ಮಡಿಕೇರಿ, ಅ. 1: ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಕೇಂದ್ರ ಸರ್ಕಾರದ ‘‘ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ಡಿಸ್ಟ್ರಿಕ್ಟ್ ಸ್ಕಿಲ್ ಡೆವಲಪ್‍ಮೆಂಟ್ ಪ್ಲಾನಿಂಗ್ 2020-21’’ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಜಿಲ್ಲಾ ಕೌಶಲ್ಯ ಮಿಷನ್ ಸಭೆಯು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಮಾತನಾಡಿ ಕೌಶಲ್ಯ ತರಬೇತಿಗಳನ್ನು ಆಯೋಜಿಸುವ ತರಬೇತಿ ಸಂಸ್ಥೆಗಳು ನಿಯಮಾನುಸಾರ ಕೌಶಲ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಂಡು ತರಬೇತಿ ಪ್ರಾರಂಭಿಸಬೇಕು ಎಂದರು.
ಕೂಡಿಗೆ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಡಾ.ಜಿ.ಎಸ್.ಸುರೇಶ್ ಮಾತನಾಡಿ ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ಆಯೋಜಿಸಲಾಗುವ ತರಬೇತಿ ಕಾರ್ಯಕ್ರಮಗಳನ್ನು ನಮ್ಮ ತರಬೇತಿ ಸಂಸ್ಥೆಯ ಮೂಲಕ ಅನುಷ್ಠಾನಗೊಳಿಸಲು ಸಮರ್ಥರಿರುವುದಾಗಿ ತಿಳಿಸಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಎಂ.ಉಮಾ ಜೇನು ಕೃಷಿ, ಅಣಬೆ ಬೇಸಾಯ, ಜಿ.ಎಸ್.ಟಿ ಹಾಗೂ ಡಾಟಾ ಎಂಟ್ರಿ ತರಬೇತಿಯ ಜೊತೆಗೆ ಹೊಸದಾಗಿ ಪ್ರಾರಂಭಿಸಬಹುದಾದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಡಾ.ರೂಪ ಎಚ್.ಜೆ, ಎಂ.ಜಿ.ಎನ್.ಎಫ್ ಸಂಶೋಧನಾರ್ಥಿ ವೀರೇಶ್ ಅಲ್ಲದ್ ಇತರರು ಇದ್ದರು.