ಮಡಿಕೇರಿ, ಸೆ. 30: ಐತಿಹಾಸಿಕ ರಾಜರ ಗದ್ದುಗೆಯಲ್ಲಿ ಜಾಗ ಒತ್ತುವರಿಯಾಗಿದೆ ಎಂಬುದಾಗಿ ಈ ಹಿಂದೆ ರಾಜ್ಯ ಉಚ್ಚನ್ಯಾಯಾಲಯದಲ್ಲಿ ವೀರಶೈವ ಸಮಾಜದ ಜಿಲ್ಲಾಧ್ಯಕ್ಷರಾಗಿದ್ದ ದಿ. ಎಸ್.ಪಿ. ಮಹದೇವಪ್ಪ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ, ಒತ್ತುವರಿ ಸರ್ವೆ ಮಾಡಿ ವರದಿ ನೀಡುವಂತೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಇಂದು ನಿಗದಿಯಾಗಿದ್ದ ಸರ್ವೆ ಕಾರ್ಯ ಮುಂದೂಡಲ್ಪಟ್ಟಿದೆ.ನ್ಯಾಯಾಲಯ ಸರ್ವೆ ನಡೆಸುವಂತೆ ಆದೇಶ ನೀಡಿ ಹಲವು ವರ್ಷಗಳೇ ಕಳೆದಿದ್ದು, ಕೂಡಲೇ ಈ ಕಾರ್ಯ ಕೈಗೊಳ್ಳುವಂತೆ ಇತ್ತೀಚೆಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದ ವೀರಶೈವ ಸಮಾಜ ಹಾಗೂ ಶರಣ ಸಾಹಿತ್ಯ ಪರಿಷತ್ ಪ್ರಮುಖರು ಇಂದು ಗದ್ದುಗೆಗೆ ಆಗಮಿಸಿದ್ದರು. ಈ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಶಿವಪ್ಪ ಅವರು ನ್ಯಾಯಾಲಯದ ಆದೇಶದಂತೆ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸುವ ಮೂಲಕ ಗದ್ದುಗೆಯನ್ನು ಸಂರಕ್ಷಿಸಿಕೊಳ್ಳುವತ್ತ ಸಂಬಂಧಿಸಿದ ಇಲಾಖೆ ಗಮನಹರಿಸ ಬೇಕೆಂದು ಒತ್ತಾಯಿಸಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಹೇಶ್ ಮಾತನಾಡಿ, ನ್ಯಾಯಾಲಯ ಆದೇಶ ನೀಡಿ ಹಲವು ವರುಷಗಳೇ ಕಳೆದರೂ ಇದುವರೆಗೂ ಸರ್ವೆ ಕಾರ್ಯವಾಗಲಿ, ಒತ್ತುವರಿ ತೆರವು ಕಾರ್ಯವಾಗಲಿ ನಡೆದಿಲ್ಲ. ಕೂಡಲೇ ಜಿಲ್ಲಾಡಳಿತ ನ್ಯಾಯಾಲಯದ ಆದೇಶ ಪಾಲನೆಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಸರ್ವೆ ಕಾರ್ಯ ಮುಂದಕ್ಕೆ: ನ್ಯಾಯಾಲಯದ ಆದೇಶದಂತೆ ಇಂದು ತಹಶೀಲ್ದಾರ್ ಮಹೇಶ್ ನೇತೃತ್ವದಲ್ಲಿ ಸರ್ವೆಗೆ ಮುಂದಾದ ಸಂದರ್ಭ ಆಕ್ಷೇಪ ವ್ಯಕ್ತಪಡಿಸಿದ ವಕೀಲ ವಿದ್ಯಾಧರ್ ಅವರು, ಈ ಭಾಗದ ಸುಮಾರು 27 ಮಂದಿ ಗದ್ದುಗೆ ಜಾಗದಲ್ಲಿ ಸುಮಾರು ಒಂದೂವರೆ ಎಕ್ರೆಯಷ್ಟು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ. ಅದರಂತೆ ನ್ಯಾಯಾಲಯ ಆದೇಶ ವೊಂದನ್ನು ನೀಡಿದ್ದು, ಅದರನ್ವಯ ಈಗಾಗಲೇ ಒತ್ತುವರಿಯಾಗಿರುವ ಜಾಗದಿಂದ ಗದ್ದುಗೆಗೆ ಏನಾದರೂ ತೊಂದರೆ ಇದೆಯೆ ಎಂಬ ಬಗ್ಗೆ ಪರಿಶೀಲಿಸಬೇಕು; (ಮೊದಲ ಪುಟದಿಂದ) ತೊಂದರೆ ಇಲ್ಲವೆಂದಾದರೆ ಆ ಜಾಗವನ್ನು ಒತ್ತುವರಿದಾರರಿಗೆ ನೀಡುವ ಬಗ್ಗೆ ಪರಿಶೀಲಿಸಬೇಕು. ಒಂದು ವೇಳೆ ತೊಂದರೆ ಇದೆ ಎಂಬುದಾದರೆ ಗದ್ದುಗೆಗೆ ಸೇರಿರುವ ಸುಮಾರು 19.88 ಎಕ್ರೆ ಜಾಗದಲ್ಲಿಯೇ ಒತ್ತುವರಿದಾರರಿಗೆ ಜಾಗ ನೀಡಬೇಕು. ಇದೂ ಆಗದಿದ್ದಲ್ಲಿ, ಪರ್ಯಾಯ ಜಾಗವನ್ನು ಒದಗಿಸಿಕೊಡಬೇಕೆಂಬ ಸೂಚನೆ ನೀಡಿದೆ. ಇದು ಪಾಲನೆ ಆಗಬೇಕು ಎಂದರು. ಇಂದು ಕೈಗೆತ್ತಿಕೊಂಡಿರುವ ಸರ್ವೆ ಸಂಬಂಧ ಒತ್ತುವರಿದಾರರಿಗೆ ಯಾವುದೇ ನೋಟೀಸ್ ನೀಡಿಲ್ಲ. ಸರ್ವೆ ನಿಯಮ ಪಾಲನೆ ಆಗಿಲ್ಲ ಮಾತ್ರವಲ್ಲದೆ, ಕೇವಲ ದೂರಿನಲ್ಲಿ ಪ್ರಸ್ತಾಪಿಸಿರುವ ನನ್ನ ಕಕ್ಷಿದಾರರ ಜಾಗವನ್ನು ಮಾತ್ರ ಸರ್ವೆ ಮಾಡುವದಕ್ಕೆ ತನ್ನ ಆಕ್ಷೇಪವಿದೆ. ಸರ್ವೆ ನಡೆಸುವದಾದರೆ ಗದ್ದುಗೆಗೆ ಸೇರಿದ ಸುಮಾರು 19.88 ಎಕ್ರೆ ಜಾಗವನ್ನು ಕೂಡ ಸರ್ವೆ ಮಾಡಬೇಕು. ಆ ಮೂಲಕ ಗಡಿ ಗುರುತು ಮಾಡಿ ಆಗಿರುವ ಎಲ್ಲಾ ಒತ್ತುವರಿಗಳನ್ನು ಪತ್ತೆಹಚ್ಚಿ ನ್ಯಾಯಾಲಯಕ್ಕೆ ವರದಿ ನೀಡಬೇಕು ಎಂದು ಒತ್ತಾಯಿಸಿದರು. ಸ್ಥಳೀಯ ಪ್ರಮುಖರು ಕೂಡ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು. ಈ ಕುರಿತು ತಹಶೀಲ್ದಾರ್ ಹಾಗೂ ಸರ್ವೆ ಅಧಿಕಾರಿಗಳೊಂದಿಗೆ ಕೆಲಕಾಲ ಚರ್ಚೆ ನಡೆದು, ಗದ್ದುಗೆ ಜಾಗದ ಸಮಗ್ರ ಸರ್ವೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳುವುದಾಗಿ ತಹಶೀಲ್ದಾರ್ ಮಹೇಶ್ ಹೇಳಿದರು. ಆ ಮೂಲಕ ಇಂದು ನಡೆಯಬೇಕಿದ್ದ ಸರ್ವೆ ಮುಂದೂಡಲ್ಪಟ್ಟಿತ್ತು. ವೀರಶೈವ ಸಮಾಜ ಹಾಗೂ ಶರಣ ಸಾಹಿತ್ಯ ಪರಿಷತ್ ಮುಖಂಡರು ಕೂಡ ಸಮಗ್ರ ಸರ್ವೆಗೆ ಸಮ್ಮತಿ ಸೂಚಿಸಿದರು.

ಈ ಸಂದರ್ಭ ಕಲ್ಲುಮಠದ ಮಹಾಂತ ಸ್ವಾಮೀಜಿ, ವೀರಶೈವ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಕಾಂತರಾಜ್, ಸುರೇಶ್, ಖಜಾಂಚಿ ಉದಯಕುಮಾರ್, ಮಾಜಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಶಾಂಭಶಿವಮೂರ್ತಿ, ಎಸ್.ಡಿ.ಪಿ.ಐ. ಪ್ರಮುಖ ಅಮೀನ್ ಮೊಯ್ಸಿನ್ ಮನ್ಸೂರ್, ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.