ಬೆಂಗಳೂರು, ಸೆ. 26: ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕುಸಿತಗಳ ಬಗ್ಗೆ ಸರಕಾರ ಗಮನ ಹರಿಸಿದೆ. ಈಗಾಗಲೇ ಜಿಯಾಲಿಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‍ಐ) ಭೂಕುಸಿತ ಪ್ರದೇಶಗಳ ಅಧ್ಯಯನವನ್ನು ನಡೆಸುತ್ತಿದೆ ಎಂದು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಅವರು ವಿಧಾನಪರಿಷತ್‍ನಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರ ನೀಡಿದ್ದಾರೆ.ಈಗಾಗಲೇ ಅಧ್ಯಯನ ನಡೆಯುತ್ತಿದೆಯಾದರೂ ವಿಪತ್ತು ನಿರ್ವಹಣೆಯ ಭಾಗವಾಗಿ ಬರುವ ದಿನಗಳಲ್ಲಿ ನುರಿತ ಇಂಜಿನಿಯರ್‍ಗಳು ಹಾಗೂ ಭೂವಿಜ್ಞಾನಿಗಳನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸಿ ಈ ಕುರಿತು ಸೂಕ್ತ ಶಿಫಾರಸುಗಳನ್ನು ನೀಡಲು ಸೂಚಿಸಲಾಗುವದು. ಈ ಶಿಫಾರಸುಗಳ ಅನ್ವಯ ಸಂಬಂಧಪಟ್ಟ ಇಲಾಖೆಯಿಂದ ವಿವರವಾದ ಯೋಜನೆಯ ಪ್ರಸ್ತಾವನೆಯನ್ನು ತಯಾರಿಸಿ ಸರಕಾರಕ್ಕೆ ನೀಡಲು ಹಾಗೂ ತದ ನಂತರ ಅನುಷ್ಠಾನಗೊಳಿಸಲು ಸೂಚಿಸಲಾಗುವದು ಎಂದು ಕಂದಾಯ ಸಚಿವರು ಉತ್ತರ ಒದಗಿಸಿದ್ದಾರೆ.

ಕಾವೇರಿ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಭಾರೀ ಮಳೆ ಬಂದಿದ್ದು, ಗಜಗಿರಿಯೆಂಬ ಬೆಟ್ಟದ ಭಾಗವೇ ಕುಸಿದಿದೆ. ಇದರಿಂದ ಅರ್ಚಕ ಕುಟುಂಬದ ಐವರು ವಾಸಿಸುತ್ತಿದ್ದ ಮನೆ ಸಹಿತ ಜೀವಂತ ಸಮಾಧಿಯಾಗಿದ್ದಾರೆ. ಮುಂದೆಯೂ ಈ ವಿಭಾಗದಲ್ಲಿ ಇನ್ನೂ ಭಾರೀ ಅನಾಹುತವಾಗುವ ಮುನ್ಸೂಚನೆ ಇದೆ. ಈ ವಿಭಾಗದ ಗಜಗಿರಿ, ಬ್ರಹ್ಮಗಿರಿ ಮೊದಲಾದ ಬೆಟ್ಟಗಳು ನಿಧಾನವಾಗಿ ಕುಸಿಯುವ ಅಪಾಯ ಕಂಡು ಬರುತ್ತಿದೆ. ದೇಶದ ಜೀವನಾಡಿಯಾದ ಕಾವೇರಿಯ ಉದ್ಭವ ಸ್ಥಳವಾದ ಬ್ರಹ್ಮಕುಂಡಿಕೆ ಭಾಗಕ್ಕೂ ಮುಂದಿನ ಮಳೆಗಾಲದಲ್ಲಿ ಅಪಾಯ, ಎಚ್ಚರಿಕೆಯ ಗಂಟೆಯಾಗಿದೆ ಎಂದು ವೀಣಾ ಅಚ್ಚಯ್ಯ ಪ್ರಸ್ತಾಪಿಸಿದ್ದರು.

ಈ ಕೂಡಲೇ ಎಚ್ಚೆತ್ತುಕೊಂಡು, ನುರಿತ ಇಂಜಿನಿಯರ್‍ಗಳು, ತಂತ್ರಜ್ಞರುಗಳು ಹಾಗೂ ಪರಿಸರ ಯೋಜನೆಗಳನ್ನು ಬಲ್ಲವರನ್ನು ಕರೆಸಿ, ಸ್ಥಳ ಪರಿಶೀಲನೆ ನಡೆಸಿ ಮುಂದಿನ ವರ್ಷಗಳಲ್ಲಿ ಅನಾಹುತ ಸಂಭವಿಸದಂತೆ ತಕ್ಷಣವೇ ಕಾರ್ಯ ಯೋಜನೆಯನ್ನು ಪ್ರಾರಂಭಿಸಬೇಕು. ಅದು ಬೃಹತ್ತಾದ, ಅತ್ಯಂತ ಶಕ್ತಿಯುತ ತಡೆಗೋಡೆ ಇರಬಹುದು ಅಥವಾ ಬೆಟ್ಟ ಕುಸಿಯದಂತೆ ಇನ್ನಿತರ ಯಾವುದೇ ಬದಲಿ ಕ್ರಮ ಇರಬಹುದು, ಪರಿಣಿತರ ಪ್ರತ್ಯಕ್ಷ ನೇತೃತ್ವದಲ್ಲಿಯೇ ಈ ಕಾರ್ಯ ಯೋಜನೆಯನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ಕೂಡ ಅವರು ಆಗ್ರಹಿಸಿದ್ದು, ಇದಕ್ಕೆ ಸಚಿವರು ಪ್ರತಿಕ್ರಿಯಿಸಿದ್ದಾರೆ.