ಹವ್ಯಾಸಿ ಸೈಕ್ಲಿಸ್ಟ್ ಕೆ.ಎನ್. ರಜನೀಶ್

ಶನಿವಾರಸಂತೆ ಪಟ್ಟಣದ ಹವ್ಯಾಸಿ ಸೈಕ್ಲಿಸ್ಟ್ ಕೆ.ಎನ್. ರಜನೀಶ್ ಬೆಂಗಳೂರಿನ ರಾಂಡೋನಿಯರ್ಸ್ ಕ್ಲಬ್ (ಬಿ.ಆರ್. ಕ್ಲಬ್) ಆಯೋಜಿಸಿದ್ದ ಮಾನ್ಸೂನ್ ಚಾಲೆಂಜಸ್ ಎಂಬ 100x10 ದಿನಗಳ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ 31x100 ರೈಡ್ ಪೂರೈಸಿ ಜಯಶಾಲಿಯಾಗಿದ್ದಾರೆ. 31 ದಿನಗಳಲ್ಲಿ 32 ಸೆಂಚುರಿಗಳಿಸಿದ್ದು, 3,348 ಕಿ.ಮೀ. ಪೂರೈಸಿ ದಾಖಲೆ ಮಾಡಿದ್ದಾರೆ.

ದೂರ ಕ್ರಮಿಸುವ ಸೈಕ್ಲಿಂಗ್ ಕ್ರೀಡೆಯೇ ರಾಂಡೋನಿಯರ್ಸ್ ಆಡೆಕ್ಸ್ ಸೈಕ್ಲಿಂಗ್‍ನಲ್ಲಿ ಇದರ ಉಗಮವಾಯಿತು. ರಾಂಡೋರಿ ಯಂಗ್‍ನಲ್ಲಿ ರೈಡರ್‍ಗಳ ಪ್ರಯತ್ನ ಸುಮಾರು 200 ಕಿ.ಮೀ.ಗೂ ಅಧಿಕವಾಗಿದ್ದು, ಫ್ರಿ-ಟರ್ಮಿನಲ್ ನಿಯಂತ್ರಣದ ನಿಲುಗಡೆಗಳನ್ನು ಮಾರ್ಗ ಮಧ್ಯೆ ಹೊಂದಿರುತ್ತದೆ ಎನ್ನುತ್ತಾರೆ ರಜನೀಶ್.

ಬಿ.ಆರ್. ಕ್ಲಬ್‍ನ ಭಾಗವಾಗಿರುವ ರಜನೀಶ್ ಕಳೆದ ವರ್ಷ ಪ್ರತಿಷ್ಠಿತ ಕ್ರೀಡೆ ಎಂದೇ ಹೆಸರುವಾಸಿಯಾಗಿರುವ ಪ್ಯಾರೀಸ್ ಬ್ರೆನ್ಸ್ ಪ್ಯಾರೀಸ್ 2019 ರಲ್ಲಿ ಭಾಗವಹಿಸಿದ್ದರು. 95 ಗಂಟೆಯಲ್ಲಿ 1,200 ಕಿ.ಮೀ. ಪೂರ್ಣಗೊಳಿಸಿ ಗುರಿಮುಟ್ಟಿ ಸಾಧನೆ ಮಾಡಿದ್ದರು.

ಕೋವಿಡ್-19 ಹಿನ್ನೆಲೆ ಕ್ಲಬ್ ವತಿಯಿಂದ ಯಾವುದೇ ಸೈಕ್ಲಿಂಗ್ ಕ್ರೀಡೆ ಆಯೋಜಿಸಿರಲಿಲ್ಲ. ಹಾಗಾಗಿ ರಜನೀಶ್ ಕೋವಿಡ್ ಕುರಿತು ಜನಜಾಗೃತಿ ಮೂಡಿಸಲು ಏನಾದರೂ ಮಾಡಬೇಕೆಂದು ತೀರ್ಮಾನಿಸಿದರು. ಆಗಸ್ಟ್ ತಿಂಗಳಲ್ಲಿ ವಿಶ್ರಾಂತಿ ಪಡೆಯದೇ ಪ್ರತಿದಿನ 100 ಕಿ.ಮೀ. ಕ್ರಮಿಸಲು ನಿರ್ಧರಿಸಿದರು. ಅದೃಷ್ಟವೋ ಎಂಬಂತೆ ಬಿ.ಆರ್. ಕ್ಲಬ್ 100x10 ದಿನಗಳ ಮಾನ್ಸೂನ್ ಚಾಲೆಂಜಸ್ ಎಂಬ ಸೈಕ್ಲಿಂಗ್ ಸ್ಪರ್ಧೆಯನ್ನು ಆಯೋಜಿಸಿತ್ತು. ಮೊದಲೇ 1 ತಿಂಗಳು ನಿರಂತರ ಸೈಕ್ಲಿಂಗ್‍ನಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದ್ದರಿಂದ ರಜನೀಶ್‍ಗೆ ಈ ಆಹ್ವಾನ ಪರೋಕ್ಷವಾಗಿ ಒದಗಿಬಂದ ಸೌಭಾಗ್ಯವಾಗಿತ್ತು. ಮಾನ್ಸೂನ್ ಚಾಲೆಂಜನ್ನು ಪೂರೈಸಲು ಸಾಧ್ಯವಾದರೂ ಪೂರ್ವ ನಿಯೋಜಿತ ಕಾರ್ಯಸೂಚಿಯಂತೆ 31x100 ಅವರನ್ನು ತಡೆಯಿತು ಎನ್ನುತ್ತಾರೆ.

ರಜನೀಶ್‍ರ ಆರಂಭಿಕ ಪ್ರಯತ್ನಗಳೆಲ್ಲ ಸ್ವಗ್ರಾಮ ಶನಿವಾರಸಂತೆಯಲ್ಲೇ ಆಗಿತ್ತು. ಆದರೆ ಗುಡ್ಡಗಾಡು ಪ್ರದೇಶವಾಗಿದ್ದರಿಂದ ಮಳೆ, ವಿಪರೀತ ಗಾಳಿ ಹಾಗೂ ರಸ್ತೆಯ ದುಸ್ಥಿತಿಯಿಂದ ಅವರು ಮೈಸೂರಿಗೆ ಸ್ಥಳ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆ ಉಂಟಾಗಿ ಅವರ ಗುರುಯನ್ನು ಅಲ್ಲಿಯೇ ಸರಿದೂಗಿಸಿದರು. ತುಂಬಾ ಸವಾಲುಗಳನ್ನು ಎದುರಿಸಲೇ ಬೇಕಾಗಿದ್ದರೂ ಅವುಗಳನ್ನೆಲ್ಲ ಅವಕಾಶವೆಂದೇ ಪರಿಗಣಿಸಿ ಸದ್ಭಳಕೆ ಮಾಡಿಕೊಂಡು ರೈಡ್‍ಗಳನ್ನು ಪೂರೈಸಿದರು.

ಮೈಸೂರಿನಿಂದ ಕೊಡಗಿಗೆ ಮರಳಿದ ಬಳಿಕ ಬೆಂಗಳೂರು, ದೇವನಹಳ್ಳಿ ಹಾಗೂ ಕೋಲಾರ ಮೊದಲಾದ ಸ್ಥಳಗಳಲ್ಲಿ 5 ರೈಡ್‍ಗಳನ್ನು ಪೂರೈಸಿದರು. ಶನಿವಾರಸಂತೆಯ ವಕೀಲ ಕೆ.ಕೆ. ನೀಲಕಂಠಪ್ಪ - ಯಶೋದ ದಂಪತಿ ಪುತ್ರ ರಜನೀಶ್ (40) ಕಾನೂನು ಪದವೀಧರರು. ಪ್ರಸ್ತುತ ಬೆಂಗಳೂರಿನ ಟಾಟಾ ಎಐಎ ಜೀವವಿಮಾ ನಿಗಮದ ಉದ್ಯೋಗಿ. ಕಳೆದ 3 ವರ್ಷಗಳಿಂದ ಸೈಕ್ಲಿಂಗ್ ಅನ್ನು ಹವ್ಯಾಸವಾಗಿ ಬೆಳೆಸಿಕೊಂಡಿದ್ದು, ಕಚೇರಿಗೂ ಇದರಲ್ಲೇ ತೆರಳಿ ಗಮನಸೆಳೆದರು. ಹಲವು ಬಾರಿ ಬೆಂಗಳೂರಿನಿಂದ ಶನಿವಾರಸಂತೆಗೆ ಸೈಕಲ್‍ನಲ್ಲೇ ಬಂದ ಉದಾಹರಣೆಗಳಿವೆ. ಪತ್ನಿ ಶುೃತಿಯೂ ಪತಿಯ ಹವ್ಯಾಸಕ್ಕೆ ಪ್ರೋತ್ಸಾಹ ನೀಡಿ ಸಹಕರಿಸುತ್ತಿದ್ದಾರೆ.

- ನರೇಶ್ಚಂದ್ರ, ಶನಿವಾರಸಂತೆ.