ವಿಶ್ವಸಂಸ್ಥೆಗೆ ಪ್ರಧಾನಿ ಕಠಿಣ ಪ್ರಶ್ನೆ

ವಿಶ್ವಸಂಸ್ಥೆ, ಸೆ. 26: ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ವಿಶ್ವಸಂಸ್ಥೆಯ ನೀತಿ ನಿರೂಪಣೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದೇ ವೇಳೆ ಮಾರಕ ಕಾಯಿಲೆಯ ವಿರುದ್ಧ ಹೋರಾಡಲು ಜಗತ್ತಿನ ಎಲ್ಲಾ ಮಾನವ ಕುಲಕ್ಕೆ ಸಹಾಯ ಮಾಡಲು ಭಾರತ ತನ್ನ ಉತ್ಪಾದನೆ ಮತ್ತು ವಿತರಣಾ ಸಾಮಥ್ರ್ಯವನ್ನು ಬಳಸುತ್ತದೆ ಎಂದು ಜಾಗತಿಕ ಸಮುದಾಯಕ್ಕೆ ಭರವಸೆ ನೀಡಿದರು. ಕಳೆದ 8 ರಿಂದ 9 ತಿಂಗಳುಗಳಲ್ಲಿ, ಇಡೀ ಜಗತ್ತು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ತತ್ತರಿಸಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ವಿಶ್ವಸಂಸ್ಥೆ ಎಲ್ಲಿ ಭಾಗವಹಿಸಿದೆ? ಅದರ ಪರಿಣಾಮಕಾರಿ ನೀತಿ ನಿರೂಪಣೆ ಹಾಗೂ ಪ್ರತಿಕ್ರಿಯೆ ಎಲ್ಲಿದೆ? ಇಷ್ಟಕ್ಕೂ ಇದು ವಿಶ್ವಸಂಸ್ಥೆಯ ಸ್ವರೂಪದಲ್ಲಿ ಸುಧಾರಣೆಯು ಅಗತ್ಯವಾಗಿರುವ ಸಮಯವಾಗಿದೆ ಎಂದು ಮೋದಿ ಹೇಳಿದರು.

ನಾಳೆ ಕರ್ನಾಟಕ ಬಂದ್‍ಗೆ ಕರೆ

ಬೆಂಗಳೂರು, ಸೆ. 26: ತಾ. 28 ರಂದು ಎಲ್ಲಾ ರೈತ ಸಂಘಟಣೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿದ್ದು, ಇದಕ್ಕೆ ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘ ಬೆಂಬಲ ವ್ಯಕ್ತಪಡಿಸಿವೆ. ಅಂದು ಕೆ.ಆರ್. ಮಾರುಕಟ್ಟೆ ಬಂದ್ ಆಗಲಿದೆ. ಸಂಘದ ಅಧ್ಯಕ್ಷ ವಿ.ಆರ್. ಗೋಪಿ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ಬಂದ್‍ಗೆ ನಾವು ಪೂರ್ಣ ಬೆಂಬಲ ಕೊಡುತ್ತೇವೆ. ದಾಸನಪುರ ಕೆಂಪೇಗೌಡ ತರಕಾರಿ ವರ್ತಕರ ಸಂಘವೂ ಸಹ ಪೂರ್ಣ ಬೆಂಬಲ ನೀಡಲಿದೆ. ಕೂಡಲೇ ಸರ್ಕಾರ ಎಪಿಎಂಸಿ ಕಾಯ್ದೆ ಹಾಗೂ ಭೂಸುಧಾರಣಾ ಕಾಯ್ದೆ ವಾಪಸ್ಸು ಪಡೆಯಬೇಕು. ಇಲ್ಲದೇ ಇದ್ದರೆ ರೈತರು ತೀವ್ರ ಗೊಂದಲದಲ್ಲಿ ಸಿಲುಕುತ್ತಾರೆ. ರೈತರು ಸಂಕಷ್ಟಕ್ಕೆ ಈಡಾದರೇ ತರಕಾರಿ ಸಗಟು ವ್ಯಾಪಾರಸ್ಥರು ತೊಂದರೆಗೆ ಸಿಲುಕುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ರೈತರು ನಮ್ಮ ಬೆನ್ನೆಲುಬಾಗಿದ್ದು, ನಾವು ಸಹ ರೈತರಿಗೆ ಬೆನ್ನೆಲುಬಾಗಿದ್ದೇವೆ. ಆದ್ದರಿಂದ, ಸರ್ಕಾರ ಕೂಡಲೇ ರೈತ ವಿರೋಧಿ ನಿಲುವನ್ನು ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಬೆಂಬಲ ಬೆಲೆಯ ಗ್ಯಾರಂಟಿ ನೀಡಿ

ನವದೆಹಲಿ, ಸೆ. 26: ಕೃಷಿ ಮಸೂದೆಗಳಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ, ಸರ್ಕಾರ ಯಾವುದೇ ವಿಳಂಬ ಮಾಡದೆ ಕೃಷಿ ವಲಯದ ಮಸೂದೆಗಳನ್ನು ಹಿಂಪಡೆದು ರೈತರಿಗೆ ಕನಿಷ್ಟ ಬೆಂಬಲ ಬೆಲೆಯ ಗ್ಯಾರಂಟಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ದೇಶದ ಜನತೆ ಮತ್ತು ಕೃಷಿಕರಿಗೆ ಟ್ವಿಟರ್ ವೀಡಿಯೋ ಮೂಲಕ ಸಂದೇಶ ನೀಡಿರುವ ಅವರು, ಕಾಂಗ್ರೆಸ್ ಸಂಸತ್ತಿನಲ್ಲಿ ಅನುಮೋದನೆಗೊಂಡಿರುವ ಈ ಮಸೂದೆಯ ವಿರುದ್ಧ ಹೋರಾಡುತ್ತಿರುವ ದೇಶಾದ್ಯಂತದ ರೈತರ ಜೊತೆಗಿದೆ ಎಂದಿದ್ದಾರೆ.

2 ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು, ಸೆ. 26: ರಾಜ್ಯದ ಕರಾವಳಿ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ತಾ. 28 ಮತ್ತು ತಾ. 29 ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 64.5 ರಿಂದ 115.5 ಮಿ.ಮಿ. ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ, ಬೀದರ್, ಧಾರವಾಡ, ಗದಗ, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಸೇನಾ ವಿಮಾನ ಪತನ : 22 ಸಾವು

ಕೇವ್, ಸೆ. 26: ಸೇನಾ ವಿಮಾನವೊಂದು ಲ್ಯಾಂಡಿಂಗ್ ನಡೆಸುವ ವೇಳೆ ಪತನವಾದ ಕಾರಣ ತರಬೇತಿ ಪಡೆದ ವಾಯುಸೇನೆಯ ಕನಿಷ್ಟ 22 ಯುವ ವಿದ್ಯಾರ್ಥಿಗಳು ಸಾವನಪ್ಪಿರುವ ಘಟನೆ ಉಕ್ರೇನ್‍ನ ಖಾರ್ಕಿವ್ ಬಳಿ ನಡೆದಿದೆ. ಉಕ್ರೇನ್ ರಾಜಧಾನಿ ಕೈವ್‍ನಿಂದ ಸುಮಾರು 400 ಕಿ.ಮೀ. ದೂರವಿರುವ ಚುಹುಯಿವ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ನಡೆಸುವ ವೇಳೆ ಈ ಅವಘಡ ಸಂಭವಿಸಿದೆ. ಆಂಟೊನೊವ್ -26 ಎಂಬ ಹೆಸರಿನ ಸೇನಾ ವಿಮಾನ ಇದಾಗಿದ್ದು ಪತನದ ತೀವ್ರತೆ ಭಾರೀ ಬೆಂಕಿ ಸಂಭವಿಸಿದ್ದು, 22 ಮಂದಿ ಸಜೀವ ದಹನರಾಗಿದ್ದಾರೆ ಎಂದು ಅಲ್ಲಿನ ಸರಕಾರ ಮಾಹಿತಿ ನೀಡಿದೆ.