ಕುಶಾಲನಗರ, ಸೆ. 28 : ಕುಶಾಲನಗರ ವ್ಯಾಪ್ತಿಯಲ್ಲಿ ಸರಕಾರಿ ಕಾಮಗಾರಿ ಯೋಜನೆಗಳು ಪೂರ್ಣ ಗೊಳ್ಳದೆ ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬಿದ್ದಿರುವ ಪ್ರಕರಣಗಳು ಹೇರಳವಾಗಿ ಕಾಣಬಹುದು. ಈ ಮೂಲಕ ಸರಕಾರದ ನಿಗದಿತ ಉದ್ದೇಶ ಈಡೇರದೆ ಫಲಾನುಭವಿ ಗಳು ಸೌಲಭ್ಯ ವಂಚಿತರಾಗಬೇಕಾದ ಪ್ರಮೇಯ ಸೃಷ್ಠಿಯಾಗಿದೆ.

ಕುಶಾಲನಗರ ಸಮೀಪ ಮಾದಾಪಟ್ಟಣ ಬಳಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾರಂಭವಾಗಿ 10 ವರ್ಷ ಕಳೆದರೂ ವಿದ್ಯಾರ್ಥಿಗಳ ವಸತಿನಿಲಯ ನಿರ್ಮಾಣ ಮಾತ್ರ ಕಳೆದ 4 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕಾಲೇಜು ಆವರಣದಲ್ಲಿ ನಿರ್ಮಾಣವಾಗುತ್ತಿರುವ ಎರಡು ಕಟ್ಟಡಗಳು ಇನ್ನೂ ಪೂರ್ಣಗೊಳ್ಳದೆ ಕಾಡು ಪಾಲಾಗುತ್ತಿರುವುದು ಕಾಣಬಹುದು. ಕಾಲೇಜಿನಲ್ಲಿ ಸುಮಾರು 950 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇದರಲ್ಲಿ ಶೇ.50 ರಷ್ಟು ವಿದ್ಯಾರ್ಥಿನಿಯರು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಉನ್ನತ ಶಿಕ್ಷಣ ಪಡೆಯಲು ಕುಶಾಲನಗರ ಅಲ್ಲದೆ ಹೊರ ಭಾಗಗಳಿಂದಲೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದು ಅವರುಗಳಿಗೆ ಉಳಿದುಕೊಳ್ಳಲು ಹಾಸ್ಟೆಲ್ ಸೌಲಭ್ಯ ಇಲ್ಲದೆ ಪರದಾಡುವ ಪರಿಸ್ಥಿತಿ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಸುಮಾರು 80 ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 150ಕ್ಕೂ ಅಧಿಕ ಮಂದಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಸರಕಾರ ಸುಮಾರು 3 ಕೋಟಿ ರೂ. ಗಳ ವೆಚ್ಚದಲ್ಲಿ ಎರಡು ವಸತಿ ನಿಲಯ ನಿರ್ಮಾಣ ಯೋಜನೆ ರೂಪಿಸಿದೆ. ಸರಕಾರದ ಅಧೀನದಲ್ಲಿರುವ ಲ್ಯಾಂಡ್ ಆರ್ಮಿ ಮೂಲಕ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಇನ್ನೂ ಪೂರ್ಣಗೊಂಡಿಲ್ಲ. ಸರಕಾರದಿಂದ ಅನುದಾನ ಬಿಡುಗಡೆ ಕೊರತೆ ಇದಕ್ಕೆ ಕಾರಣ ಎನ್ನುವುದು ಸ್ಥಳೀಯರ ಮಾತಾಗಿದೆ.

ಪುರುಷರ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿ ಕಳೆದ ನಾಲ್ಕೈದು ವರ್ಷಗಳಿಂದ ನಡೆಯುತ್ತಿದ್ದು ಇದು ಬಹುತೇಕ ಕಾಡುಪಾಲಾದ ದೃಶ್ಯ ಕಾಣಬಹುದು. ಪಕ್ಕದಲ್ಲಿಯೇ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ಕಟ್ಟಡ ನಿರ್ಮಾಣ ಪ್ರಾರಂಭಗೊಂಡು ಕೆಲವು ವರ್ಷಗಳು ಕಳೆದಿವೆ. ಆದಷ್ಟು ಬೇಗ ಕಾಮಗಾರಿ ಮುಗಿದಲ್ಲಿ ವಿದ್ಯಾರ್ಥಿ ಗಳಿಗೆ ಅನುಕೂಲ ಕಲ್ಪಿಸಿದಂತಾಗು ತ್ತದೆ ಎನ್ನುವುದು ಸರಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ವೆಂಕಟೇಶ್ ಬೆಮ್ಮತ್ತಿ ಅವರ ಪ್ರತಿಕ್ರಿಯೆಯಾಗಿದೆ.

ಇದೇ ರೀತಿ ಸಮೀಪದಲ್ಲಿರುವ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಅಂದಾಜು 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹಾಸ್ಟೆಲ್ ಕಟ್ಟಡದ ಕಾಮಗಾರಿ ಕೂಡ ಅರ್ಧಕ್ಕೆ ನಿಂತಿದೆ. ಸರಕಾರದ ಅನುದಾನದ ಕೊರತೆಯೇ ಇದಕ್ಕೂ ಕಾರಣ ಎನ್ನಲಾಗಿದೆ. ಆದಷ್ಟು ಬೇಗನೆ ಈ ಕಾಮಗಾರಿ ಪೂರ್ಣ ಗೊಳಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗ ಬೇಕಿದೆ ಎನ್ನುವುದು ವಿದ್ಯಾರ್ಥಿಗಳ ಪೋಷಕರ ಆಗ್ರಹವಾಗಿದೆ.

-ಚಂದ್ರಮೋಹನ್