ಸೋಮವಾರಪೇಟೆ, ಅ.1: ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ಕಾವೇರಿ ತೀರ್ಥೋದ್ಭವದ ದಿನವಾದ ತಾ. 17ರಂದು ಸೋಮವಾರಪೇಟೆಯಲ್ಲಿ ಪವಿತ್ರ ಕಾವೇರಿ ತೀರ್ಥ ವಿತರಣೆ ಮಾಡಲಾಗುವದು ಎಂದು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 17ರಂದು ಅಪರಾಹ್ನ 3.30ಕ್ಕೆ ಪಟ್ಟಣದ ಕಾವೇರಿ ಪ್ರತಿಮೆಗೆ ಹರಪಳ್ಳಿ ರವೀಂದ್ರ ಅವರು ವಿಶೇಷ ಪೂಜೆ ಸಲ್ಲಿಸಲಿದ್ದು, 4 ಗಂಟೆಯಿಂದ ಜೇಸೀ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಸಿ, ಸಾರ್ವಜನಿಕರಿಗೆ ಕಾವೇರಿ ತೀರ್ಥ ವಿತರಿಸಲಾಗುವದು ಎಂದರು.

ಇತ್ತೀಚಿನ ದಿನಗಳಲ್ಲಿ ತಲಕಾವೇರಿ ಬಗ್ಗೆ ಅನೇಕ ಸಂಘಟನೆಗಳು ಗೊಂದಲದ ಹೇಳಿಕೆಗಳನ್ನು ನೀಡುತ್ತಿರುವದು ಶೋಚನೀಯ. ಕಾವೇರಿ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗದೆ, ಕೊಡಗು ಜಿಲ್ಲೆಯ ಅಧಿದೇವತೆ ಯಾಗಿದ್ದಾಳೆ. ಈ ಹಿಂದೆ ಇದ್ದಂತಹ ಪದ್ಧತಿಯೇ ಕ್ಷೇತ್ರದಲ್ಲಿ ಮುಂದುವರೆಯಲಿ. ಸರ್ವ ಜನಾಂಗದ ಮಂದಿ ಕಾವೇರಿ ತಾಯಿಯ ಬಗ್ಗೆ ಭಕ್ತಿ ಹೊಂದಿದ್ದು, ಸರ್ವ ಜನಾಂಗಕ್ಕೂ ಒಳಿತಾಗುವ ದೃಷ್ಟಿಯಿಂದ ಕ್ಷೇತ್ರವನ್ನು ನಿರ್ವಹಿಸಿಕೊಂಡು ಹೋಗಬೇಕು ಎಂದು ನಾಗರಾಜ್ ಅಭಿಪ್ರಾಯಿಸಿದರು.

ಪವಿತ್ರ ತಲಕಾವೇರಿ ಕ್ಷೇತ್ರವನ್ನು ಪುಣ್ಯ ಕ್ಷೇತ್ರವಾಗಿಯೇ ಉಳಿಸಿ ಕೊಳ್ಳಬೇಕು. ಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಿನಲ್ಲಿ ಮೋಜು ಮಸ್ತಿಯ ತಾಣವನ್ನಾಗಿ ಮಾಡ ಬಾರದು. ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಕೆ. ಆನಂದ್, ಕಾರ್ಯದರ್ಶಿ ಹೆಚ್.ಬಿ. ರಾಜಪ್ಪ, ಸದಸ್ಯ ಹರೀಶ್ ಉಪಸ್ಥಿತರಿದ್ದರು.