ಗೋಣಿಕೊಪ್ಪ ವರದಿ, ಸೆ. 26: ಒಲಿಂಪಿಯನ್ ಸಣ್ಣುವಂಡ. ಕೆ. ಉತ್ತಪ್ಪ ಅವರ ವಿವಾಹ ನಿಶ್ಚಿತಾರ್ಥವು ಪುಟ್ಟಿಚಂಡ ಸಂಜನಾಳೊಂದಿಗೆ ಬಾಳಾಜಿ ಗ್ರಾಮದಲ್ಲಿರುವ ಯೆಲ್ಲೋ ಬ್ಯಾಂಬೂ ರೆಸಾರ್ಟ್‍ನಲ್ಲಿ ಶನಿವಾರ ನಡೆಯಿತು. ಸರಳ ಕಾರ್ಯಕ್ರಮದಲ್ಲಿ ಎರಡು ಕುಟುಂಬದ ಸದಸ್ಯರು ಪಾಲ್ಗೊಂಡರು. ತಾ. 27ರಂದು (ಇಂದು) ವಿವಾಹ ನಡೆಯಲಿದೆ.

ಮೂಲತಃ ಬೊಳ್ಳರಿಮಾಡ್ ಗ್ರಾಮದ ಪುಟ್ಟಿಚಂಡ ಉತ್ತಪ್ಪ, ಲೀಲಾ ದಂಪತಿ ಪುತ್ರ, ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿರುವ ಸಂಜನಾಳೊಂದಿಗೆ ನಿಶ್ಚಿತಾರ್ಥ ನಡೆಯಿತು. ಈ ಸಂದರ್ಭ ಉತ್ತಪ್ಪ ಅವರ ತಂದೆ ದೇವರಪುರ ಗ್ರಾಮದ ಸಣ್ಣುವಂಡ ಕುಶಾಲಪ್ಪ, ತಾಯಿ ನೀರಜ್ ಕುಶಾಲಪ್ಪ, ಸೇರಿದಂತೆ ಕುಟುಂಬಸ್ಥರು ಪಾಲ್ಗೊಂಡು ಶುಭ ಕೋರಿದರು.

ಕೊರೊನಾ ನಡುವೆ ಸರಳ ವಿವಾಹ ಭಾನುವಾರ ಆಯೋಜಿಸಲಾಗಿದೆ. ಸಂಜೆ ದಂಪತಿ ಮುಹೂರ್ತ ನಡೆಯಲಿದೆ. ಹೆಚ್ಚಿನ ಜನರು ಪಾಲ್ಗೊಳ್ಳಲು ಆಗದ ಕಾರಣ ಕುಟುಂಬದ ಸದಸ್ಯರು, ಬಂಧುಗಳಿಗೆ ಮಾತ್ರ ಆಹ್ವಾನಿಸಲಾಗಿದೆ.

2012 ರಲ್ಲಿ ದಕ್ಷಿಣ ಆಫ್ರಿಕಾ ಸರಣಿಯೊಂದಿಗೆ ಅಂತರರಾಷ್ಟ್ರೀಯ ಹಾಕಿ ಆರಂಭಿಸಿರುವ ಎಸ್. ಕೆ. ಉತ್ತಪ್ಪ 5 ಪಂದ್ಯಗಳ ಸರಣಿಯಲ್ಲಿ ಮೂರು ಗೋಲು ಹೊಡೆದು ಗಮನ ಸೆಳೆದಿದ್ದರು. ನಂತರ, 2012ರಲ್ಲಿ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲು ಉತ್ತಮ ಪ್ರದರ್ಶನ ನೀಡಿ, 2016 ರಲ್ಲಿ ನಡೆದ ರಿಯೋ ಒಲಿಂಪಿಕ್‍ನಲ್ಲಿ ಆಡಿದ್ದರು. ಒಟ್ಟು 164 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಇವರ ಸಾಧನೆಗೆ ಏಕಲವ್ಯ ಪ್ರಶಸ್ತಿ ಕೂಡ ಲಭಿಸಿದೆ.