ಸೋಮವಾರಪೇಟೆ, ಸೆ. 27: ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅ. 11 ರಂದು ಒಳಾಂಗಣ ಕ್ರೀಡಾಕೂಟ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು.

ಮೈಕ್ರೋಸಾಫ್ಟ್ ಟೀಮ್ ಆ್ಯಪ್ ಮೂಲಕ ನಡೆದ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಅ. 11ರಂದು ಪೂರ್ವಾಹ್ನ 9 ಗಂಟೆಯಿಂದ ಸೋಮವಾರಪೇಟೆಯಲ್ಲಿ ಪತ್ರಕರ್ತರ ಕುಟುಂಬಸ್ಥರಿಗೆ ವಿವಿಧ ಕ್ರೀಡಾಕೂಟ, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆ ಹೊಂದಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ತಾಲೂಕಿಗೆ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲು ನಿರ್ಧರಿಸಲಾಯಿತು.

ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಕಾರ್ಯಕ್ರಮ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್, ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಎ. ಮುರುಳೀಧರ್, ಉಪಾಧ್ಯಕ್ಷ ಲೋಕೇಶ್‍ಸಾಗರ್, ನಿರ್ದೇಶಕರುಗಳಾದ ತೇಜಸ್ ಪಾಪಯ್ಯ, ವಿಶ್ವ ಕುಂಬೂರು, ಚೆರಿಯಮನೆ ಸುರೇಶ್, ದಿನೇಶ್ ಮಾಲಂಬಿ, ಸುನಿಲ್ ಪೊನ್ನೆಟ್ಟಿ, ವಹೀದ್‍ಜಾನ್, ಶಿವರಾಜ್ ಅವರುಗಳು ಭಾಗವಹಿಸಿದ್ದರು.