ಆತ್ಮನಿರ್ಭರದಲ್ಲಿ ರೈತರ ಪಾತ್ರ ಪ್ರಮುಖ

ನವದೆಹಲಿ, ಸೆ. 27: ಆತ್ಮನಿರ್ಭರ ಭಾರತದ ನಿರ್ಮಾಣದಲ್ಲಿ ರೈತರ ಪಾತ್ರ ಪ್ರಮುಖವಾಗಿದ್ದು, ತಮ್ಮ ಉತ್ಪನ್ನಗಳನ್ನು ಮಂಡಿಗಳ ಹೊರಗೆ ಮಾರಾಟ ಮಾಡುವ ಸ್ವಾತಂತ್ರ್ಯ ಸರ್ಕಾರ ನೀಡಿದೆ ಎಂದು ಹೇಳುವ ಮೂಲಕ ಕೃಷಿ ಮಸೂದೆಯನ್ನು ಪ್ರಧಾನಿ ಮೋದಿ ತಮ್ಮ ಮನ್ ಕಿಬಾತ್ ಕಾರ್ಯಕ್ರಮದಲ್ಲಿ ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ 69ನೇ ಮಾಸಿಕ ಮನ್‍ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದಿನ ಕಾರ್ಯಕ್ರಮದಲ್ಲಿ ರೈತರ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಕೃಷಿ ಮಸೂದೆಯ ಲಾಭಗಳನ್ನು ಉಲ್ಲೇಖಿಸಿದರು. ನೂತನ ಮಸೂದೆ ದೇಶದ ಕೃಷಿ ವಲಯದ ಚಹರೆ ಬದಲಿಸಲಿದೆ. ಕೃಷಿ ವಿಧೇಯಕಗಳು ರೈತರ ಪರವಾಗಿದ್ದು, ಇವುಗಳ ಲಾಭವನ್ನು ದೇಶದ ರೈತ ಸಮುದಾಯ ಅರಿಯಬೇಕಿದೆ ಎಂದರು.

3 ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ನವದೆಹಲಿ, ಸೆ. 27: ವಿಪಕ್ಷಗಳ ವಿರೋಧದ ನಡುವೆಯೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೃಷಿ ಸಂಬಂಧಿತ ಮೂರು ಮಸೂದೆಗಳಿಗೆ ಸಹಿ ಹಾಕಿದ್ದು, ಇಂದಿನಿಂದ ಕಾನೂನಾಗಿ ಮಾರ್ಪಾಡಾಗಲಿದೆ. ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ ಮಸೂದೆ 2020 (ಪ್ರಚಾರ ಮತ್ತು ಸೌಲಭ್ಯ) ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಹಾಗೂ ರೈತರಿಗೆ ಗುತ್ತಿಗೆ ಕೃಷಿಗೆ ಪ್ರವೇಶಿಸಲು ಚೌಕಟ್ಟನ್ನು ಒದಗಿಸುವ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಈ ಮಸೂದೆಗಳನ್ನು ರೈತರ ಡೆತ್ ವಾರೆಂಟ್, ಅದಕ್ಕೆ ಸಹಿ ಹಾಕುವುದಿಲ್ಲ ಎಂದು ಕಾಂಗ್ರೆಸ್ ಹೇಳಿದ್ದರೆ, ದೇಶದ ಒಟ್ಟು ಜಿಡಿಪಿಗೆ ಕನಿಷ್ಟ ಶೇ. 20 ಕೊಡುಗೆ ನೀಡುವ ರೈತರನ್ನು ಈ ಮಸೂದೆಗಳು ಗುಲಾಮರನ್ನಾಗಿ ಮಾಡುತ್ತವೆ ಎಂದು ಪ್ರತಿ ಪಕ್ಷಗಳು ಹೇಳಿದ್ದವು.

ಇಂದು ಬಸ್ ಸಂಚಾರ ಇರಲಿದೆ

ಬೆಂಗಳೂರು, ಸೆ. 27: ಕೆಲವು ಸಂಘಟನೆಗಳು ಸೋಮವಾರ ಬಂದ್‍ಗೆ ಕರೆ ಕೊಟ್ಟಿರುವುದರಿಂದ ರಾಜ್ಯದ್ಯಂತ ಸಾರಿಗೆ ಸಂಚಾರ ವ್ಯವಸ್ಥೆ ಸುಗಮವಾಗಿ ಸಾಗುವಂತಾಗಲು ಸಕಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಎಂದಿನಂತೆ ಬಸ್ ಸಂಚಾರ ಮುಂದು ವರೆಯಲಿದೆ. ಜನತೆಗೆ ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಡಿಸಿಎಂ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಬಂದ್ ಹಿನ್ನೆಲೆ ಬಸ್‍ಗಳಿಗೆ ಮತ್ತು ಇತರ ಸರ್ಕಾರಿ ಆಸ್ತಿಪಾಸ್ತಿಗಳಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗದಂತೆ ಹೆಚ್ಚಿನ ಸುರಕ್ಷತಾ ವ್ಯವಸ್ಥೆಗಳನ್ನು ಒದಗಿಸಿಕೊಡಬೇಕೆಂದು ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಚನೆ ಕೊಡಲಾಗಿದೆ ಎಂದರು.

ದಿನೇಶ್ ಗುಂಡೂರಾವ್‍ಗೆ ಕೋವಿಡ್

ಬೆಂಗಳೂರು, ಸೆ. 27: ಮಾಜಿ ಸಚಿವ ಹಾಗೂ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಶನಿವಾರ ಸದನದಲ್ಲಿ ಹಾಜರಾಗಿದ್ದವರಲ್ಲಿ ಆತಂಕ ಮೂಡಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ದಿನೇಶ್ ಗುಂಡೂರಾವ್, ‘ನನಗೆ ಕೋವಿಡ್ ರೋಗ ಲಕ್ಷಣ ಇರಲಿಲ್ಲ. ಆದರೆ ಕೋವಿಡ್ ಟೆಸ್ಟ್‍ನ ವರದಿ ಪಾಸಿಟಿವ್ ಬಂದಿದೆ. ನಿಮ್ಮೆಲ್ಲರ ಹಾರೈಕೆಯಿಂದ ಆದಷ್ಟು ಬೇಗ ಚೇತರಿಸಿಕೊಳ್ಳುವ ವಿಶ್ವಾಸವಿದೆ. ನನ್ನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರು ಕೋವಿಡ್? ಟೆಸ್ಟ್ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ವೇಶ್ಯಾವಾಟಿಕೆ ಕ್ರಿಮಿನಲ್ ಅಪರಾಧವಲ್ಲ

ಮುಂಬೈ, ಸೆ. 27: ವಯಸ್ಕ ಮಹಿಳೆಗೆ ತನ್ನ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದ್ದು. ಕಾನೂನಿನಡಿಯಲ್ಲಿ ವೇಶ್ಯಾವಾಟಿಕೆ ಕ್ರಿಮಿನಲ್ ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಮುಂಬೈನಲ್ಲಿ ಬಂಧನಕ್ಕೊಳಗಾಗಿರುವ ಮೂವರು ಮಹಿಳಾ ಲೈಂಗಿಕ ಕಾರ್ಯಕರ್ತೆಯರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಬಾಂಬೇ ಹೈಕೋರ್ಟ್‍ನ ನ್ಯಾಯಮೂರ್ತಿ ಪೃಥ್ವಿರಾಜ್ ಚೌಹಾಣ್ ಅವರ ನೇತೃತ್ವದ ನ್ಯಾಯಪೀಠ, ಕಾನೂನಿನಡಿಯಲ್ಲಿ ವೇಶ್ಯಾವಾಟಿಕೆ ಕ್ರಿಮಿನಲ್ ಅಪರಾಧವಲ್ಲ ಮತ್ತು ವಯಸ್ಕ ಮಹಿಳೆಗೆ ತನ್ನ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. 1956ರ ಅನೈತಿಕ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ವೇಶ್ಯಾವಾಟಿಕೆಯನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಸಚಿವ ಜಸ್ವಂತ್ ಸಿಂಗ್ ನಿಧನ

ನವದೆಹಲಿ, ಸೆ. 27: ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ ಅವರು ಭಾನುವಾರ ಬೆಳಿಗ್ಗೆ ವಿಧಿವಶರಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಜಸ್ವಂತ್ ಸಿಂಗ್ ಅವರಿಗೆ 82 ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಜೂನ್ 25 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಲ್ಟಿಆರ್ಗನ್ ಡಿಸ್ಫಂಕ್ಷನ್ ಸಿಂಡ್ರೋಮ್‍ನಿಂದ ಜಸ್ವಂತ್ ಅವರು ಬಳಲುತ್ತಿದ್ದರು. ಇದರಂತೆ ಇಂದು ಬೆಳಿಗ್ಗೆ ಹೃದಯಸ್ತಂಭನ ಎದುರಾಗಿ ಬೆಳಿಗ್ಗೆ 6.55ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.