ಸೋಮವಾರಪೇಟೆ,ಸೆ.26: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ರೈತ-ಕಾರ್ಮಿಕ ಸಂಘಟನೆಗಳು ಸೇರಿದಂತೆ ಬಿಜೆಪಿಯೇತರ ಪಕ್ಷಗಳು ಕರೆ ನೀಡಿರುವ ತಾ. 28ರ ಬಂದ್ಗೆ ಸೋಮವಾರಪೇಟೆ ಬಂದ್ ಆಗುತ್ತೋ..,ಇಲ್ವೋ? ಎಂಬ ಜಿಜ್ಞಾಸೆ ಸಾರ್ವಜನಿಕರು ಸೇರಿದಂತೆ ವರ್ತಕ ಸಮುದಾಯದಲ್ಲಿ ಮೂಡಿದೆ.
ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ರೈತಾಪಿ ವರ್ಗದ ಮೇಲೆ ಬರೆ ಎಳೆಯುತ್ತಿದೆ. ಎಪಿಎಂಸಿ ಸೇರಿದಂತೆ ಇತರ ರೈತ ವಿರೋಧಿ ಕಾಯ್ದೆಗಳನ್ನು ತಕ್ಷಣ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ರೈತಪರ ಸಂಘಟನೆಗಳು ತಾ. 28ರಂದು ಬಂದ್ಗೆ ಕರೆ ನೀಡಿವೆ. ಈ ಬಂದ್ ಕರೆಗೆ ಜಿಲ್ಲೆಯಲ್ಲೂ ವಿರೋಧ ಪಕ್ಷಗಳು ಬೆಂಬಲ ಸೂಚಿಸಿದ್ದು, ವರ್ತಕ ಸಮುದಾಯ ಬಂದ್ಗೆ ಸಹಕರಿಸಬೇಕೆಂದು ಮನವಿ ಮಾಡಿವೆ.
ಇಂತಹ ಸನ್ನಿವೇಶದಲ್ಲಿ ಸೋಮವಾರಪೇಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸೋಮವಾರ ಬಂದ್ ನಡೆಯುತ್ತದೆಯೇ? ರೈತ ಸಂಘ ಹಾಗೂ ವಿರೋಧ ಪಕ್ಷಗಳ ಬಂದ್ ಕರೆಗೆ ಬೆಂಬಲ ಸಿಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಈ ಬಗ್ಗೆ ಸೋಮವಾರಪೇಟೆ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಮನುಕುಮಾರ್ ರೈ ಪ್ರತಿಕ್ರಿಯೆ ನೀಡಿದ್ದು, ಸೋಮವಾರದಂದು ಸೋಮವಾರಪೇಟೆಯಲ್ಲಿ ವಾರದ ಸಂತೆ ನಡೆಯುತ್ತದೆ. ಗ್ರಾಮೀಣ ಪ್ರದೇಶದ ಮಂದಿ ಪಟ್ಟಣಕ್ಕೆ ಆಗಮಿಸಿ ವ್ಯಾಪಾರ ವಹಿವಾಟಿನಲ್ಲಿ ತೊಡಗುತ್ತಾರೆ. ವರ್ತಕರೂ ಸಹ ಸಂತೆ ದಿನ ಒಂದಿಷ್ಟು ಹೆಚ್ಚಿನ ವ್ಯಾಪಾರ ಮಾಡುತ್ತಾರೆ. ಈಗಾಗಲೇ ಕೊರೊನಾ ಲಾಕ್ಡೌನ್ ಸಂದರ್ಭ ಭಾರೀ ನಷ್ಟ ಅನುಭವಿಸಿರುವ ವರ್ತಕರು, ವಾರದ ಸಂತೆ ದಿನ ಬಂದ್ ಮಾಡಿದರೆ ಇನ್ನಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿದ್ದು, ಚೇಂಬರ್ನಿಂದ ಬಂದ್ಗೆ ಯಾವದೇ ಬೆಂಬಲ ಇಲ್ಲ ಎಂದು ತಿಳಿಸಿದ್ದಾರೆ.
ಕೊರೊನಾ ಮಹಾಮಾರಿಯಿಂದಾಗಿ ಈಗಾಗಲೇ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಸಹ ಕೊರೊನಾ ನಿಗ್ರಹ, ರೋಗಿಗಳ ಆರೈಕೆ, ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ನಡುವೆ ದೇಶದ ಅನ್ನದಾತರನ್ನು ಆರ್ಥಿಕ ಸಂಕಷ್ಟ, ದರ ಕುಸಿತದಂತಹ ಸನ್ನಿವೇಶಗಳಿಂದ ಪಾರು ಮಾಡಲು ನರೇಂದ್ರ ಮೋದಿ ಸರ್ಕಾರ ರೈತಪರವಾದ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದು, ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ. ಇಂತಹ ಉತ್ತಮ ಕಾಯ್ದೆಯ ವಿರುದ್ಧವೇ ಪ್ರತಿಭಟನೆ, ಬಂದ್ಗೆ ಕರೆ ನೀಡಿರುವದು ಸರಿಯಲ್ಲ ಎಂದು ಅಭಿಪ್ರಾಯಿಸಿದ್ದಾರೆ.
ಕೇಂದ್ರ ಸರ್ಕಾರ ರೈತಪರ ಕಾಯ್ದೆಗಳನ್ನು ಜಾರಿಗೆ ತರುತ್ತಿದ್ದರೂ ವಿರೋಧ ಪಕ್ಷಗಳು ಹಾಗೂ ರೈತರ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಕೆಲ ಸಂಘಟನೆಗಳು ವೃಥಾ ಆರೋಪದಲ್ಲಿ ತೊಡಗಿವೆ ಎಂದು ಬಿಜೆಪಿ ಮಂಡಲ ಅಧ್ಯಕ್ಷರೂ ಆಗಿರುವ ಮನುಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಬೆಂಬಲ: ರೈತ ಹಾಗೂ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸೋಮವಾರದ ಬಂದ್ಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದ್ದು, ಎಲ್ಲರೂ ಸ್ವಯಂಪ್ರೇರಿತರಾಗಿ ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡುವದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಕಾರ್ಪೋರೇಟ್ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿವೆ. ಬಡ ರೈತರ ಬಗ್ಗೆ ಕಾಳಜಿ ವಹಿಸದ ಸರ್ಕಾರಗಳ ವಿರುದ್ಧ ಜಾಗೃತಿ ಮೂಡಿಸುವದರೊಂದಿಗೆ ತಾ. 28ರಂದು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಗುವದು ಎಂದು ತಿಳಿಸಿದ್ದಾರೆ.
ಜೆಡಿಎಸ್ ಬೆಂಬಲ: ಸೋಮವಾರದ ಬಂದ್ಗೆ ಸಂಪೂರ್ಣ ಬೆಂಬಲವಿದ್ದು, ಎಲ್ಲರೂ ಸ್ವಯಂಪ್ರೇರಿತರಾಗಿ ಬಂದ್ಗೆ ಬೆಂಬಲಿಸುವ ವಿಶ್ವಾಸವಿದೆ ಎಂದು ಜಾತ್ಯತೀತ ಜನತಾದಳದ ಹಿಂದುಳಿದ ವರ್ಗಗಳ ಘಟಕದ ಜಿಲ್ಲಾಧ್ಯಕ್ಷ ಎ.ಜಿ. ವಿಜಯ ತಿಳಿಸಿದ್ದಾರೆ.
ಕರವೇ ಬೆಂಬಲ: ರೈತ ಸಂಘ ಕರೆ ನೀಡಿರುವ ಬಂದ್ಗೆ ಕರ್ನಾಟಕ ರಕ್ಷಣಾ ವೇದಿಕೆ-ಶಿವರಾಮೇಗೌಡ ಬಣ ಬೆಂಬಲ ಸೂಚಿಸಿದೆ. ನಾಡು ನುಡಿಯೊಂದಿಗೆ ರೈತರ ರಕ್ಷಣೆಯೂ ಆಗಬೇಕಿದೆ. ಈ ಹಿನ್ನೆಲೆ ಸರ್ಕಾರದ ಗಮನ ಸೆಳೆಯಲು ಹಮ್ಮಿಕೊಂಡಿರುವ ಬಂದ್ಗೆ ನಮ್ಮ ಬಣದಿಂದ ಬೆಂಬಲ ಸೂಚಿಸಿರುವದಾಗಿ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ತಿಳಿಸಿದ್ದಾರೆ.
ಮಾಹಿತಿಯಿಲ್ಲ: ಸೋಮವಾರದ ಬಂದ್ ಬಗ್ಗೆ ಆಟೋ ಚಾಲಕರು ಮತ್ತು ಮಾಲೀಕರ ಸಂಘಕ್ಕೆ ಈವರೆಗೆ ಯಾವದೇ ಮಾಹಿತಿ ಬಂದಿಲ್ಲ. ಜಿಲ್ಲಾ ಸಂಘದಿಂದಲೂ ಯಾವದೇ ಸೂಚನೆ ಬಂದಿಲ್ಲ. ಈ ಹಿನ್ನೆಲೆ ಸಂತೆದಿನವಾದ ಸೋಮವಾರ ಎಂದಿನಂತೆ ಆಟೋಗಳು ಸಂಚರಿಸಲಿವೆ. ಬಂದ್ಗೆ ಬೆಂಬಲಿಸುವ ಬಗ್ಗೆ ಸದ್ಯಕ್ಕೆ ಯಾವದೇ ತೀರ್ಮಾನ ಸಂಘದಿಂದ ಕೈಗೊಂಡಿಲ್ಲ ಎಂದು ಸ್ಥಳೀಯ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮೋಹನ್ ಮಾಹಿತಿ ನೀಡಿದ್ದಾರೆ.
ಮೋಟಾರ್ ಯೂನಿಯನ್: ರೈತಪರ ಸಂಘಟನೆಗಳ ಬಂದ್ ಕರೆಗೆ ಸೋಮವಾರಪೇಟೆ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಭರತ್ ತಿಳಿಸಿದ್ದಾರೆ. ವಾಹನಗಳು ಮತ್ತು ವರ್ಕ್ಶಾಪ್ ಕಾರ್ಯನಿರ್ವಹಿಸಲಿದ್ದು, ಬಂದ್ಗೆ ಬಾಹ್ಯ ಬೆಂಬಲ ನೀಡಲಾಗುವದು ಎಂದು ಮಾಹಿತಿಯಿತ್ತಿದ್ದಾರೆ.
ಜೆಡಿಎಸ್ನಿಂದ ರಸ್ತೆ ತಡೆ: ಜೆಡಿಎಸ್ ಕ್ಷೇತ್ರ ಸಮಿತಿಯಿಂದ ತಾ. 28ರಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಬೀಟಿಕಟ್ಟೆ-ಗೌಡಳ್ಳಿಯಲ್ಲಿ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಲಾಗುವದು ಎಂದು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಹೇಳಿದ್ದಾರೆ.
ರೈತ ಹೋರಾಟ ಸಮಿತಿ ಬೆಂಬಲ: ನಾಳೆ ಕರೆ ನೀಡಿರುವ ರಾಜ್ಯ ಬಂದ್ಗೆ ಕೊಡಗು ಜಿಲ್ಲಾ ರೈತ ಹೋರಾಟ ಸಮಿತಿ ಬೆಂಬಲ ನೀಡುತ್ತಿದ್ದು, ತಾ. 28ರಂದು ಸೋಮವಾರಪೇಟೆ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಾನವ ಸರಪಳಿ ರಚಿಸಿ, ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ರೈತ ಹೋರಾಟ ಸಮಿತಿ ಅಧ್ಯಕ್ಷ ಲಿಂಗೇರಿ ರಾಜೇಶ್ ತಿಳಿಸಿದ್ದಾರೆ.
ಗೌಡಳ್ಳಿಯಲ್ಲಿ: ದೊಡ್ಡಮಳ್ತೆ-ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತ ಹೋರಾಟ ಸಮಿತಿ ವತಿಯಿಂದ ಗೌಡಳ್ಳಿಯಲ್ಲಿ ತಾ. 28ರಂದು ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಗುವದು ಎಂದು ಸಮಿತಿ ಅಧ್ಯಕ್ಷ ಮೊಗಪ್ಪ ತಿಳಿಸಿದ್ದಾರೆ.
ಒಟ್ಟಾರೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕಾರ್ಮಿಕ ಹಾಗೂ ರೈತಪರ ಸಂಘಟನೆಗಳು ಭದ್ರವಾಗಿ ಬೇರೂರದೇ ಇರುವದರಿಂದ ಸೋಮವಾರದ ಬಂದ್ಗೆ ಈ ಭಾಗದಲ್ಲಿ ಬೆಂಬಲ ಸಿಗುವುದು ಸಂಶಯವಾಗಿದೆ. ಇದರೊಂದಿಗೆ ಸಂತೆಯೂ ಇರುವುದರಿಂದ ಬಂದ್ ಬದಲಿಗೆ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಮನವಿ ಸಲ್ಲಿಸುವ ಸಾಧ್ಯತೆಯಿದೆ. ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ನವರು ಬಂದ್ಗೆ ಬೆಂಬಲ ನೀಡಿರುವುದರಿಂದ ಸಾರ್ವಜನಿಕರು/ವರ್ತಕರು ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬದನ್ನು ಕಾದುನೋಡಬೇಕಿದೆ.
- ವಿಜಯ್ ಹಾನಗಲ್