ಮಡಿಕೇರಿ, ಸೆ. 27: ತಲಕಾವೇರಿ ಕ್ಷೇತ್ರದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಕೆಲವು ಸದಸ್ಯರು ಹಾಗೂ ಆಹ್ವಾನಿತ ಭಕ್ತಾದಿಗಳು ನಿನ್ನೆ ದಿನ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರು ಸನ್ನಿಧಿಯಲ್ಲಿ ಮಾತನಾಡಿ, ಈಗಾಗಲೇ ಸಾಕಷ್ಟು ಜವಾಬ್ದಾರಿಕೆ ಯಿಂದ ತಲಕಾವೇರಿ-ಭಾಗಮಂಡಲ ಕ್ಷೇತ್ರಗಳ ನಿರ್ವಹಣೆ ಹಾಗೂ ಅಭಿವೃದ್ಧಿಗೆ ಸಮಿತಿಯಿಂದ ಪ್ರಾಮಾಣಿಕ ಪ್ರಯತ್ನ ನಡೆಸಲಾಗಿದೆ. ಮುಂದೆಯೂ ಹೆಚ್ಚಿನ ಜವಾಬ್ದಾರಿಕೆ ಯಿಂದ ನಿರ್ವಹಿಸಲಾಗುತ್ತದೆ. ಅಗಸ್ತ್ಯೇಶ್ವರ ಸನ್ನಿಧಿಯಿಂದ ಹೊರತೆಗೆ ಯಲಾಗಿದ್ದ ಹಳೆಯ ಜೀರ್ಣಗೊಂಡ ಶಿವಲಿಂಗವನ್ನು ವಿಸರ್ಜಿಸಲು ದೈವಾನುಗ್ರಹ ಬೇಡುತ್ತಿರುವುದಾಗಿ ಪ್ರಾರ್ಥಿಸಿದರು.ಈ ಸಂಬಂಧ ಕಾನೂನಾತ್ಮಕ ತಡೆಗಳನ್ನು ನೀಗುವ ಮೂಲಕ ಅನುಗ್ರಹಿಸುವಂತೆಯು ದೈವ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಮಿತಿಯ ಕಾರ್ಯನಿರ್ವಹಣೆ ಬಗ್ಗೆ ಕೆಲವೊಮ್ಮೆ ಸಾಮಾಜಿಕ ಜಾಲತಾಣ ದಲ್ಲಿ ಕೆಲವು ಪತ್ರಿಕಾ ಮಾಧ್ಯಮಗಳಲ್ಲಿ ನೈಜತೆಗೆ ದೂರವಾದ ಸುದ್ದಿಗಳು ಪ್ರಕಟಗೊಳ್ಳುತ್ತಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು.
ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಈ ಪವಿತ್ರ ಕ್ಷೇತ್ರದಲ್ಲಿ ರಾಜಕೀಯ ಭಾವನೆಗಳನ್ನು ಮರೆತು ಎಲ್ಲರೂ ಸೌಹಾರ್ದಯುತವಾಗಿ ಕುಲದೇವಿ ಕಾವೇರಿಯನ್ನು ಸ್ಮರಿಸುವತ್ತ ಗಮನ ಹರಿಸುವಂತೆ ಮನವಿ ಮಾಡಿದರು. ಅಲ್ಲದೆ ಜೀರ್ಣಗೊಂಡ ಶಿವಲಿಂಗವನ್ನು ಆದಷ್ಟು ಶೀಘ್ರ ವಿಸರ್ಜಿಸುವತ್ತ ಪ್ರಯತ್ನಿಸಬೇಕೆಂದು ಕೋರಿದರು.
ಈ ಸಂದರ್ಭ ಸಮಿತಿ ಸದಸ್ಯರುಗಳು ಹಾಗೂ ಭಕ್ತಾದಿಗಳು ಸೇರಿದಂತೆ ಕೆದಂಬಾಡಿ ರಮೇಶ್, ನಿಡ್ಯಮಲೆ ಮೀನಾಕ್ಷಿ, ಉದಿಯಂಡ ಸುಭಾಶ್, ಕುಡಿಯರ ಅಣ್ಣಯ್ಯ, ಚೆಯ್ಯಂಡ ಸತ್ಯ ಗಣಪತಿ, ಬಲ್ಲಚಂಡ ಮೋಹನ್, ಬೊಳ್ಳಿಯಪಂಡ ಬೋಪಣ್ಣ, ಮಣವಟ್ಟಿರ ದೊರೆ ಸೋಮಣ್ಣ, ಕಂಡ್ರತಂಡ ಪ್ರವೀಣ್ ಪೂವಯ್ಯ, ಕೇಟೋಳಿರ ಶಮ್ಮಿ, ಮಂದಪಂಡ ಸತೀಶ್, ತೇಲಪಂಡ ಪ್ರಮೋದ್, ಪಾಂಡೀರ ಮುತ್ತಣ್ಣ, ಅಪ್ಪುಮಣಿಯಂಡ ಡೇಸಿ ಸೋಮಣ್ಣ ಮತ್ತಿತರರಿದ್ದರು.