ಮಡಿಕೇರಿ, ಸೆ. 26: ಮನೆ ಬಾಗಿಲಲ್ಲೆ ಡಿಜಿಟಲ್ ಅಂಚೆ ಖಾತೆ ತೆರೆಯುವ ವಿನೂತನ ಅಭಿಯಾನವನ್ನು ಭಾರತೀಯ ಅಂಚೆ ಇಲಾಖೆ ಕೈಗೊಂಡಿದೆ. ತಾ.29 ರಿಂದ ಜಿಲ್ಲೆಯಲ್ಲಿಯೂ ಮನೆ ಬಾಗಿಲಲ್ಲೆ ಖಾತೆ ತೆರೆಯಿರಿ ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೊಡಗು ಜಿಲ್ಲಾ ಅಂಚೆ ಇಲಾಖೆಯ ಅಧೀಕ್ಷಕ ಹೆಚ್.ಕೆ ಸೋಮಯ್ಯ ಮಾಹಿತಿ ನೀಡಿದ್ದಾರೆ.ಕಾಗದ ರಹಿತ ಸೇವೆ ಅಂಚೆ ಖಾತೆ ತೆಗೆಯುವ ಸೇವೆಯು ಸಂಪೂರ್ಣ ಕಾಗದ ರಹಿತ ಸೇವೆಯಾಗಿದ್ದು ದಾಖಲೆಗಳ ಪ್ರತಿ ಕೂಡ ನೀಡಬೇಕಾಗಿಲ್ಲ. ಆಧಾರ್ ಸಂಖ್ಯೆ, ಫೋನ್ ಸಂಖ್ಯೆ, ಹಾಗೂ ಪ್ರಾರಂಭಿಕ ಶುಲ್ಕ ರೂ.100 ನೀಡಿದರೆ ಖಾತೆ ತೆರೆಯಬಹುದಾಗಿದೆ. ಐ.ಪಿ.ಪಿ.ಬಿ ಮೊಬೈಲ್ ಆ್ಯಪ್‍ಅನ್ನು ಗೂಗಲ್ ಪ್ಲೇಸ್ಟೋರ್‍ನಿಂದ ಡೌನ್‍ಲೋಡ್ ಮಾಡಿ ಖಾತೆಯ ಮೂಲಕ ಬ್ಯಾಂಕಿಂಗ್ ವ್ಯವಹಾರ ಮಾಡಬಹುದು. ಕ್ಯು.ಆರ್ ಕೋಡ್ ಮೂಲಕ ಅಂಗಡಿಗಳಲ್ಲಿಯು ಹಣ ಪಾವತಿಗೆ ಅವಕಾಶ ನೀಡಲಾಗಿದೆ. ಇತರ ಡಿಜಿಟಲ್ ಸೇವೆಗಳಾದ ಮೊಬೈಲ್ ರೀಚಾರ್ಜ್, ವಿದ್ಯುತ್ ಬಿಲ್ ಪಾವತಿಗೂ ಐ.ಪಿ.ಪಿ.ಬಿ ಆ್ಯಪ್ ಮೂಲಕ ಮಾಡಬಹುದಾಗಿದೆ.

ತಾ.29 ರಿಂದ ಪ್ರಾರಂಭಗೊಳ್ಳುವ ಈ ಅಭಿಯಾನದಲ್ಲಿ ಜಿಲ್ಲೆಯ ಎಲ್ಲ ಸಾರ್ವಜನಿಕರು ತಮ್ಮ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ಅಂಚೆಯಣ್ಣನ ಮೂಲಕ ಖಾತೆಗಳನ್ನು ತೆರೆದು ಡಿಜಿಟಲ್ ಬ್ಯಾಂಕ್‍ನ ಸೌಲಭ್ಯಗಳನ್ನು ಸದುಪಯೋಗಿಸಿಕೊಳ್ಳುವಂತೆ ಅಂಚೆ ಇಲಾಖೆಯ ಅಧೀಕ್ಷಕರು ಕೋರಿದ್ದಾರೆ.