ವೀರಾಜಪೇಟೆ, ಅ. 2 : ಹಲವು ದಿನಗಳ ಹಿಂದೆ ಭಾಗಮಂಡಲದಲ್ಲಿ ನಾಗರಿಕ ಸಮಿತಿ ಎಂಬ ಹೆಸರಿನಲ್ಲಿ ಒಂದು ಸಮುದಾಯದ ಕೆಲವರು ಸಭೆ ಸೇರಿ ಕೊಡವರು ಸಾಂಪ್ರ್ರದಾಯಿಕ ಉಡುಪು ತೊಟ್ಟು ತಲಕಾವೇರಿ - ಭಾಗಮಂಡಲ ಧಾರ್ಮಿಕ ಕ್ಷೇತ್ರಕ್ಕೆ ಬರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ, ಈ ಕ್ಷೇತ್ರದಲ್ಲಿನ ಕೊಡವರ ಧಾರ್ಮಿಕ ಹಕ್ಕುಗಳನ್ನು ಪ್ರಶ್ನಿಸಿರುವುದನ್ನು ವೀರಾಜಪೇಟೆ ಅಖಿಲ ಕೊಡವ ಸಮಾಜ ಹಾಗೂ ಕೊಡವ ಸಮಾಜಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ವೀರಾಜಪೇಟೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಕರೆಯಲಾಗಿದ್ದ ಎಲ್ಲಾ ಕೊಡವ ಸಮಾಜಗಳ ಅಧ್ಯಕ್ಷರುಗಳ ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ ಅವರು ಕಾವೇರಿ ಮಾತೆ ಕೊಡವರ ಕುಲದೇವಿ ಎಂಬುವುದು ಪ್ರಶ್ನಾತೀತವಾಗಿದೆ. ಇಲ್ಲಿ ಕೊಡವರು ಹಾಗೂ ಕಾವೇರಿ ಮಾತೆಯ ಬಾಂಧÀವ್ಯ ಆದಿಮೂಲದಿಂದ ಇರುವಂತದ್ದು. ಇದಕ್ಕೆ ಸಾಕ್ಷಿ ಎಂಬಂತೆ ಅಪ್ಪಚ್ಚೀರ ಕುಟುಂಬಸ್ಥರು ನೂರಾರು ಭಟ್ಟಿ ಕೃಷಿ ಭೂಮಿಯನ್ನು ಈ ಕ್ಷೇತ್ರಕ್ಕೆ ದಾನಕೊಟ್ಟಿರುವುದು, ಕಳ್ಳಂಗಡ ಹಾಗೂ ಪಟ್ಟಮಾಡ ಕುಟುಂಬ ಸಹ ದಾನ ನೀಡಿರುವ ಕೃಷಿ ಭೂಮಿಯಿಂದ ಭತ್ತ ಬೆಳೆದು ಅಕ್ಕಿಯನ್ನು ಕ್ಷೇತ್ರಕ್ಕೆ ನೀಡುತ್ತಾ ಬರುತ್ತಿದ್ದಾರೆ. ಈ ಹಿಂದೆ ಅಪ್ಪಚ್ಚೀರ ಕುಟುಂಬಸ್ಥರು ದಾನಕೊಟ್ಟಿರುವ ಕೃಷಿ ಭೂಮಿ ಯಾರ ವಶದಲ್ಲಿದೆ ಎಂದು ಪ್ರಶ್ನಿಸಿದರು.

ಶಿವರಾತ್ರಿ ಉತ್ಸವಕ್ಕೆ ಈ ಕ್ಷೇತ್ರದ ಲಕ್ಷ್ಷದೀಪ ಹಾಗೂ ಕುಂಡಿಕೆಯಲ್ಲಿ ಭಾಗಮಂಡಲದಿಂದ ಕೊಡವ ಸಾಂಪ್ರದಾಯಿಕ ದುಡಿಕೊಟ್ಟ್ ಪಾಟ್ ನಡೆಸುತ್ತಾ ಬರುತ್ತಿದ್ದುದ್ದನ್ನು ಅವರು ನೆನಪಿಸಿದರು. ತಕ್ಕಾಮೆಯ ವಿಚಾg ದಲ್ಲಿ ಮಾತನಾಡಿದ ಅವರು ತಕ್ಕರಿಗೆ ಪತ್ತಾಯಕ್ಕೆ ಅಕ್ಕಿ ಹಾಕಲು ಆದ್ಯತೆ ಇದ್ದರೂ, ತದನಂತರ ಅಲ್ಲಿರುವ ಪ್ರತಿಯೊಬ್ಬ ಭಕ್ತರಿಗೂ ಇದರಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಇದನ್ನು ವಿರೋಧಿಸುವಂತಿಲ್ಲ. ತಕ್ಕರಾದವರು ಈ ನಾಡಿನ

(ಮೊದಲ ಪುಟದಿಂದ) ಸಂಪ್ರದಾಯದಂತೆ ಹಬ್ಬ ಹರಿದಿನಗಳನ್ನು ಸಾಂಪ್ರದಾಯಿಕ ಉಡುಗೆ ತೊಟ್ಟು ಆಚರಣೆಯನ್ನು ಮಾಡುವುದು ಈ ಮಣ್ಣಿನ ಕೊಡವ ಸಂಸ್ಕೃತಿ. ಹೀಗಿರುವಾಗ ಪ್ರಸಕ್ತ ದಿನಗಳಲ್ಲಿ ತಕ್ಕಾಮೆಯನ್ನು ನಡೆಸುತ್ತಿರುವ ಕುಟುಂಬದವರು ತಲಕಾವೇರಿ ಹಬ್ಬದ ಪ್ರಯುಕ್ತ ಪತ್ತಾಯಕ್ಕೆ ಅಕ್ಕಿ ಹಾಕುವಾಗ ಕುಪ್ಯಚೇಲೆ ಧರಿಸುತ್ತಿರಲಿಲ್ಲ. ಕೊಡಗು ಏಕೀಕರಣ ರಂಗದವರು ಸಾಂಸ್ಕೃತಿಕವಾಗಿ ಅಕ್ಕಿ ಹಾಕುವ ಪದ್ಧತಿಯನ್ನು ಕೊಡವ ಸಾಂಸ್ಕೃತಿಕ ಉಡುಗೆ ತೊಟ್ಟು ಆಚರಿಸುವಂತೆ ಪ್ರೇರೇಪಿಸಿರುವುದನ್ನು ಸಭೆಯ ಗಮನಕ್ಕೆ ತಂದರು. ಇದಲ್ಲದೆ ಭಂಡಾರ ಪೆಟ್ಟಿಗೆಯನ್ನು ಸಹ ಜೀಪಿನ ಮೂಲಕ ತಕ್ಕರು ಕುಪ್ಯಚೇಲೆ ತೊಟ್ಟು ಜೀಪಿನಲ್ಲಿ ಮೆರವಣಿಗೆಯ ಮೂಲಕ ಸಾಗುವಂತೆ ಏಕೀಕರಣ ರಂಗವೇ ಅಡಿಪಾಯ ಹಾಕಿಕೊಟ್ಟಿತ್ತು. ಈ ವಿಚಾರವಾಗಿ ಇಂದು ಆ ಸಮುದಾಯದ ಕೆಲವರು ಕೊಡವರ ಉಡುಗೆಯ ವಿರುದ್ಧ ದ್ವನಿ ಎತ್ತುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿ ಖಂಡಿಸಿದರು.

ಇದು ಮೇಲ್ನೋಟಕ್ಕೆ ಭಾಗಮಂಡಲದ ನಾಗರಿಕರ ಸಭೆಯ ಹೆಸರಿನಲ್ಲಿ ಪಾಲ್ಗೊಂಡಿದ್ದ ಗಣ್ಯ ವ್ಯಕ್ತಿಗಳ ಬಾಲಿಶ ಹೇಳಿಕೆ ಹಾಗೂ ಚಿಲ್ಲರೆ ವಿಷಯವಾಗಿ ಕಾಣುತ್ತಿದೆ. ಯಾವುದೇ ಕಾರಣಕ್ಕೂ ಕೊಡವರ ಸಂಪ್ರದಾಯದ ಹಾಗೂ ಹಕ್ಕು ಬಾಧ್ಯತೆಗಳ ವಿರುದ್ಧ ಹೇಳಿಕೆಯನ್ನು ನಾವು ಸಹಿಸುವುದಿಲ್ಲ. ಇಂತಹ ಅನಾಗರಿಕ ವರ್ತನೆಯನ್ನು ಈ ಸಮುದಾಯದ ಪ್ರಬುದ್ಧರು ತಕ್ಷಣ ಖಂಡಿಸಬೇಕಿತ್ತು. ಇದನ್ನು ನಿರೀಕ್ಷಿಸಿದ್ದ ಕೊಡವ ಸಮುದಾಯಕ್ಕೆ ನಿರಾಶೆ ಆಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಅವರು ಮಾತನಾಡಿ ಕೊಡಗಿನ ಮೂಲ ನಿವಾಸಿಗಳಾದ ಕೊಡವರ ಕುಲದೇವತೆ ಕಾವೇರಿ ಹಾಗೂ ಉಡುಪಿನ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ. ಕೊಡವರ ಅಸ್ತಿತ್ವ ಹಾಗೂ ಸಂಪ್ರದಾಯದ ಬಗ್ಗೆ ಬಾಲಿಶ ಹಾಗೂ ಅನಾಗರಿಕ ಹೇಳಿಕೆಗಳನ್ನು ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಜನಪ್ರತಿನಿಧಿಗಳು ಇಂತಹ ಅಹಿತಕರ ಹೇಳಿಕೆ ಹಾಗೂ ಬೆಳವಣಿಗಳನ್ನು ಖಂಡಿಸಿ ಸಭೆ ಕರೆದು ಸಾಮರಸ್ಯಕ್ಕೆ ನಾಂದಿ ಹಾಡಬೇಕಿತ್ತು. ಆದರೆ ಈ ಕೆಲಸವನ್ನು ಈ ನಾಡಿನ ಸಮಸ್ತರ ಒಳಿತನ್ನೇ ಬಯಸಿ ನಾವು ಕರೆದಿದ್ದೇವೆ. ಆದರೆ ನಾವು ಮತ ಚಲಾಯಿಸುವಾಗ ಕೊಡಗಿನಲ್ಲಿ ಜಾತಿಯನ್ನು ಚಿಂತಿಸದೇ ಎಲ್ಲಾ ವರ್ಗದವರನ್ನು ಇಲ್ಲಿಯವರೆಗೆ ಚುನಾಯಿಸುತ್ತಾ ಬಂದಿರುತ್ತೇವೆ. ಇದು ಕೊಡವರ ವಿಶಾಲ ಮನೋಭಾವಕ್ಕೆ ಸಾಕ್ಷಿ ಎಂದರು. ಆದುದರಿಂದ ಈ ಎರಡು ಪ್ರಮುಖ ಜನಾಂಗ ಸಾಮರಸ್ಯದೊಂದಿಗೆ ನಾಡಿನ ಶಾಂತಿಯನ್ನು ಕಾಪಾಡಬೇಕೆಂದು ಆಗ್ರಹಿಸಿದರು.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರಾದ ಕೊಂಗಂಡ ಎಸ್. ದೇವಯ್ಯ ಅವರು ಮಾತನಾಡಿ ಪ್ರಚಲಿತ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿ ಈ ಕ್ಷೇತ್ರದ ಧಾರ್ಮಿಕ ಕಾರ್ಯಗಳು ಈ ಮಣ್ಣಿನ ಸಂಸ್ಕೃತಿ ಸಂಪ್ರದಾಯದಂತೆ ನಡೆಯಬೇಕು. ಇಲ್ಲದಿದ್ದಲ್ಲಿ ಕಾವೇರಿ ಮಾತೆ ಮುನಿಸಿಕೊಂಡು ಅನಾಹುತಕ್ಕೆ ಕಾರಣವಾಗುತ್ತದೆ ಎಂಬ ವಿಚಾರವಾಗಿ ಈ ಹಿಂದೆ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದುಬಂದಿರುತ್ತದೆ; ಅಲ್ಲದೇ ಇಲ್ಲಿನ ಮೂಲತಕ್ಕರಾದ ಮಂಡಿರ, ಮಣವಟ್ಟಿರ, ಪಟ್ಟಮಾಡ ಕುಟುಂಬಗಳ ಬಗ್ಗೆ ನಡಾವಳಿಕೆ ಪುಸ್ತಕದಲ್ಲಿ ದಾಖಲಾಗಿರುತ್ತದೆ. ಭಾಗಮಂಡಲ - ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಡಿರ ಕುಟುಂಬಸ್ಥರ ಹೆಸರಿನಲ್ಲಿ ಒಂದು ಸಾವಿರಕ್ಕೂ ಅಧಿಕ ಎಕರೆ ಜಮೀನು ಇದ್ದದ್ದನ್ನು ಉಲ್ಲೇಖಿಸಿದ ಅವರು ಈಗಲೂ ಜಮಾಬಂದಿಯಲ್ಲಿ ಈ ಕುಟುಂಬದ ಹೆಸರು ದಾಖಲಾಗಿದೆ ಎಂದರು.

ಪೆÇನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಅವರು ಮಾತನಾಡಿ ಪ್ರಸಕ್ತ ತಕ್ಕಾಮೆಯನ್ನು ನಡೆಸುತ್ತಿರುವ ವ್ಯಕ್ತಿಗಳಿಗೆ ಕೊಡವ ಸಾಂಪ್ರದಾಯಿಕ ಪದ್ಧತಿಯಲ್ಲಿ ನಡೆಸಲು ಕೊಡಗು ಏಕೀಕರಣ ರಂಗ ಕಲಿಸಿಕೊಟ್ಟಿದ್ದೆ ತಪ್ಪಾಯಿತು ಎಂದು ವಿಷಾದ ವ್ಯಕ್ತಪಡಿಸಿದರು. ನಾವಾಗಿ ಇಲ್ಲಿಯವರೆಗೆ ಯಾವುದೇ ಜಾತಿ, ಜನಾಂಗಗಳ ಸಂಪ್ರದಾಯ, ಸಂಸ್ಕೃತಿಯ ವಿರುದ್ಧ ಮಾತನಾಡಿದ ನಿದರ್ಶನಗಳಿಲ್ಲ. ಆದರೆ ಭಾಗಮಂಡಲದಲ್ಲಿ ಸಭೆ ನಡೆಸಿದ ಜನಾಂಗದ ಕೆಲವರು ಕೊಡವರ ವಿರುದ್ಧ ನೀಡಿರುವ ಯಾವುದೇ ಹೇಳಿಕೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾವೇರಿ ಕಣಿಪೂಜೆಯನ್ನು ಕೊಡವರು ಆಚರಿಸುತ್ತಿರುವಂತೆ ಈ ವರ್ಗದವರು ನಡೆಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಕಾವೇರಿ ಕೊಡವರಿಗೆ ಕುಲದೇವತೆ ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ. ದೇಶ ರಕ್ಷಕರಾಗಿರುವ ಕೊಡವರು, ಕೊಡಗಿನ ರಕ್ಷಣೆ ಮಾಡುವುದರಲ್ಲಿ ಹಿಂದೇಟು ಹಾಕುವವರಲ್ಲ. ಕೇವಲ ಈ ನಾಡಿನ ಶಾಂತಿಯುತ ಬದುಕನ್ನು ಪರಿಗಣಿಸಿ ತಾಳ್ಮೆ ವಹಿಸುತ್ತಿದ್ದೇವೆ. ನಮ್ಮ ಸಂಸ್ಕೃತಿಯ ವಿರುದ್ದ ಮಾತನಾಡಿದರೆ ಇನ್ನು ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.

1785ರಲ್ಲಿ ಟಿಪ್ಪು ವಿರುದ್ಧ ದೇವಾಟ್‍ಪರಂಬು ಹತ್ಯಾಕಾಂಡದಲ್ಲಿ ತಾವ್‍ನಾಡ್‍ನಲ್ಲಿದ್ದ ಕೊಡವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ತೆತ್ತರು. ಇದರಿಂದ ಪ್ರತಿ ಕುಟುಂಬದಲ್ಲಿ ಯುದ್ಧದಲ್ಲಿ ಪಾಲ್ಗೊಂಡಿದ್ದ ಪುರುಷರು, ಯುವಕರು ಪ್ರಾಣ ತೆತ್ತರು. ಆ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು, ವೃದ್ಧರು ಉಳಿದುಕೊಂಡರು. ಇಂತಹ ಸಂದರ್ಭ ಅಭದ್ರತೆಯಿಂದ ಸಂಬಂಧಿಕರ ಸ್ಥಳಗಳಿಗೆ ತೆರಳಿದರು. ಇಂತಹ ಸಮಯದಲ್ಲಿ ಆಗಿನ ರಾಜ ಹೊರಗಿನಿಂದ ಸಾವಿರಾರು ಎಕರೆ ಪಾಳುಬಿಟ್ಟ ಜಾಗಗಳನ್ನು ರೂಪಿತಮಾಡಲು ಹೊರಗಿನಿಂದ ಜನರನ್ನು ಕರೆತಂದು ಕೃಷಿ ಮಾಡಲು ನಿಯೋಜಿಸಿದರು. ಸಹಜವಾಗಿಯೇ ಕೆಲವರಿಗೆ ತಕ್ಕಾಮೆ ನೀಡಲಾಯಿತು ಎಂದರು.

ತಲಕಾವೇರಿಯ ಕನ್ನಿ ಕಾವೇರಿ ಟ್ರಸ್ಟಿನ ಸಂಚಾಲಕ ಮುಲ್ಲೇಂಗಡ ಶಂಕರಿ ಪೆÇನ್ನಪ್ಪ ಮಾತನಾಡಿ ತಲಕಾವೇರಿಯಲ್ಲಿ ಮೂಲ ತಕ್ಕಾಮೆ ಹೊಂದಿರುವ ಮೂರು ಕೊಡವ ಕುಟುಂಬಗಳ ಬಗ್ಗೆ ಕೊಡವರ ಧಾರ್ಮಿಕ ಹಕ್ಕು ಹಾಗೂ ಉಡುಪನ್ನು ಪ್ರಶ್ನಿಸಿರುವ ಜನಾಂಗದ ದಿ. ಹೊಸೂರು ನಾಣಯ್ಯನವರು ಈ ಹಿಂದೆಯೇ ಹೇಳಿದ್ದರು. ಈ ಮೂರು ಮೂಲ ತಕ್ಕಾಮೆಯ ಕೊಡವ ಕುಟುಂಬಕ್ಕೆ “ಪೂಕುರಿ”ಯನ್ನು ಹಿಡಿಯಲು ಹಕ್ಕು ಹೊಂದಿದ್ದು, ಅವರ ಅನುಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯ ಹಾಗೂ ಉತ್ಸವ ಅಪರಿಪೂರ್ಣ ಎಂದು ತÀನ್ನ ಗಮನಕ್ಕೆ ಬಹಳ ಹಿಂದೆಯೇ ತಂದಿದ್ದರು. ಇದರಿಂದ ಸತ್ಯವನ್ನು ಹೇಳಿದ್ದ ನಾಣಯ್ಯರವರನ್ನು ಅವರ ಜನಾಂಗದವರೇ ಬಹಿಷ್ಕಾರ ಮಾಡಿದರು. ಆದುದರಿಂದ ನಾಣಯ್ಯನವರು ಮಡಿದ ನಂತರ ಅವರ ಅಂತ್ಯಕ್ರಿಯೆ ಮತ್ತು ತಿಥಿಕರ್ಮಾಂತರವನ್ನು ತನ್ನ ನೇತೃತ್ವದಲ್ಲೆ ಕೊಡವರು ಮಾಡಿದರು ಎಂದು ನೆನಪಿಸಿದರು.

ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ ಭಾಗಮಂಡಲದಲ್ಲಿ ನಡೆದ ಸಭೆಯು ಕಿಡಿಗೇಡಿತನದ ವ್ಯಕ್ತಿಗಳು ನಡೆಸಿದ ಬೇಜವಾಬ್ದಾರಿಯುತ ಸಭೆÀ, ಇಂತಹ ವ್ಯಕ್ತಿಗಳು ಸತ್ಯದ ವಿರುದ್ಧ ನಡೆಸುತ್ತಿರುವ ಷಡ್ಯಂತ್ರರವಾಗಿದೆ. ಇದನ್ನು ನಾವೆಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ ಎಂದರು.

ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಅವರು ಮಾತನಾಡಿ ಇತ್ತೀಚಿನ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸಿ ಇದು ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಿದೆ ಎಂದರು. ಕೊಡವ ಸಮಾಜಗಳÀ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಮಾತನಾಡಿ ಮುಂದಿನ ದಿನಗಳಲ್ಲಿ ಕೊಡವರ ವಿರುದ್ಧದ ಯಾವುದೇ ಅಸಂಬದ್ದ ಹಾಗೂ ಅನಾಗರಿಕ ಹೇಳಿಕೆಯನ್ನು ನಾವೆಲ್ಲರೂ ಒಗ್ಗೂಡಿ ಖಂಡಿಸುವಂತಾಗಬೇಕೆಂದು ಆಗ್ರಹಿಸಿದರು.

ಸಭೆಯ ನಿರ್ಣಯ: ಕೊಡವರ ಅಸ್ತಿತ್ವವನ್ನು ಯಾರೂ ಪ್ರಶ್ನಿಸುವಂತಿಲ್ಲ. ಕೊಡವರ ಸಾಂಪ್ರದಾಯಿಕ ಉಡುಗೆ, ತೊಡುಗೆ ಹಾಗೂ ಸಾಂಸ್ಕೃತಿಕ ವಿಚಾರಗಳ ವಿರುದ್ಧ ಯಾರೇ ದ್ವನಿ ಎತ್ತಿದಲ್ಲಿ ಒಗ್ಗೂಡಿ ಧಿಕ್ಕರಿಸುವಂತೆ, ಕೊಡಗಿನ ಸಾಂಸ್ಕೃತಿಕ ಹಿರಿಮೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೊಡವರು ಮುಂಚೂಣಿಯಲ್ಲಿ ನಿಂತು ಸರ್ವರನ್ನು ಸಾಮರಸ್ಯದೊಂದಿಗೆ ನಡೆಸಿಕೊಂಡು ಹೋಗುವಂತೆ ನಿರ್ಣಯ ಕೈಗೊಳ್ಳಲಾಯಿತು.

ಕೊಡವರು ಎಂದರೆ, ಒಂದೇ ಜನಾಂಗ, ವಿಶ್ವಖ್ಯಾತಿ ಹೊಂದಿರುವ ಬುಡಕಟ್ಟು ಜನಾಂಗ, ಎಲ್ಲಿಯೇ ಇರಲಿ, ಯಾವ ಸ್ಥಿತಿಯಲ್ಲಿಯೇ ಇರಲಿ ಅವರದ್ದು ಒಂದು ಸಂಪ್ರದಾಯ ಹಾಗೂ ಸಂಸ್ಕೃತಿ. ಕೊಡವರ ಆಚಾರ, ವಿಚಾರವನ್ನು ವಿರೋಧಿಸುವವರು ಕಿಂಚಿತ್ತು ಬುದ್ಧಿವುಳ್ಳವರೆಂದು ತೀರ್ಮಾನಿಸಲಾಯಿತು. ಕೊಡವರ ವಿರುದ್ಧ ಷಡ್ಯಂತ್ರ ರೂಪಿಸುವವರು ಒಂದು ಪ್ರದೇಶಕ್ಕೆ ಒಂದೊಂದು ಸಂಸ್ಕೃತಿ ಹಾಗೂ ಉಡುಗೆ ತೊಡುಗೆಗಳನ್ನು ಹೊಂದಿದ್ದು ಅಂತವರಿಗೆ ಕೊಡವರನ್ನು ಪ್ರಶ್ನಿಸುವ ಹಕ್ಕು ಇರುವುದಿಲ್ಲ. ಪ್ರಶ್ನಿಸಿದರೆ ಅದಕ್ಕೆ ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ರೂಪುರೇಶೆ ಸಿದ್ಧಪಡಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ, ಮೂರ್ನಾಡು ಕೊಡವ ಸಮಾಜದ ನೆರವಂಡ ಅನೂಪ್ ಉತ್ತಯ್ಯ, ಕಂಬೀರಂಡÀ ಗೌತಮ್, ಟಿ.ಶೆಟ್ಟಿಗೇರಿ ಕೊಡವ ಸಮಾಜದ ಕೋಟ್ರಮಾಡ ಅರುಣ್ ಅಪ್ಪಣ್ಣ, ಗೋಣಿಕೊಪ್ಪಲು ಕೊಡವ ಸಮಾಜದ ಅಜ್ಜಿಕುಟ್ಟೀರ ಸಿ. ಪೂಣಚ್ಚ, ಅಮ್ಮತ್ತಿ ಕೊಡವ ಸಮಾಜದ ಮೂಕೊಂಡ ಬೋಸ್ ದೇವಯ್ಯ, ನೆರವಂಡ ರಘು, ಪುಚ್ಚಿಮಾಡ ಅಪ್ಪಯ್ಯ, ಚೇರಂಬಾಣೆ ಕೊಡವ ಸಮಾಜದ ಬಾZರಣಿಯಂಡ ಗಣಪತಿ, ಬಿರುನಾಣಿ ಮರೆನಾಡು ಕೊಡವ ಸಮಾಜದ ಕಾಯಪಂಡ ಸುನೀಲ್, ಮಕ್ಕಂದೂರು ಕೊಡವ ಸಮಾಜದ ಹಂಚೆಟ್ಟೀರ ಮುದ್ದಪ್ಪ ಮತ್ತಿತರು ಮುಖಂಡರು ಹಾಜರಿದ್ದರು.