ಕುಶಾಲನಗರ, ಅ. 2: ಪ್ರಕೃತಿ ಉಳಿದಲ್ಲಿ ಮಾತ್ರ ಮನುಕುಲದ ಸಂತತಿ ಉಳಿಯಲು ಸಾಧ್ಯ ಎಂದು ಎಡನೀರು ಮಠದ ಉತ್ತರಾಧಿಕಾರಿ ಜಯರಾಮ ಮಂಜತ್ತಾಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರದಲ್ಲಿ ಹುಣ್ಣಿಮೆ ಅಂಗವಾಗಿ ಕಾವೇರಿ ನದಿ ಆರತಿ ಬಳಗದ ಆಶ್ರಯದಲ್ಲಿ ನಡೆದ 111ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಕೃತಿಯ ಆರಾಧನೆಯ ಬಗ್ಗೆ ಜನರಿಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯ ಶ್ರೇಷ್ಠವಾದುದು ಎಂದ ಶ್ರೀಗಳು, ನದಿ ಸ್ವಚ್ಛತಾ ಅಭಿಯಾನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಈ ನಿಟ್ಟಿನಲ್ಲಿ ತಮ್ಮ ಮಠದ ಮೂಲಕ ಎಲ್ಲಾ ರೀತಿಯ ಸಹಾಯಹಸ್ತ ಕಲ್ಪಿಸುವ ಭರವಸೆ ವ್ಯಕ್ತಪಡಿಸಿದರು. ಅರ್ಚಕ ಕೃಷ್ಣಮೂರ್ತಿ ಭಟ್ ಅವರು ಅಷ್ಟೋತ್ತರ, ಕುಂಕುಮಾರ್ಚನೆ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಕುಂಟಾರ್ ತಂತ್ರಿಗಳಾದ ರವೀಶ್ ಮತ್ತು ಮಠದ ಕಾರ್ಯಕರ್ತರ ತಂಡ ಕಾವೇರಿ ನದಿಗೆ ವಿಶೇಷ ಆರತಿ ಬೆಳಗಿದರು. ಇದೇ ಸಂದರ್ಭ ಮಠಾಧೀಶರು ಹಾಗೂ ತಂತ್ರಿಗಳನ್ನು ಕಾವೇರಿ ಮಹಾ ಆರತಿ ಬಳಗದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.
ಕಾವೇರಿ ಮಹಾ ಆರತಿ ಬಳಗದ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಕೆ.ಆರ್. ಶಿವಾನಂದನ್, ಡಿ.ಆರ್. ಸೋಮಶೇಖರ್, ವನಿತಾ ಚಂದ್ರಮೋಹನ್, ಉದ್ಯಮಿಗಳಾದ ಯು.ಎಂ. ಲಕ್ಷ್ಮಣ, ಭಾಸ್ಕರ್, ರಾಜೇಶ್ ಮತ್ತು ಬಳಗದ ಸದಸ್ಯರು ಇದ್ದರು.
ಎಡನೀರು ಮಠದ ನಿಯೋಜಿತ ಉತ್ತರಾಧಿಕಾರಿ ಜಯರಾಮ ಮಂಜತ್ತಾಯ ಅವರ ಪೀಠಾರೋಹಣ ಕಾರ್ಯಕ್ರಮ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ವಿವಿಧ ಪುಣ್ಯ ನದಿಗಳಲ್ಲಿ ತೀರ್ಥಸ್ನಾನ ಮತ್ತಿತರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಕೇರಳ, ಕೊಡಗು, ಹಾಸನ ಮುಂತಾದೆಡೆ ತಮ್ಮ ಅನುಯಾಯಿಗಳೊಂದಿಗೆ ತೆರಳುತ್ತಿದ್ದು ಈ ಸಂದರ್ಭ ಕುಶಾಲನಗರದಲ್ಲಿ ಕಾವೇರಿ ನದಿಯಲ್ಲಿ ತೀರ್ಥಸ್ನಾನ ಮಾಡಿ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.