ಗೋಣಿಕೊಪ್ಪಲು, ಅ. 2 : ಜಿಲ್ಲೆಯ ಹಿರಿಯ ಮುತ್ಸದ್ದಿ, ಅಜಾತಶತ್ರು, ಕೊಡುಗೈ ದಾನಿ ಭಾರತೀಯ ಜನತಾ ಪಕ್ಷದ ಭೀಷ್ಮ ದಿವಂಗತ ಎಂ. ಡಬ್ಲ್ಯು ಅಯ್ಯಪ್ಪ ಅವರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ನಗರದ ಖಾಸಗಿ ಹೋಟೆಲ್‍ನಲ್ಲಿ ಸಂಘ ಪರಿವಾರ ದಿಂದ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಅಭಿಮಾನಿಗಳು ಭಾಗವಹಿಸಿದ್ದರು.
ಆರ್.ಎಸ್.ಎಸ್.ನ ಜಿಲ್ಲಾ ಸಂಘಚಾಲಕ ಚಕ್ಕೆರ ಮನು ಕಾವೇರಪ್ಪ ಮಾತನಾಡಿ, ಅಯ್ಯಪ್ಪ ಅವರು ತಂದೆ ಸ್ಥಾನದಲ್ಲಿ ನಿಂತು ಮಾರ್ಗದರ್ಶನ ನೀಡುತ್ತಿದ್ದರು, ಯಾವುದೇ ಫಲಾಪೇಕ್ಷೆಯಿಲ್ಲದೆ ಸಂಘ ಹಾಗೂ ಪಕ್ಷಕ್ಕೆ ದುಡಿದ ಪರಿಣಾಮ ಜಿಲ್ಲೆಯಲ್ಲಿ ಸಂಘಟನೆ ಭದ್ರಕೋಟೆ ಆಗಿದೆ. ಅವರು ಶಿಸ್ತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದರು ಎಂದರು.
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕ್ಷೇತ್ರೀಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಕಾರಂತ್ ಮಾತನಾಡಿ ನಮ್ಮೆಲ್ಲರ ಪ್ರೇರಕ ಶಕ್ತಿಯಾಗಿದ್ದ ಅಯ್ಯಪ್ಪ ಅವರನ್ನು ಕಳೆದುಕೊಂಡಿರುವುದು ದುಃಖಕರ ಸಂಗತಿ, ಪರಿಪೂರ್ಣ ವ್ಯಕ್ತಿತ್ವ ಹೊಂದಿದ್ದ ಅವರು ಸಂಘದ ನೆಲೆಗಟ್ಟಿನಲ್ಲಿ ಸಾಮಾಜಿಕ ಕಾರ್ಯಗಳಿಗೆ ತಮ್ಮನ್ನು ತೊಡಗಿಸುವ ಮೂಲಕ ಬೇರೆಯವರಿಗೆ ಮಾದರಿಯಾಗಿದ್ದರು. ಎಪ್ಪತ್ತರ ದಶಕದಲ್ಲಿ ಸಂಘ ಹಾಗೂ ಪಕ್ಷಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ್ದರು. ಅವರ ಆದರ್ಶಗಳನ್ನು ಪಾಲಿಸುವ ಮೂಲಕ ಅಗಲಿದ ಆತ್ಮಕ್ಕೆ ಶಾಂತಿಯನ್ನು ಬಯಸೋಣ ಎಂದರು.
ಹಿರಿಯರಾದ ಮಚ್ಚಾರಂಡ ಮಣಿ.ನೆಲ್ಲಮಕ್ಕಡ ಶಂಭು ಅವರುಗಳು ಅಯ್ಯಪ್ಪ ಅವರೊಂದಿಗಿನ ಹಳೆಯ ನೆನಪುಗಳನ್ನು ಹಂಚಿಕೊಂಡರು,
ಕಾರ್ಯಕ್ರಮದಲ್ಲಿ ಎಂಎಲ್ಸಿ ಸುನಿಲ್ ಸುಬ್ರಮಣಿ. ಜಿಲ್ಲಾ ಭಾಜಪ ಅಧ್ಯಕ್ಷ ರಾಬಿನ್ ದೇವಯ್ಯ, ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಮಾಜಿ ಎಂಎಲ್ಸಿ ಎಸ್.ಜಿ. ಮೇದಪ್ಪ, ಜಿ.ಪಂ. ಹಾಗೂ ತಾ.ಪಂ. ಸದಸ್ಯರುಗಳು, ಜಿಲ್ಲಾ ಭಾಜಪದ ಮಾಜಿ ಅಧ್ಯಕ್ಷರುಗಳಾದ ಮಂಡೇಪಂಡ ಸುಜಾಕುಶಾಲಪ್ಪ, ಮಾಚಿಮಾಡ ರವೀಂದ್ರ, ಆರ್.ಎಂ.ಸಿ. ಪದಾಧಿಕಾರಿಗಳು, ಅಕ್ರಮ ಸಕ್ರಮ ಅಧ್ಯಕ್ಷ ಗಿರೀಶ್ ಗಣಪತಿ, ಭಾಜಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ಖಜಾಂಚಿ ಮಾಚಯ್ಯ, ತಾಲೂಕು ಭಾಜಪ ಮಹಿಳಾ ಮೋರ್ಚಾ ಅಧ್ಯಕ್ಷ ಕವಿತಾ, ಹಿಂದು ಜಾಗರಣ ವೇದಿಕೆಯ ಜೀವನ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು,
ಆರಂಭದಲ್ಲಿ ಡಾ ಶಿವಪ್ಪ ಹಾಗೂ ಸುಮಿ ಸುಬ್ಬಯ್ಯ ತಂಡದಿಂದ ಭಜನೆ ಕಾರ್ಯಕ್ರಮ ನಡೆಯಿತು.
ಸೇವಾಭಾರತಿ ಅಧ್ಯಕ್ಷ ಚಂದ್ರನ್ ಕಾರ್ಯಕ್ರಮ ನಿರೂಪಿಸಿದರು.