ಶನಿವಾರಸಂತೆ, ಅ. 2: ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದ ದಿ. ದೇವರಾಜು ಅವರ ಜಾಗದಿಂದ ಬೆಳಗ್ಗಿನ ಜಾವ ಅಕ್ರಮವಾಗಿ 4 ಹಸಿ ಶ್ರೀಗಂಧದ ಮರಗಳನ್ನು ಕಡಿದು, 13 ನಾಟಾಗಳಾಗಿ ಪರಿವರ್ತಿಸಿ, ಆರೋಪಿಗಳಿಬ್ಬರು ಓಮಿನಿ ಕಾರಿನಲ್ಲಿ ಸಾಗಾಟ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆ (ಕೆಎ-04, ಝೆಡ್-6566) ಕಾರು, (ಮೊದಲ ಪುಟದಿಂದ) ಶ್ರೀಗಂಧ, ಆರೋಪಿಗಳನ್ನು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪಿ. ಪ್ರಪುಲ್ ಶೆಟ್ಟಿ ಹಾಗೂ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದಾರೆ. ಬೆಳಗ್ಗಿನ ಜಾವ ಕಿರಿಕೊಡ್ಲಿ ಗ್ರಾಮದ ಬಾಲಸುಬ್ರಮಣ್ಯ ಹಾಗೂ ಮಣಿಕಂಠ 4 ಗಂಧದ ಮರಗಳನ್ನು ಕಡಿದು ತುಂಡುಗಳನ್ನಾಗಿ ಮಾಡಿ, ಓಮಿನಿ ಕಾರಿನಲ್ಲಿ ತುಂಬಿಸಿ ಕೊಡ್ಲಿಪೇಟೆ- ಶನಿವಾರಸಂತೆ ಸಾರ್ವಜನಿಕರ ರಸ್ತೆಯಲ್ಲಿ ಸಾಗಾಟ ಮಾಡುತ್ತಿರುವಾಗ ಅರಣ್ಯ ಇಲಾಖೆ ಕಾರನ್ನು ತಡೆದು ನಿಲ್ಲಿಸಿ ಆರೋಪಿಗಳನ್ನು ಬಂಧಿಸಿ, ಶ್ರೀಗಂಧ ಹಾಗೂ ವಾಹನ ಸೇರಿದಂತೆ ರೂ. 3 ಲಕ್ಷ ಬೆಲೆಯ ಶ್ರೀಗಂಧವನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಉಪ ಅರಣ್ಯ ವಲಯಾಧಿಕಾರಿ ಗೋವಿಂದರಾಜ್, ಅರಣ್ಯ ರಕ್ಷಕರಾದ ಪ್ರಕಾಶ್, ರಾಮಕೃಷ್ಣ ಶೆಟ್ಟಿ, ಶಶಿಕುಮಾರ್, ಚಾಲಕರಾದ ಹರೀಶ್ ಕುಮಾರ್, ಭರತ್, ಲೋಕೇಶ್ ಇತರರು ಪಾಲ್ಗೊಂಡಿದ್ದರು.