ಕಣಿವೆ, ಅ.1 : ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಗುರುವಾರ ಮುಳ್ಳುಸೋಗೆ ಗ್ರಾ.ಪಂ.ಗೆ ಭೇಟಿ ನೀಡಿದ್ದರು. ಪಂಚಾಯತಿ ವತಿಯಿಂದ ಗುಮ್ಮನಕೊಲ್ಲಿ ಗ್ರಾಮದಲ್ಲಿ ಅಳವಡಿಸಿರುವ ಗ್ರಾಮ ತ್ಯಾಜ್ಯ ಸಂಪನ್ಮೂಲ ಘಟಕವನ್ನು ಪರಿಶೀಲನೆ ನಡೆಸಿದ ಅವರು, ಘನ ತ್ಯಾಜ್ಯಗಳ ನಿರ್ವಹಣೆ ಬಗ್ಗೆ ಸಂಬಂಧಿಸಿದ ಸಿಬ್ಬಂದಿಗಳಿಂದ ಮಾಹಿತಿ ಪಡೆದು ಕೊಂಡರು.

ಬಳಿಕ ಸ್ಥಳದಲ್ಲಿದ್ದ ಪಂಚಾಯಿತಿ ರಾಜ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಸಿಇಒ ಮೀನಾ, ಗ್ರಾಮಗಳಲ್ಲಿ ಕಸ ತ್ಯಾಜ್ಯ ಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಗಾಂಧೀಜಿಯವರ ಸ್ವಚ್ಛ ಗ್ರಾಮ ಪರಿಕಲ್ಪನೆಯನ್ನು ನನಸು ಮಾಡಲು ಪಣ ತೊಡಬೇಕಿದೆ. ಗ್ರಾಮ ನಿವಾಸಿಗಳಲ್ಲಿ ಕಸದ ನಿರ್ವಹಣೆಯ ಕುರಿತು ಅರಿವು ಮೂಡಿಸಲು ಗ್ರಾಮ ಗ್ರಾಮಗಳಲ್ಲಿ ಆಯ್ದ ಸ್ಥಳಗಳಲ್ಲಿ ಸ್ವಚ್ಛ ಗ್ರಾಮ ಪರಿಕಲ್ಪನೆಯ, ಒಣ ಕಸ ಮತ್ತು ಹಸಿ ಕಸವನ್ನು ಮನೆಯಿಂದಲೇ ಬೇರ್ಪಡಿಸುವ ಕುರಿತಾದ ಮಾಹಿತಿಯ ಬೋರ್ಡ್ ಗಳನ್ನು ಅಳವಡಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಲು ನಿರ್ದೇಶನ ನೀಡಿದರು. ಈ ಸಂದರ್ಭ ಸೋಮವಾರಪೇಟೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಬಿ.ವಿ.ಜಯಣ್ಣ, ಸ್ವಚ್ಛ ಗ್ರಾಮ ಯೋಜನೆಯ ಪ್ರಮುಖರಾದ ಪೆಮ್ಮಯ್ಯ, ರಾಜೇಶ್, ಸೂರಜ್, ಮುಳ್ಳುಸೋಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಂ.ಎಸ್. ರಾಜಶೇಖರ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎಸ್. ಶಿವಾನಂದ ಇದ್ದರು.