ಗೋಣಿಕೊಪ್ಪಲು, ಸೆ. 27: ಪ್ರತಿಷ್ಠಿತ ಅಂತರರಾಷ್ಟ್ರೀಯ ಸಂಸ್ಥೆಯಾದ ಓಸಾಟ್ (ಔSಂಂಖಿ) ಸಂಸ್ಥೆಯು ಒಂದು ಶಾಲೆಯ ಮೂಲಕ ಒಂದು ಪೂರಕ ಸಮುದಾಯವನ್ನು ಗ್ರಾಮಗಳಲ್ಲಿ ನಿರ್ಮಿಸುವಲ್ಲಿ ಯಶಸ್ಸನ್ನು ಕಾಣುತ್ತಿದೆ. ದಕ್ಷಿಣ ಕೊಡಗಿನ ಮಾಯಮುಡಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಉತ್ತಮ ಕಲಿಕೆಗಾಗಿ ರೂ. 40 ಲಕ್ಷ ವೆಚ್ಚದಲ್ಲಿ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಿದೆ. ಓಸಾಟ್ ಸಂಸ್ಥೆಯ ಪ್ರತಿನಿಧಿಗಳಾದ ಪಿ.ವಿ. ಸುಬ್ರಮಣ್ಯ, ರಮೇಶ್ ಬಾಬು ಹಾಗೂ ತಂಡ ಮಾಯಮುಡಿ ಶಾಲೆಗೆ ಇತ್ತೀಚೆಗೆ ಆಗಮಿಸಿ ಅಲ್ಲಿಯ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸುವ ಮೂಲಕ ಓಸಾಟ್ ಸಂಸ್ಥೆಯ ನಿಯಾಮಾವಳಿಗಳನ್ನು ಪ್ರಸ್ತಾಪಿಸಿ ಸಂಸ್ಥೆಯು ನೀಡುವ ಅತ್ಯಮೂಲ್ಯ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯಲು ಅನುಕೂಲವಾಗುವಂತೆ ಕ್ರಮ ವಹಿಸುವಂತೆ ಮನವಿ ಮಾಡಿದರು. ಪ್ರಸ್ತುತ ಇರುವ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಲು ಕಷ್ಟ ಸಾಧ್ಯವಾಗುತ್ತಿರುವುದರಿಂದ ಓಸಾಟ್ ಸಂಸ್ಥೆ ಸ್ಪಂದಿಸಿದೆ. ಸಂಸ್ಥೆಯ ಮತ್ತೋರ್ವ ಪ್ರತಿನಿಧಿ ಎನ್.ವಿ.ಜಿ.ಕೆ. ಭಟ್ ಅವರು ‘ಶಕ್ತಿ’ ಆಡಳಿತ ಮಂಡಳಿಯೊಂದಿಗೆ ಸಂಪರ್ಕಿಸಿ ಕೊಡಗಿನ ಶಾಲೆಯೊಂದಜ್ಜೆ ಅನುದಾನ ನೀಡುವ ಬಗ್ಗೆ ಸಂಸ್ಥೆಯ ಇಂಗಿತ ವ್ಯಕ್ತಪಡಿಸಿದರು. ‘ಶಕ್ತಿ’ಯು ಈ ಸಂಬಂಧ ಡಿಡಿಪಿಐ ಮಚ್ಚಾಡೋ ಅವರನ್ನು ಸಂಪರ್ಕಿಸಿ ಮಾಯಮುಡಿ ಶಾಲೆಯನ್ನು ಅನುದಾನಕ್ಕೆ ಆಯ್ಕೆ ಮಾಡಲಾಯಿತು. ಇವರ ಮನವಿ ಮೇರೆ ಸಂಸ್ಥೆಯ ಪ್ರಮುಖರು ಎರಡು ಬಾರಿ ಖುದ್ದು ಪರಿಶೀಲನೆ ನಡೆಸಿದರು. ಬಳಿಕ ಅವಶ್ಯವಿರುವ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆಯೊಂದಿಗೆ ಆಗಮಿಸಿದ ಸಂಸ್ಥೆಯ ನಿರ್ದೇಶಕರು ರೂ. 40 ಲಕ್ಷ ಅನುದಾನವನ್ನು ಕಟ್ಟಡ ನಿರ್ಮಾಣಕ್ಕೆ ವಿನಿಯೋಗಿಸುವ ಬಗ್ಗೆ ದಾಖಲೆ ಪತ್ರಗಳನ್ನು ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾ ಯರಿಗೆ ಹಸ್ತಾಂತರ ಮಾಡಿದರು.

ಈಗಾಗಲೇ ಶಾಲೆಯ ಅಗತ್ಯ ದಾಖಲೆಗಳನ್ನು ಸಂಸ್ಥೆಯು ಪರಿಗಣಿಸಿ ಯೋಜನೆಯನ್ನು ಮಂಜೂರು ಮಾಡಿದೆ. ನಾಲ್ಕು ಸುಸಜ್ಜಿತ ಕಟ್ಟಡಗಳು ನಿರ್ಮಾಣಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು, ದಾನಿಗಳು ಸಂಸ್ಥೆಯ ಮೂಲಕ ನೀಡಿರುವ ಹಣವನ್ನು ಲೋಪವಾಗದಂತೆ ಎಚ್ಚರಿಕೆಯಿಂದ ಬಳಸುವಂತೆ ಓಸಾಟ್ ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದರು.

ಓಸಾಟ್ ಒಂದು ಲಾಭ ರಹಿತ ಸಂಸ್ಥೆಯಾಗಿದ್ದು, ಭಾರತದ ಗ್ರಾಮೀಣ ಭಾಗದಲ್ಲಿರುವ ತೀರ ಹಳೆಯದಾದ, ಶಿಥಿಲಾವಸ್ಥೆಯಲ್ಲಿರುವ ಶಾಲೆಗಳನ್ನು ಗುರುತಿಸಿ ಸುರಕ್ಷಿತ ಹಾಗೂ ಸುಭದ್ರ ಕಟ್ಟಡಗಳನ್ನು ನಿರ್ಮಿಸಿಕೊಡುವ ಸದುದ್ದೇಶÀವನ್ನು ಹೊಂದಿದೆ. ಸ್ವಯಂ ಸೇವಕರಿಂದಲೇ ನಿಭಾಯಿಸ್ಪಡುವ ಈ ಸಂಸ್ಥೆ ದಾನಿಗಳಿಂದ ಸ್ವೀಕರಿಸುವ ಶೇ. 100 ರಷ್ಟು ಹಣವನ್ನು ಸುಭದ್ರ ಶಾಲಾ ಕಟ್ಟಡದ ನಿರ್ಮಾಣಕ್ಕೆ ಉಪಯೋಗಿಸಿ ಹಳ್ಳಿಯ ಶಾಲೆಯ ಮಕ್ಕಳು ಆರೋಗ್ಯಕರ ವಾತಾವರಣ ದಲ್ಲಿ ಶಿಕ್ಷಣ ಕಲಿತು ವಿದ್ಯಾವಂತರ ನ್ನಾಗಿಸಲು ಪ್ರೇರೇಪಿಸುತ್ತ ಬಂದಿದೆ.

2003ರಲ್ಲಿ ಓಸಾಟ್ ಸಂಸ್ಥೆಯು ಪ್ರಾರಂಭಗೊಂಡಿದ್ದು ಭಾರತ ದೇಶದ ವಿವಿಧೆಡೆಯಿಂದ ತೆರಳಿ ಅಮೇರಿಕ ದಲ್ಲಿ ಉದ್ಯೋಗ ಕಂಡುಕೊಂಡಿರುವ ಅನೇಕ

(ಮೊದಲ ಪುಟದಿಂದ) ಮಹನೀಯರು ತಮ್ಮ ತಾಯ್ನಾಡಿನ ಏಳಿಗೆಗಾಗಿ ಏನಾದರೂ ಮಾಡ ಲೇಬೇಕೆಂಬ ತುಡಿತದಿಂದ ಭಾರತ ದಲ್ಲಿ ಶಿಕ್ಷಣ ಪಡೆದು ಅಮೇರಿಕಾಕ್ಕೆ ತೆರಳಿ ಯಶಸ್ಸನ್ನು ಕಂಡ ಪ್ರತಿಭಾವಂತರು ಭಾರತ ದೇಶದ ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುವ ಮೂಲಕ ತಮ್ಮ ಹಣವನ್ನು ದೇಣಿಗೆ ರೂಪದಲ್ಲಿ ನೀಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣವನ್ನು ನೀಡುವ ಪ್ರಯತ್ನ ನಡೆಸಿದೆ ಸಂಸ್ಥೆಯ ಬಗ್ಗೆ ವಿವರಿಸಿದರು.

ಓಸಾಟ್ ಸಂಸ್ಥೆಯ ಪ್ರತಿನಿಧಿ ಗಳನ್ನು ಗೌರವಪೂರ್ವಕವಾಗಿ ಬರಮಾಡಿಕೊಂಡ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರಾದ ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡೀರ ಅರುಣ್ ಮಾಚಯ್ಯ ಮಾತನಾಡಿ, ಗ್ರಾಮೀಣ ಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಓಸಾಟ್ ಸಂಸ್ಥೆಯು ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ. ಸಂಸ್ಥೆಯು ನೀಡಿದ ಅನುದಾನವನ್ನು ಲೇಶವೂ ದುರುಪ ಯೋಗವಾಗದಂತೆ ಎಚ್ಚರಿಕೆಯಿಂದ ಸದ್ಬಳಕೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.

ಓಸಾಟ್‍ನ ಕಾರ್ಯ ಹಲವಾರು ಗ್ರಾಮಗಳಲ್ಲಿ ಅನಕ್ಷರತೆ, ಬಾಲಕಾರ್ಮಿಕ ಸಮಸ್ಯೆಗೆ ಪರಿಹಾರ ಒದಗಿಸಿ ಬಡ ಪೋಷಕರ ಅಸಹಾಯಕತೆಯನ್ನು ನಿವಾರಣೆ ಮಾಡುವಲ್ಲಿ ದಾಪುಗಾಲು ಇಟ್ಟಿದೆ. ಸದ್ಯದ ಹಾಗೂ ಬದಲಾದ ಸನ್ನಿವೇಶದಲ್ಲಿ ನಗರ ಪ್ರದೇಶದಲ್ಲಿ ಶಿಕ್ಷಣ ಪದ್ದತಿಯು ಸಮೂಹ/ಡಿಜಿಟಲ್ ಮಾಧ್ಯಮದ ಕಡೆಗೆ ಹೊರಳುತ್ತಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಯ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗುತ್ತಿ ದ್ದಾರೆ. ಈ ನಿಟ್ಟಿನಲ್ಲಿ ಓಸಾಟ್ ಸಂಸ್ಥೆಯು ಡಿಜಿಟಲೀಕರಣ, ಮೂಲ ಸೌಕರ್ಯಗಳನ್ನು ಗ್ರಾಮೀಣ ಪ್ರದೇಶದ ಮಕ್ಕಳಿಗೆ ದೊರಕಿಸಿ ಕೊಡಲು ಕಾರ್ಯ ಪ್ರವೃತ್ತವಾಗಿದೆ. ಯೋಜನೆಗಳನ್ನು ರೂಪಿಸಿಕೊಂಡಿದೆ ಎಂದು ಸುಬ್ರಮಣ್ಯ ತಿಳಿಸಿದರು.

ಈ ಸಂದರ್ಭ ಶಾಲೆಯ ಹಳೆಯ ವಿದ್ಯಾರ್ಥಿ ಆಪಟ್ಟೀರ ಟಾಟೂ ಮೊಣ್ಣಪ್ಪ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಬ್ದುಲ್ ರಹೀಂ, ಗ್ರಾಮ ಪಂಚಾಯಿತಿ ಸದಸ್ಯ ಸಿ.ಕೆ. ಚಿಣ್ಣಪ್ಪ, ಮುಖ್ಯ ಶಿಕ್ಷಕರಾದ ಸೋಫಿಯಾ, ಸಿ.ಆರ್.ಪಿ. ಪುಷ್ಪ, ಶಿಕ್ಷಕರಾದ ಸತ್ಯ, ರಾಗಿಣಿ, ಲೀಲಾ, ಸಹನಾ, ಸೇರಿದಂತೆ ಗೋಣಿಕೊಪ್ಪಲುವಿನ ಕೆ.ಪಿ. ಆಶ್ರಫ್ ಉಪಸ್ಥಿತರಿದ್ದರು.

-ವಿಶೇಷ ವರದಿ: ಹೆಚ್.ಕೆ. ಜಗದೀಶ್