ಮಡಿಕೇರಿ, ಸೆ. 27: ಅರಣ್ಯ ಇಲಾಖೆಯ ಅಡಚಣೆಯಿಂದಾಗಿ ಸುಮಾರು 20 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಿ.ಶೆಟ್ಟಿಗೇರಿ ಮೂಲಕ ಬಿರುನಾಣಿ ಗ್ರಾ.ಪಂ. ಅನ್ನು ಸಂಪರ್ಕಿಸುವ ರಸ್ತೆ ಕಾಮಗಾರಿಯನ್ನು ವಿವಾದ ಬಗೆಹರಿಸುವದರೊಂದಿಗೆ ತಕ್ಷಣ ನಿರ್ಮಿಸಲು ಕ್ರಮಕೈಗೊಳ್ಳುವಂತೆ ಪೊನ್ನಂಪೇಟೆ ತಾಲೂಕು ಹೋರಾಟ ಸಮಿತಿ ಆಗ್ರಹಿಸಿದೆ.ಇತ್ತೀಚೆಗೆ ‘ಶಕ್ತಿ’ಯಲ್ಲಿ ಕೂಟಿಯಾಲ ಸೇತುವೆ ರೂ. 70 ಲಕ್ಷದಲ್ಲಿ ನಿರ್ಮಾಣಗೊಂಡು 20 ವರ್ಷ ಕಳೆದರೂ ಸಂಪರ್ಕ ರಸ್ತೆಯಿಲ್ಲದೆ ಈ ಯೋಜನೆಯೇ ನೆನೆಗುದಿಗೆ ಬಿದ್ದಿರುವ ಕುರಿತಾಗಿ ಪ್ರಕಟಗೊಂಡಿದ್ದ ವಿವರವಾದ ವರದಿಯನ್ನು ಆಧರಿಸಿ ಪೊನ್ನಂಪೇಟೆ ನಾಗರಿಕ ಹಾಗೂ ತಾಲೂಕು ಹೋರಾಟ ಸಮಿತಿಯ ಪ್ರಮುಖರಾದ ಸಿ.ಕೆ. ಸೋಮಯ್ಯ, ಪಿ.ಬಿ. ಪೂಣಚ್ಚ ಹಾಗೂ ವಿ.ವಿ. ಸೆಲ್ವರಾಜ್ ಅವರುಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹಾಗೂ ಅರಣ್ಯ ಸಚಿವ ಆನಂದ್‍ಸಿಂಗ್ ಅವರಿಗೆ ಈ ಬಗ್ಗೆ ಲಿಖಿತ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ. ‘ಶಕ್ತಿ’ಯಲ್ಲಿ ಪ್ರಕಟವಾಗಿರುವ ವರದಿ ವಾಸ್ತವಾಂಶದಿಂದ ಕೂಡಿದ್ದು, ಸಾರ್ವಜನಿಕರ ಕಳಕಳಿಯಿಂದ ಕೂಡಿದೆ ಎಂದು ಪ್ರಮುಖರು ಗಮನ ಸೆಳೆದಿದ್ದಾರೆ.

ಮನವಿಯ ಸಾರಾಂಶ

1996ರಲ್ಲಿ ನಬಾರ್ಡ್ ಮೂಲಕ ಬರಪೊಳೆಗೆ ಅಡ್ಡಲಾಗಿ ನಿರ್ಮಿಸಿರುವ ಸುಭದ್ರ ಸೇತುವೆ ಇದಾಗಿದ್ದು, ಎರಡು ಗ್ರಾಮ ಪಂಚಾಯಿತಿಗಳ ಎಂಟು ಗ್ರಾಮಗಳಿಗೆ ವೀರಾಜಪೇಟೆ ತಾಲೂಕು ಕೇಂದ್ರಕ್ಕೆ ಅಂದಾಜು 20 ಕಿ.ಮೀ. ಅಧಿಕ ಅಂತರದಲ್ಲಿ ತಲುಪುವ ಅವಕಾಶವನ್ನು ನೀಡುವ ಉದ್ದೇಶ ದಿಂದ ನಿರ್ಮಿಸಿರುವ ಸಾರ್ವಜನಿಕ ಸೇತುವೆ ಇದಾಗಿರುತ್ತದೆ. ವೀರಾಜಪೇಟೆ ಯಿಂದ ಬಿ.ಶೆಟ್ಟಿಗೇರಿ ಗ್ರಾಮದ ಮೂಲಕ ಹಾದು ಬರುವ ಡಾಮರೀಕರಣ ರಸ್ತೆಯು ಈ ಸೇತುವೆ ತನಕ ನಿರ್ಮಿತವಾಗಿರುತ್ತದೆ. ಆದರೆ, ಸೇತುವೆಯ ಇನ್ನೊಂದು ಭಾಗದಲ್ಲಿ ಅಂದಾಜು 600 ಮೀಟರು ಉದ್ದದ ರಸ್ತೆಯ ನಿರ್ಮಾಣ ಕಾರ್ಯಕ್ಕೆ ಅರಣ್ಯ ಇಲಾಖೆಯವರು, ಇದು ವನ್ಯಜೀವಿ ತಾಣಕ್ಕಾಗಿ ಹಾದು ಹೋಗಬೇಕಾಗಿದೆ ಎಂದು ತಡೆಯೊಡ್ಡಿರುತ್ತಾರೆ. ಸಂಪರ್ಕ ರಸ್ತೆಯು

(ಮೊದಲ ಪುಟದಿಂದ) ಬಾಡಗರಕೇರಿ ಗ್ರಾಮದಲ್ಲಿರುವ ಲೋಕ ಪ್ರಸಿದ್ಧ ಅಪರೂಪದ ಮೃತ್ಯುಂಜಯ ದೇವಸ್ಥಾನಕ್ಕೂ ಸಹ ಹತ್ತಿರದ ಸಂಪರ್ಕ ಕಲ್ಪಿಸುವ ರಸ್ತೆಯಾಗಿರುತ್ತದೆ.

ಅರಣ್ಯ ಇಲಾಖೆಯವರು ತಗಾದೆ ಎತ್ತಿ ಪ್ರಸ್ತಾಪಿಸಿರುವಂತೆ, ಕೇವಲ 600 ಮೀಟರ್ ಉದ್ದದ ರಸ್ತೆಯು ಸಾಮಾನ್ಯ ಅರಣ್ಯ ಜಮೀನಿನ ಮೂಲಕ, ಹೆಚ್ಚಿನ ಗಿಡಮರಗಳನ್ನು ನಾಶಪಡಿಸದೆÉ ನಿರ್ಮಿಸಬಹುದಾದ ರಸ್ತೆ ಇದಾಗಿರುತ್ತದೆ. ಇದು ಕಾದಿರಿಸಿದ ಯಾ ರಕ್ಷಿತಾ ಅರಣ್ಯದ ವ್ಯಾಪ್ತಿಯಲ್ಲಿ ಬರುವದಿಲ್ಲ. ಈಗ ಹಲವಾರು ರಾಜ್ಯ ಹೆದ್ದಾರಿ, ಜಿಲ್ಲಾ ಹೆದ್ದಾರಿ ರಸ್ತೆಗಳು ರಕ್ಷಿತಾರಣ್ಯದ ಮೂಲಕವೇ ಹಾದು ಹೋಗುತ್ತದೆ. ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಸ್ವಪ್ರತಿಷ್ಠೆಯಿಂದ ಸಾರ್ವಜನಿಕ ಸಂಪರ್ಕ ರಸ್ತೆಯ ಉಪಯೋಗ ಯಾ ಈ ಬೃಹತ್ ಸೇತುವೆಯ ನಿರ್ಮಾಣದ ಉಪಯೋಗ ಸಾರ್ವಜನಿಕರ ಉಪಯೋಗಕ್ಕೆ ಇಲ್ಲದಂತಾಗಿದೆ.

ಪತ್ರಿಕೆಯಲ್ಲಿ ಪ್ರಕಟಗೊಂಡಿರುವಂತೆ, ಹಲವು ವರ್ಷಗಳ ಹಿಂದೆ ಸಿಇಸಿ ತಂಡವು ಸದ್ರಿ ಸೇತುವೆ ಹಾಗೂ ಬಾಡಗರಕೇರಿ ಗ್ರಾಮದಲ್ಲಿ ನಿರ್ಮಾಣವಾಗಬೇಕಾಗಿರುವ ರಸ್ತೆಯ ಸ್ಥಳವನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ವೀಕ್ಷಿಸಿ, ಸ್ಥಳದಲ್ಲೇ ತಮ್ಮ ಸಹಮತವನ್ನು ಮೌಖಿಕವಾಗಿ ವ್ಯಕ್ತಪಡಿಸಿದ್ದು, ಆಗಿನ ಅಧಿಕಾರಿಗಳಿಗೆ ತಿಳಿದ ವಿಷಯವಾಗಿತ್ತು. ಅಗತ್ಯವಿದ್ದರೆ ಅರಣ್ಯ ರಕ್ಷಣೆಗೆ ಅಗತ್ಯವಿರುವ ಒಂದು ಅರಣ್ಯ ಚೆಕ್ ಪೋಸ್ಟ್ ಸೇತುವೆಯ ಪಕ್ಕದಲ್ಲಿ ಅಂದರೆ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ನಿರ್ಮಿಸಲು ಸಲಹೆ ನೀಡಿದ ಮೇರೆಗೆ, ಹಲವಾರು ವರ್ಷಗಳಿಂದ ಒಂದು ಅರಣ್ಯ ಚೆಕ್‍ಪೋಸ್ಟ್ ಸಹ ಇದ್ದು, ಕಾರ್ಯನಿರ್ವಹಿಸುತ್ತಿದೆ.

ಈ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಅರಣ್ಯ ಸಚಿವರಾಗಿದ್ದ ರಮಾನಾಥ ರೈ ಇವರಲ್ಲಿ ವಿಧಾನ ಪರಿಷತ್ತಿನಲ್ಲಿ ಕೊಡಗಿನ ಪ್ರತಿನಿಧಿಗಳಾದ ಸುನಿಲ್ ಸುಬ್ರಮಣಿ ಮತ್ತು ವೀಣಾ ಅಚ್ಚಯ್ಯ ಗಮನ ಸೆಳೆಯುವ ಪ್ರಶ್ನೆ ಮೂಲಕ ಪ್ರಸ್ತಾಪಿಸಿದಾಗ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಾರ್ವಜನಿಕರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆಯನ್ನು ನೀಡಿರುವದು, ಬಹುಶ ವಿಧಾನ ಪರಿಷತ್ತಿನ ನಡಾವಳಿಯಲ್ಲಿ ದಾಖಲೆ ಆಗಿರಬಹುದೆಂದು ಉಲ್ಲೇಖಿಸಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನೊಳಗೊಂಡ ಕಡತವು ಅರಣ್ಯ ಇಲಾಖೆಯ ಪ್ರಧಾನ ಅರಣ್ಯ ಮುಖ್ಯಾಧಿಕಾರಿಗಳ ಕಚೇರಿಯಲ್ಲಿರುತ್ತದೆಂದು ತಿಳಿದು ಬಂದಿರುತ್ತದೆ. ಸರಕಾರದ ಯಾವುದೇ ಯೋಜನೆಯ ಅಂದರೆ ರಸ್ತೆ, ಸೇತುವೆ ಸಾರ್ವಜನಿಕರ ಉಪಯೋಗಕ್ಕೆ ಬರಬೇಕಲ್ಲದೆ, ಯಾವುದೇ ಇಲಾಖಾಧಿಕಾರಿಗಳ ಒಣಪ್ರತಿಷ್ಠೆಗೆ ಒಳಗಾಗಿ ಯೋಜನೆ ನಿಷ್ಪ್ರಯೋಜನ ಆಗಬಾರದೆಂಬುದು ನಮ್ಮ ಅಭಿಪ್ರಾಯವಾಗಿರುತ್ತದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಆದಷ್ಟು ಬೇಗನೆ ಸದ್ರಿ ಸೇತುವೆ ಇನ್ನೊಂದು ಭಾಗದಲ್ಲಿ ಲೋಕೋಪಯೋಗಿ ಇಲಾಖೆಯವರು ಅಂದಾಜು 600 ಮೀಟರ್ ಅಂತರದ ಅಗತ್ಯ ಸಂಪರ್ಕ ರಸ್ತೆಯನ್ನು ಕೂಡಲೇ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂತಲೂ ಮತ್ತು ಇದಕ್ಕೆ ಅರಣ್ಯ ಇಲಾಖಾ ಅಧಿಕಾರಿಗಳು ಸಹಕರಿಸಿ, ಸಾರ್ವಜನಿಕರಿಗೆ ಉಪಯೋಗವಾಗುವ ರಸ್ತೆಗೆ ಅವಕಾಶ ಮಾಡಿಕೊಡಬೇಕೆಂದು ಸಾರ್ವಜನಿಕರ ಪರವಾಗಿ ಕೋರಲಾಗಿದೆ.

ಈ ಮನವಿಯ ಪ್ರತಿಯನ್ನು ಮತ್ತೊಮ್ಮೆ ವಿಧಾನಸಭೆ - ವಿಧಾನಪರಿಷತ್‍ನಲ್ಲಿ ಪ್ರಸ್ತಾಪಿಸಲೂ ಸ್ಥಳೀಯ ಜನಪ್ರತಿನಿಧಿಗಳು - ಅಧಿಕಾರಿಗಳಿಗೂ ಕಳುಹಿಸಲಾಗಿದೆ.