ಭಾಗಮಂಡಲ, ಸೆ. 26: ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಕಾವೇರಿ ತುಲಾ ಸಂಕ್ರಮಣ ಜಾತ್ರೆಯ ಪ್ರಯುಕ್ತ ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮ ಇಂದು ನಡೆಯಿತು. ಭಾಗಮಂಡಲದ ತಕ್ಕರಾದ ಬಲ್ಲಡ್ಕ ಕುಟುಂಬಸ್ಥರು ತಮ್ಮ ಐನ್‍ಮನೆಯಲ್ಲಿ ಒಟ್ಟು ಸೇರಿ ಅಕ್ಕಿಯನ್ನು ತಂದು ಪತ್ತಾಯಕ್ಕೆ ಹಾಕುವುದರ ಮೂಲಕ ಕಾವೇರಿ ಜಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶುಕ್ರವಾರ ಬೆಳಿಗ್ಗೆ 8.31ಕ್ಕೆ ತುಲಾ ಲಗ್ನದಲ್ಲಿ ತಕ್ಕರಾದ ಬಳ್ಳಡ್ಕ ಅಪ್ಪಾಜಿ ಅವರು ಸಾಂಪ್ರದಾಯಿಕವಾಗಿ ಅಕ್ಕಿ ಹಾಕಿದರು. ಅಕ್ಟೋಬರ್ 4ರಂದು ವೃಶ್ಚಿಕ ಲಗ್ನದಲ್ಲಿ ಬೆಳಿಗ್ಗೆ 10.33ಕ್ಕೆ ಆಜ್ಞಾ ಮುಹೂರ್ತ ಕಾರ್ಯಕ್ರಮ ನಡೆಯಲಿದೆ. ಭಾಗಮಂಡಲ - ತಲಕಾವೇರಿ ದೇವಾಲಯಗಳಲ್ಲಿ ಜಾತ್ರೆಯ ಅಂಗವಾಗಿ ದೇವಾಲಯದ ವತಿಯಿಂದ ಸ್ವಚ್ಛತಾ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ದೇವಾಲಯದ ಕಳಶ ಗೋಪುರ ಹಾಗೂ ಗರ್ಭಗುಡಿಗಳ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಭಕ್ತರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ.

ಭಾಗಮಂಡಲ ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ತಕ್ಕರಾದ ಕೋಡಿ ಮೋಟಯ್ಯ, ಬಿದ್ದಿಯಂಡ ಸುಭಾಷ್, ಕೆ.ಟಿ ರಮೇಶ್, ಮೀನಾಕ್ಷಿ, ಕಾರ್ಯನಿರ್ವಹಣಾಧಿ ಕಾರಿ ಜಗದೀಶ್‍ಕುಮಾರ್, ಪಾರುಪತ್ತೆಗಾರ ಪೊನ್ನಣ್ಣ

ಹಾಗೂ ಬಳ್ಳಡ್ಕ ಕುಟುಂಬಸ್ಥರು ಸೇರಿದಂತೆ ಸದ್ಭಕ್ತರು ಪಾಲ್ಗೊಂಡಿದ್ದರು.