ಸೋಮವಾರಪೇಟೆ, ಅ. 2: ಒಂದೆಡೆ ಪ್ರಾಕೃತಿಕ ವಿಕೋಪ, ಮತ್ತೊಂದೆಡೆ ಕೊರೊನಾ ಸಂಕಷ್ಟದ ಸನ್ನಿವೇಶದಲ್ಲಿ ಜಿಲ್ಲೆಯ ಸಾವಿರಾರು ಬಡ ಕುಟುಂಬಗಳ ಬಿಪಿಎಲ್ ಕಾರ್ಡ್‍ಗಳು ರದ್ದುಗೊಳ್ಳುತ್ತಿದ್ದು, ಮುಂದಿನ 15 ದಿನಗಳ ಒಳಗೆ ಪಡಿತರ ಚೀಟಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ ತಿಳಿಸಿದ್ದಾರೆ.

ಜಿಲ್ಲೆಯ ಹೆಚ್ಚಿನ ಕೂಲಿ ಕಾರ್ಮಿಕರು, ರೈತರು, ಬಡವರ ಪಡಿತರ ಚೀಟಿಗಳು ರದ್ದಾಗಿದ್ದು, ಅವರ ಕುಟುಂಬಗಳು ಸಂಕಷ್ಟದಲ್ಲಿವೆ. 15 ದಿನಗಳ ಒಳಗೆ ಅಂತಹವರಿಗೆ ಪಡಿತರ ವಿತರಿಸಬೇಕು ತಪ್ಪಿದಲ್ಲಿ ಮೂರು ತಾಲೂಕಿನ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

ಕೊರೊನಾ ಸೋಂಕಿನಿಂದ ಜನರು ಸಂಕಷ್ಟದಲ್ಲಿರುವಾಗಲೇ, ಬಡವರ ಪಡಿತರ ಚೀಟಿಗಳು ರದ್ದಾಗುತ್ತಿವೆ. ಬಿ.ಪಿ.ಎಲ್. ಕಾರ್ಡ್ ಹೊಂದಲು ಸರ್ಕಾರದ ನಿಗದಿ ಮಾಡಿರುವ ಅವೈಜ್ಞಾನಿಕ ಮಾನದಂಡಗಳಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತವಿದ್ದಾಗ, ಪ್ರತಿಯೊಬ್ಬ ಫಲಾನುಭವಿಗಳಿಗೆ ತಲಾ 10 ಕೆ.ಜಿ. ಅಕ್ಕಿ ಸೇರಿದಂತೆ ಇತರ ಪಡಿತರ ತಲುಪುತ್ತಿತ್ತು.

ಬಡವರ ಪರ ಎಂದು ಹೇಳಿಕೊಂಡು ಆಡಳಿತಕ್ಕೆ ಬಂದ ಬಿಜೆಪಿ, ಇದೀಗ ಬಡವರ ಯೋಜನೆಗಳನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸುತ್ತಿದೆ ಆರೋಪಿಸಿದರು.

ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಎಲ್ಲೆಡೆ ಬಸ್‍ಗಳ ವ್ಯವಸ್ಥೆಯಿಲ್ಲ. ಈ ಹಿನ್ನೆಲೆ ಪ್ರತಿಯೊಬ್ಬರು ವಾಹನಗಳನ್ನು ಇಟ್ಟುಕೊಳ್ಳಬೇಕಾದ ಸ್ಥಿತಿ ಇದೆ. ನಾಲ್ಕು ಚಕ್ರದ ವಾಹನ ಹೊಂದಿದ್ದರೆ, ಬಿ.ಪಿ.ಎಲ್. ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಅವೈಜ್ಞಾನಿಕ. ಕೂಲಿ ಕಾರ್ಮಿಕರು ರೂ. 0 ಸಾವಿರ ಕೊಟ್ಟು ‘ಸೆಕೆಂಡ್ ಹ್ಯಾಂಡ್’ ಕಾರು ಇಟ್ಟುಕೊಂಡಿದ್ದಾರೆ. ಹೀಗೆಂದು ಬಿ.ಪಿ.ಎಲ್ ಕಾರ್ಡ್ ರದ್ದು ಮಾಡಿದರೆ, ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಸಿದರು.

ಪಕ್ಷದ ತಾಲೂಕು ಘಟಕದ ಅಧ್ಯಕ್ಷ ನಾಗರಾಜ್ ಮಾತನಾಡಿ, ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸುಗ್ರಿವಾಜ್ಞೆಯ ಮೂಲಕ ಕೃಷಿ ಮಸೂದೆಗಳನ್ನು ಜಾರಿಗೆ ತಂದು, ರೈತರನ್ನು ನಾಶ ಮಾಡಿ ಬಂಡವಾಳಶಾಹಿಯನ್ನು ವಿಜೃಂಭಿಸುವ ಪ್ರಯತ್ನಕ್ಕೆ ಕೈಹಾಕಿದೆ. ಹಿಂದಿನ ಸರ್ಕಾರಗಳು ರೈತರು, ಬಡವರು, ದೀನದಲಿತರ ಶ್ರೇಯೋಭಿವೃದ್ಧಿಗೆ ಜಾರಿಗೆ ತಂದಿರುವ ಸವಲತ್ತುಗಳನ್ನು ರದ್ದುಪಡಿಸಿದರೆ ನಿರಂತರ ಹೋರಾಟ ಮಾಡಲಾಗುವದು ಎಂದರು.

ಇನ್ನೊಂದು ಕಡೆ ಪ್ರತಿ ತಿಂಗಳು ವೃದ್ಧಾಪ್ಯ ವೇತನ ಬರುತ್ತಿಲ್ಲ. ಒಮ್ಮೆಗೆ ಬರುವ ವೃದ್ಧಾಪ್ಯ ವೇತನವನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ವಸೂಲಾತಿಗೆ ಜಮೆ ಮಾಡಿಕೊಳ್ಳುತ್ತಿದೆ ಎಂದು ಜಿಲ್ಲಾ ಯುವ ಜನತಾದಳದ ಉಪಾಧ್ಯಕ್ಷ ಪಿ.ಡಿ.ರವಿಕುಮಾರ್ ಆರೋಪಿಸಿದರು.

ಗೋಷ್ಠಿಯಲ್ಲಿ ಪಕ್ಷದ ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ಎ.ಜಿ.ವಿಜಯ, ಯುವ ಘಟಕದ ತಾಲೂಕು ಅಧ್ಯಕ್ಷ ಬಿ.ಸಿ. ರವಿ ಉಪಸ್ಥಿತರಿದ್ದರು.