಬ್ಬಂದಿಗಳಾದ ಪ್ರವೀಣ್, ಶಿವಕುಮಾರ್, ಕೇಶವ, ನವೀನ್, ಸಜಿ, ಪ್ರಕಾಶ್ ಅವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇಲಾಖೆಯಿಂದ ನಿಗಾ: ಇದೀಗ ಮೊಕದ್ದಮೆ ದಾಖಲಿಸಿಕೊಂಡಿರುವ ಈರ್ವರು ಆರೋಪಿಗಳ ಚಲನವಲನಗಳ ಬಗ್ಗೆ ಪೊಲೀಸ್ ಇಲಾಖೆ ನಿರಂತರ ನಿಗಾವಹಿಸಿದೆ. ಈರ್ವರ ವಿರುದ್ಧ ‘ಎಂ.ಓ.ಬಿ. ಕಾರ್ಡ್’ ತೆರೆಯಲಾಗಿದ್ದು, ತಿಂಗಳಿಗೆ ಎರಡು ಬಾರಿ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ ಗೂಂಡಾ ಕಾಯ್ದೆಯಡಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವದು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.