ಕಣಿವೆ, ಸೆ. 26 : ಮರಗಳ ಸಾಗಾಣಿಕೆ, ಅರಣ್ಯ ಭೂಮಿಯ ಒತ್ತುವರಿ, ಮಿತಿಯಿಲ್ಲದ ಗಣಿಗಾರಿಕೆ ಹಾಗೂ ಜನೋಪಯೋಗಿ ಕೆಲಸಗಳಿಗೆಂದು ಅರಣ್ಯವನ್ನೆಲ್ಲಾ ನಾಶ ಮಾಡಿ ಜಲಾಶಯ, ಹೆದ್ದಾರಿ, ವಿದ್ಯುತ್ ಮಾರ್ಗ, ರೈಲ್ವೆ ಮಾರ್ಗ ಹೀಗೆ ಹತ್ತಾರು ಕಾರಣಗಳಿಂದ ಆಗುತ್ತಿರುವ ಅರಣ್ಯ ಕಬಳಿಕೆ ಕಾಡಾನೆಗಳ ಜೀವ ಮತ್ತು ಜೀವನವನ್ನು ಹಿಂಡುತ್ತಿವೆ. ಕಾಡಾನೆಗಳಿಗೆ ಕಾಡಿನೊಳಗೆ ಬೇಕಾದ ಆಹಾರದ ಸೊಪ್ಪು, ಸದೆ, ಮೃದುವಾದ ಮರದ ತೊಗಟೆಗಳುಳ್ಳ ಆಲ, ಗೂಳಿ, ಬಿದಿರು, ಹಲಸು, ಹತ್ತಿ ಮೊದಲಾದ ಮರಗಳು ಸಿಗದೆ ರಾತ್ರಿಯ ಸಮಯ ನಾಡಿನೊಳಕ್ಕೆ ನುಗ್ಗಿ ರೈತರು ಬೆಳೆದ ಬೆಳೆಗಳನ್ನು ತಿಂದು ಹಸಿವು ನೀಗಿಸಿಕೊಳ್ಳುತ್ತಿವೆ. ಈ ಆನೆಗಳು ಆಹಾರ ಅರಸುವ ಭರದಲ್ಲಿ ಕಾಲಿಗೆ ಸಿಕ್ಕವನ್ನೆಲ್ಲಾ ತುಳಿದು ಸಾಗುವುದರಿಂದ ತಿಂದು ನಾಶವಾದ್ದಕ್ಕಿಂತ, ತುಳಿದು ನಾಶವಾದ ಪ್ರಮಾಣವೇ ಹೆಚ್ಚು. ಕಾಡಾನೆಗಳು ಆಹಾರಕ್ಕಾಗಿ ಹಾಹಾಕಾರ ಪಡುವ ಸಂಕಟ ಅರಣ್ಯಾಧಿಕಾರಿಗಳಿಗೂ ಅರಿವಾಗುತ್ತಿಲ್ಲ. ಯೋಜನೆಗಳನ್ನು ರೂಪಿಸಬೇಕಾದ ಸರ್ಕಾರವೂ ಈ ಕಾಡಾನೆಗಳ ಆಕ್ರಂದನ ವನ್ನು ಕೇಳಿಸಿಕೊಳ್ಳುತ್ತಿಲ್ಲ. ದಿನವೊಂದಕ್ಕೆ 350 ಕೆಜಿ ಯಷ್ಟು ಆಹಾರವನ್ನು ತಿನ್ನಬೇಕಾದ 250 ಲೀಟರ್ ನೀರನ್ನು ಕುಡಿಯಬೇಕಾದ ಈ ಕಾಡಾನೆಗಳಿಗೆ ಕಾಡಿನಲ್ಲಿ ನೀರಾಗಲೀ ಆಹಾರವಾಗಲೀ ಏನೂ ಕೂಡ ಸಿಗುತ್ತಿಲ್ಲ. ದಿನಂಪ್ರತೀ ಕನಿಷ್ಟ 4 ಕಿಮೀ ನಿಂದ 25 ಕಿ.ಮೀ ನಷ್ಟು ದೂರವನ್ನು ಕ್ರಮಿಸುವ ಕ್ರಮವನ್ನು ಅನುಸರಿಸುವ ಕಾಡಾನೆಗಳಿಗೆ ಜನರ ಭಯೋತ್ಪಾದನಾ ಚಟುವಟಿಕೆಗಳು ಭಯ ಹುಟ್ಟಿಸುತ್ತಿವೆ. ಅಂದರೆ ಕಾಡಿನೊಳಗೆ ಜಾನುವಾರು ಗಳನ್ನು ಮೇಯಲು ಓಡಿಸುವ, ಉರುವಲಿಗಾಗಿ ಸೌದೆಗಳನ್ನು ಕಡಿಯುವ, ವನ್ಯಜೀವಿಗಳನ್ನು ಭೇಟೆಯಾಡುವ ವ್ಯಾಪಾರಕ್ಕೆ ಮರಗಳನ್ನು ಕದ್ದೊಯ್ಯುವ ಕಳ್ಳ- ಖದೀಮರಾದಿಯಾಗಿ ಕಾಡಾನೆಗಳ ಚಟುವಟಿಕೆಗಳಿಗೆ ಇತ್ತೀಚಿನ ದಿನಗಳಲ್ಲಿ ಮನುಷ್ಯನ ಉಪಟಳವೇ ಕಾಡಾನೆಗಳ ಪಾಲಿಗೆ ಬಹು ದೊಡ್ಡ
(ಮೊದಲ ಪುಟದಿಂದ) ಕಂಟಕವಾಗಿದೆ ಎನ್ನುತ್ತಾರೆ ಸಾಹಿತಿ ಕಣಿವೆ ಭಾರದ್ವಾಜ್.
ಕಾಡಾನೆಗಳ ಕಾರಿಡಾರ್
ಕೊಡಗು ಜಿಲ್ಲೆಯ ಅರಣ್ಯಗಳಲ್ಲಿ ಪ್ರಸಕ್ತ ನಾಗರಹೊಳೆ ಅಭಯಾರಣ್ಯ ಸೇರಿದಂತೆ ಸರಿ ಸುಮಾರು 1500 ಆನೆಗಳು ಇವೆ ಎನ್ನಲಾಗಿದ್ದು, ದಿನವೊಂದಕ್ಕೆ ಕನಿಷ್ಟ 20 ರಿಂದ ಗರಿಷ್ಠ 30 ಕಿಮೀ ಅಂತರ ಕ್ರಮಿಸುವ ಕಾಡಾನೆಗಳು, ಮೂರ್ನಾಲ್ಕು ದಶಕಗಳ ಹಿಂದೆ ಕೊಡಗಿನ ಪುಷ್ಪಗಿರಿ ಬೆಟ್ಟದಿಂದ ಈಗ ನಿರ್ಮಾಣ ಆಗಿರುವ ಹಾರಂಗಿ, ಚಿಕ್ಲಿಹೊಳೆ, ಕಬಿನಿ ಜಲಾಶಯಗಳ ಮಾರ್ಗವಾಗಿ ತಮಿಳುನಾಡಿನ ಮಧುಮಲೈ ಬೆಟ್ಟ ಪ್ರದೇಶಗಳನ್ನು ತಲುಪಿ ಮತ್ತದೇ ಮಾರ್ಗದಲ್ಲಿ ಪುಷ್ಪಗಿರಿಯತ್ತ ಮರಳುತ್ತಿದ್ದ ಕಾಡಾನೆಗಳ ಕಾರಿಡಾರ್ ದಶಕಗಳ ಈಚೆಗೆ ಮಾನವ ಚಟುವಟಿಕೆಗಳಿಂದಾಗಿ ಮುಚ್ಚಲ್ಪಟ್ಟಿದೆ. ಜಲಾಶಯಗಳ ನಿರ್ಮಾಣಕ್ಕೂ ಮುನ್ನಾ ಹಚ್ಚ ಹಸಿರಿನಿಂದ ತುಂಬಿದ ಗಿಡ ಮರಗಳ ಕಾನನವೂ ಖಾಲಿಯಾಗಿದೆ. ಉಳಿದಿರುವ ಅರಣ್ಯಗಳಲ್ಲಿ ಕಾಡಾನೆಗಳ ಹಸಿವು ನೀಗಿಸುವ ಗಿಡ ಮರಗಳೇ ಇಲ್ಲ. ಎಲ್ಲವೂ ಖಾಲಿ ಖಾಲಿ.ಹಾಗಾಗಿ ಇದೀಗ ಇರುವ ಕಾಡಾನೆಗಳ ಗುಂಪು ಅವು ಇರುವಲ್ಲೇ ಹತ್ತಿಪ್ಪತ್ತು ಕಿ.ಮೀ ಆಸುಪಾಸಿನಲ್ಲೇ ಗಿರಕಿ ಹೊಡೆಯುತ್ತಿರುವ ಕಾರಣ ಅಲ್ಲಲ್ಲಿ ಸಿಕ್ಕ ರೈತರ ಕೃಷಿ ಉತ್ಪನ್ನಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ ಎನ್ನುತ್ತಾರೆ ಭಾರದ್ವಾಜ್.
ಸರ್ಕಾರದ ಕ್ರಮಗಳಲ್ಲೂ ದೋಷ
ಕಾಡಾನೆಗಳು ಮೂರು ದಶಕಗಳ ಹಿಂದೆ ಹಾಯಾಗಿ ವಿರಮಿಸುತ್ತಾ ತಾನು ನಡೆವ ದಾರಿಯಲ್ಲಿ ಸಿಕ್ಕವುಗಳನ್ನು ತಿಂದುಂಡು ಬದುಕುತ್ತಿದ್ದವು. ಆದರೆ, ಕೆಲವೆಡೆಗಳಲ್ಲಿ ರೂಪಿಸಿದ ಸ್ವಾಭಾವಿಕವಾಗಿ ಬೆಳೆದಿದ್ದ ಕಾಡು ಕಡಿದು ನೆಡು ತೋಪು ಮಾಡಿದ ಅರಣ್ಯ ಇಲಾಖಾ ಕ್ರಮಗಳು ಕಾಡಾನೆಗಳನ್ನು ಉಪವಾಸ ಕೆಡಹಿದವು. ಅಂದರೆ ದಶಕಗಳಿಂದ ಅರಣ್ಯಗಳಲ್ಲಿ ಸ್ವಾಭಾವಿಕವಾಗಿ ಬೆಳೆದಿದ್ದ ಬಿದಿರು, ಹಲಸು, ಆಲ, ಹತ್ತಿ ಮುಂತಾದ ಕಾಡಾನೆಗಳು ಮೆಲ್ಲುವ ತೊಗಟೆಗಳ ಮರಗಳು ಖಾಲಿಯಾದಂತೆ ಮತ್ತದೇ ಜಾತಿಯ ಮರಗಳನ್ನು ಬೆಳೆಸುವಲ್ಲಿ ಅರಣ್ಯ ಇಲಾಖೆ ಕಳೆದ ಹತ್ತಾರು ವರ್ಷಗಳಿಂದ ವಿಫಲವಾಯಿತು. ಪ್ರತೀ ವರ್ಷದ ಮುಂಗಾರು ಮಳೆಯಲ್ಲಿ ಕಾಟಾಚಾರಕ್ಕೆಂಬಂತೆ ಬೋಳು ಅರಣ್ಯಗಳಲ್ಲಿ ಬೀಜ ಬಿತ್ತನೆ ಮಾಡಿ ಕೈ ತೊಳೆದುಕೊಂಡಿತೇ ಹೊರತು, ಅಲ್ಲಿಗೆ ದನಕರುಗಳು ಹೋಗದಂತೆ ತಡೆಯುವ, ಬಿತ್ತಿದ ಬೀಜಗಳು ಬೆಳೆವುದನ್ನು ಬೇರಾವುದೇ ಪ್ರಾಣಿಗಳು ತೆರಳಿ ತುಳಿದು ನಾಶವಾಗದಂತೆ ಪರ್ಯಾಯ ಪರಿಹಾರೋಪಾಯಗಳನ್ನು ಅನುಸರಿಸುವಲ್ಲಿ ಅರಣ್ಯ ಇಲಾಖೆ ಎಡವಿತು. ಇದರಿಂದಾಗಿ ಇಂದು ಕಾಡಾನೆ ಹಾಗೂ ಮಾನವ ಸಂಘರ್ಷ ಮಿತಿ ಮೀರಲು ಸಾಧ್ಯವಾಗಿದೆ.
ಕಾಡಾನೆ ತಡೆಗೆ ಕೋಟಿ ಕೋಟಿ ಯೋಜನೆ
ಅರಣ್ಯದ ಅಂಚಿನಲ್ಲಿರುವ ರೈತರ ತೋಟ, ಹೊಲ-ಗದ್ದೆಗಳಿಗೆ ಕಾಡಾನೆಗಳು ಧಾವಿಸದಂತೆ ಕಂದಕ ನಿರ್ಮಾಣ, ಸೋಲಾರ್ ಬೇಲಿ ನಿರ್ಮಾಣ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ವ್ಯರ್ಥ ಯೋಚನೆಗಳನ್ನು ಯೋಜನೆಗಳಾಗಿ ರೂಪಿಸಲು ಕೋಟಿ ಕೋಟಿ ರೂಗಳ ಹಣವನ್ನು ಅಪವ್ಯಯ ಮಾಡಲಾಗುತ್ತಿದೆ. ಆದರೆ ಬೆಳೆಗಳ ಮೇಲೆ ಕಾಡಾನೆಗಳ ಧಾಳಿಗೂ ತಡೆಯಿಲ್ಲ. ನಾಡಿನತ್ತ ಕಾಡಾನೆಗಳ ಹಾವಳಿಯೂ ನಿಂತಿಲ್ಲ. ಅತ್ತ ತಾನು ಕಷ್ಟಪಟ್ಟು ಬೆಳೆದ ಬೆಳೆ ಕ್ಷಣಾರ್ಧದಲ್ಲಿ ಕಾಡಾನೆಗಳ ಪಾಲಾಯಿತಲ್ಲ ಎಂಬ ರೈತನ ಆಕ್ರಂದನವೂ ನಿಲ್ಲುತ್ತಿಲ್ಲ.
ಬೆಳೆ ಪರಿಹಾರದ ಕ್ರಮವೂ ಸರಿಯಿಲ್ಲ
ಕಾಡಾನೆಗಳ ಹಾವಳಿಯಿಂದ ಲಕ್ಷ ಲಕ್ಷ ರೂ. ನಷ್ಟಕ್ಕೆ ಸಿಲುಕುವ ಕಾಡಂಚಿನ ಬೆಳೆಗಾರರಿಗೆ ಅರಣ್ಯ ಇಲಾಖೆ ಈಗ ಕೊಡುತ್ತಿರುವ ಬೆಳೆ ಪರಿಹಾರ ಯಾವುದಕ್ಕೂ ಸಾಲುತ್ತಿಲ್ಲ. ಉದಾಹರಣೆಗೆ ನೂರು ರೂ ನಷ್ಟಕ್ಕೆ ಅರಣ್ಯ ಇಲಾಖೆ ಕೇವಲ ಐದರಿಂದ ಆರು ರೂ ಕೊಡುತ್ತಿದೆ. ಆ ಹಣವನ್ನು ಪಡೆಯಲು ಬಡ ರೈತರು ಹತ್ತಾರು ಬಾರಿ ಇಲಾಖೆಯ ಮೆಟ್ಟಿಲು ತುಳಿಯಬೇಕು. ಕಾಡಾನೆ ಹಾವಳಿ ನಿಯಂತ್ರಣಕ್ಕೆಂದು ಕಂದಕ ತೆಗೆಯಲು ಬಳಸುವ ಹಣವನ್ನು ಕಾಡಂಚಿನಲ್ಲಿರುವ ರೈತರಿಗೆ ಬೆಳೆಗಾರರಿಗೆ ನೀಡಿದರೆ ಅವರೇ ಅವರ ತೋಟ, ಹೊಲ ಗದ್ದೆಗಳ ಸುತ್ತಲೂ ಶಾಶ್ವತವಾದ ಆನೆತಡೆ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ ಇಲಾಖೆ ವಾಸ್ತವವನ್ನು ಅರಿತು ಅದಕ್ಕೆ ಸರಿಯಾಗಿ ಸ್ಪಂದಿಸುವ ಕೆಲಸವನ್ನು ಮಾಡುತ್ತಿಲ್ಲ. ಒಟ್ಟಾರೆ ಕಾಡಂಚಿನ ರೈತಾಪಿಗಳಿಗೆ ಅತ್ತ ಅರಣ್ಯ ಇಲಾಖೆಯ ಬಿಳಿಯಾನೆಗಳೆಂಬ ಹಿರಿಯ ಅಧಿಕಾರಿಗಳಿಂದ ಸರಿಯಾದ ಯೋಜನೆಗಳು ಜಾರಿಯಾಗುತ್ತಿಲ್ಲ. ಅಂದರೆ ಆನೆ ನಡೆದದ್ದೇ ದಾರಿ ಎಂಬಂತೆ, ಈ ಐಎಫ್ಎಸ್ ಅಧಿಕಾರಿಗಳು ಹೇಳಿದ್ದೇ ಕಾನೂನು. ಇತ್ತ ಅರಣ್ಯಗಳಲ್ಲಿ ಕಾಡಾನೆಗಳಿಂದ ಕಾಟವೂ ತಪ್ಪುತ್ತಿಲ್ಲ. ಬೆಳೆದ ಫಸಲನ್ನು ತೆಗೆದುಕೊಳ್ಳುವ ಆಸೆಯಿಂದ ಮತ್ತು ಆನೆಗಳಿಂದ ಬೆಳೆ ರಕ್ಷಿಸಿಕೊಳ್ಳಲು ರಾತ್ರಿ ಕಾವಲಿಗೆ ಸಾಲ ಮಾಡಿ ಪಟಾಕಿ ತಂದು ಅವುಗಳನ್ನು ಹಚ್ಚುವ ಮತ್ತು ಸಿಡಿ ಮದ್ದು ಸಿಡಿಸುವ ಮೂಲಕ ನಿತ್ಯವೂ ವ್ಯರ್ಥವಾದ ದೀಪಾವಳಿ ಆಚರಿಸುವ ರೈತಾಪಿಗಳ ಬದುಕಿಗೆ ಆನೆಗಳಿಂದ ಮುಕ್ತವಾಗಿ ಬೆಳೆ ಬೆಳೆವ ಹೊಸ ಬೆಳಕು ಯಾವಾಗ ಇವರ ಮೊಗದಲ್ಲಿ ಮೂಡುತ್ತದೋ ಕಾದು ನೋಡಬೇಕಿದೆ.
ವಿಶೇಷ ವರದಿ: ಕೆ.ಎಸ್.ಮೂರ್ತಿ