ಸೋಮವಾರಪೇಟೆ,ಅ.1: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿ ಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮಡಿಕೇರಿ ಹಾಗೂ ವೀರಾಜಪೇಟೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಗಾರರ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆದಿದ್ದ ಸಂದರ್ಭ ಸೋಮವಾರಪೇಟೆಯಲ್ಲಿ ಗಾಂಜಾ ಮಾರಾಟಗಾರರ ವಿರುದ್ಧ ಪೊಲೀಸರು ಯಾವದೇ ಕ್ರಮ ಜರುಗಿಸದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯ ಮೂಡಿತ್ತು.
ಸ್ಥಳೀಯ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರೂ ಕೇಸ್ ಮಾಡುವಷ್ಟು ಗಾಂಜಾ ದೊರೆಯದ ಹಿನ್ನೆಲೆ ಬಿಟ್ಟು ಕಳುಹಿಸಿದ್ದರು.
ಇದೀಗ ಸೋಮವಾರಪೇಟೆ ಯಲ್ಲಿ ಗಾಂಜಾ ಪೆಡ್ಲಿಂಗ್ ಮಾಡುತ್ತಿದ್ದ ಹಾನಗಲ್ಲು ಬಾಣೆ ಗ್ರಾಮದ ಯುವಕನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು, ಆತ ನೀಡಿದ ಮಾಹಿತಿ ಮೇರೆ ಕುಶಾಲನಗರದ ಯುವಕನನ್ನೂ ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಆರೋಪಿ ಯುವಕರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದ್ದು, ಇವರುಗಳಿಗೆ ಎಲ್ಲಿಂದ ಗಾಂಜಾ ಸರಬರಾಜಾಗುತ್ತಿತ್ತು ಎಂಬ ಮೂಲ ಕೆದಕಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆಯಿಂದ ಈವರೆಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಅನೇಕ ಯುವಕರು ಗಾಂಜಾ ವ್ಯಸನಕ್ಕೆ ಬಲಿಯಾಗಿದ್ದು, ಅಕ್ರಮ ಚಟುವಟಿಕೆ ಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಸೋಮವಾರಪೇಟೆ ಪಟ್ಟಣ, ಹಾನಗಲ್ಲು ಗ್ರಾಮದ ಕ್ರಿಶ್ಚಿಯನ್ ಸ್ಮಶಾನ, ಹಾನಗಲ್ಲುಬಾಣೆ, ಕಾನ್ವೆಂಟ್‍ಬಾಣೆ, ಕರ್ಕಳ್ಳಿ, ಜೂನಿಯರ್‍ಕಾಲೇಜು ಆವರಣ, ಬಜೆಗುಂಡಿ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ನಿರಂತರವಾಗಿದೆ ಎಂದು ಸಾರ್ವಜನಿಕರು ಪತ್ರಿಕೆಯೊಂದಿಗೆ ದೂರಿದ್ದಾರೆ.
ಗಾಂಜಾ ಸೇವಿಸುವ ಯುವಕರು ಅಡ್ಡಾದಿಡ್ಡಿ ಬೈಕ್ ಓಡಿಸುವದು, ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆ ನೀಡುವದು, ಪ್ರಶ್ನಿಸಿದರೆ ಹಲ್ಲೆ ನಡೆಸುವದು ಮಾಮೂಲಿ ಯಂತಾಗಿದೆ.
ಗಾಂಜಾ ಸೇವಿಸುವ ತಮ್ಮ ಮಕ್ಕಳನ್ನು ಪ್ರಶ್ನಿಸುವ ಪೋಷಕರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ನಡೆಯುತ್ತಿದ್ದು, ಮರ್ಯಾದೆಗೆ ಅಂಜಿ ಹಲವರು ಪೊಲೀಸರಿಗೆ ದೂರು ನೀಡುತ್ತಿಲ್ಲ ಎನ್ನಲಾಗಿದೆ. ಪೊಲೀಸರ ಕಣ್ತಪ್ಪಿಸಿ ನಡೆಯುತ್ತಿರುವ ಅಕ್ರಮಕ್ಕೆ ಇನ್ನಾದರೂ ಇಲಾಖೆ ಬ್ರೇಕ್ ಹಾಕಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.