ದಕ್ಷಿಣ ಭಾರತದ ಭಾಗ್ಯದಾತೆ, ಕೊಡಗಿನ ಪರಮಪವಿತ್ರ ಆರಾಧ್ಯದೇವಿ, ದಕ್ಷಿಣದ ಅಷ್ಟಕೋಟಿ ಜನರ ಜೀವನಾಧಾರಕಿ, ನಿಸರ್ಗ ದೇವಿ, ಪಾಪನಾಶಕಿ, ಪುಣ್ಯಪ್ರದಾಯಿನಿ... ಎಂಬಿತ್ಯಾದಿ ಹೆಗ್ಗಳಿಕೆಗೆ ಒಳಪಟ್ಟಿರುವ ಶ್ರೀ ಕಾವೇರಿಮಾತೆಯನ್ನು. ಆದಿಶ್ರೀ ಕಾವೇರಮ್ಮೆಯನ್ನು ಭಕ್ತಾದಿಗಳು ಹಲವು ವಿಧದಲ್ಲಿ ಪೂಜಿಸುತ್ತಾರೆ, ಸ್ತುತಿಸುತ್ತಾರೆ. ಶ್ರೀ ಕಾವೇರಿ ದೇವಿಗೆ ಸಂಬಂಧಿಸಿದಂತೆ ವರ್ಷದ ತುಲಾಮಾಸದಲ್ಲಿ : ಕಾವೇರಿ ಸಂಕ್ರಮಣ ಹಬ್ಬ-ಕಾವೇರಿ ಜಾತ್ರೆ - ತೀರ್ಥೋದ್ಭವ-ತೀರ್ಥಪೂಜೆ-ಕಣಿಪೂಜೆ-ಪತ್ತಾಲೋದಿ ಎನ್ನುವ ವಿಶಿಷ್ಟ ಆಚರಣೆಗಳು ತನ್ನದೇ ಆದ ಧಾರ್ಮಿಕ ಮಹತ್ವ ಪಡೆದಿದೆ. ಕಾವೇರಿ ಸಂಕ್ರಮಣ : ಕಾವೇರಿ ಚಂಗ್ರಾಂದಿ ಹೆಸರಿನ ಕಾವೇರಿ ಧಾರ್ಮಿಕ ಜಾತ್ರೆಗೆ ವಿಶಿಷ್ಟ ಪರಂಪರೆ-ಐತಿಹ್ಯ ಇದೆ. ಋಷಿ ಶ್ರೇಷ್ಠರಾದ ಕವೇರಮುನಿಯ ದಿವ್ಯಪುತ್ರಿ ಕಾವೇರಿಯು ಪ್ರಸಿದ್ಧ ಸಪ್ತಋಷಿಗಳಲ್ಲಿ ಮಹಿಮಾವಂತರಾದ ಅಗಸ್ತ್ಯರನ್ನು ಷರತ್ತಿಗೊಳಪಟ್ಟು ವಿವಾಹ ಆಗುತ್ತಾಳೆ. ಕೆಲಕಾಲಾನಂತರ ಷÀರತ್ತು ಉಲ್ಲಂಘಿಸಿದರೆಂಬ ನೆವನದಲ್ಲಿ, ತನ್ನ ಮನದಾಸೆಯಂತೆ, ಕಾವೇರಿಯು ಅಗಸ್ತ್ಯರನ್ನು ತ್ಯಜಿಸಿ, ಜಲರೂಪದಲ್ಲಿ ನದಿಯಾಗಿ ಮುಂದಕ್ಕೆ ಹರಿಯುತ್ತಾಳೆ. ಕಾವೇರಮ್ಮೆ ಯನ್ನು ಕುಲದೇವಿ ಎಂದು ನಂಬಿ ಬದುಕು ಸಾಗಿಸುತ್ತಿದ್ದ ಕೊಡವರು, ಇದರಿಂದ ವಿಚಲಿತರಾಗಿ, ಕಾವೇರಿ ಮಾತೆಯನ್ನು ಭಕ್ತಿ ಭಾವಾವೇಶ ದಿಂದ ತಡೆಯಲು ಮುನ್ನುಗ್ಗುತ್ತಾರೆ. ಹರಿವ ನೀರಿನ ರಭಸಕ್ಕೆ ಸ್ತ್ರೀಯರ ಸೀರೆಯ ನೆರಿಗೆ ಹಿಂದೆ ಸರಿಯುತ್ತದೆ. ಭಕ್ತಾದಿಗಳ ಭಾವಾವೇಶವನ್ನರಿತ ಕಾವೇರಿ ಬಲಮುರಿಯಲ್ಲಿ ಅವರನ್ನು ಕುರಿತು ತನ್ನ ಲೋಕೋಪಕಾರದ ಉದ್ದೇಶವನ್ನು ವಿವರಿಸಿದ್ದಲ್ಲದೆ, ತನ್ನನ್ನು ಮನಸಾರೆ ನಂಬಿ ಸತ್ಯವಂತರಾಗಿ ಬಾಳಿ; ನಿಮ್ಮನ್ನೂ, ನಿಮ್ಮ ಭೂಮಿ ಕಾಣಿಯನ್ನೂ ನಾನು ಸದಾ ಕಾಪಾಡುತ್ತೇನೆ. ವರ್ಷಕ್ಕೊಮ್ಮೆ ತುಲಾಮಾಸ ಪ್ರಥಮ ದಿನ ತೀರ್ಥರೂಪಿಣಿಯಾಗಿ ತಲಕಾವೇರಿ ಯಲ್ಲಿ ದರ್ಶನ ನೀಡುತ್ತೇನೆ. ಎಂದು ಅಭಯಾಶೀರ್ವಾದ ನೀಡಿ ಸಂತೈಸುತ್ತಾಳೆ. ಹೀಗೆ, ತುಲಾಮಾಸ, ಅಂದರೆ ಅಕ್ಟೋಬರ್ 17-18 ರಂದು ಕಾವೇರಿ ಸಂಕ್ರಮಣ-ಕಾವೇರಿ ಪವಿತ್ರ ತೀರ್ಥೋದ್ಭವ-ಕಾವೇರಿ ಧಾರ್ಮಿಕ ಜಾತ್ರೆ ನಡೆಯುತ್ತದೆ. ಭಾಗಮಂಡಲ-ತಲಕಾವೇರಿ, ಹರಿಶ್ಚಂದ್ರಪುರ, ಬಲಮುರಿ, ಗುಯ್ಯ... ಇಂತಹ ಭಕ್ತಿ ಕೇಂದ್ರದಲ್ಲಿ ಕಾವೇರಿಹಬ್ಬ-ಜಾತ್ರೆಯು ಸಾರ್ವಜನಿಕ ವಾಗಿ ನಡೆಯುತ್ತದೆ.

ಬೊತ್ತ್ ಕುತ್ತ್‍ವೊ : ಕಾವೇರಿ ದೇವಿಯನ್ನು ನಂಬಿ, ವ್ಯವಸಾಯ, ಕಾಡುಬೇಟೆಯಂತಹ ವೃತ್ತಿಯಲ್ಲಿ ಅನಾಗರಿಕ ಜೀವನ ಸಾಗಿಸುತ್ತಿದ್ದ ಅಂದಿನ ಕೊಡವರಿಗೆ ದ್ವಾಪರಯುಗದಲ್ಲಿ ಅನಿರೀಕ್ಷಿತವಾದೊಂದು ಪ್ರಸಂಗ ಎದುರಾಗುತ್ತದೆ. ಸತ್ಯ-ಧರ್ಮದ ಅಂದಿನ ಕಾಲಘಟ್ಟದ ರಾಜಕೀಯ ನಿಯಮಾನುಸಾರ, ಪಾಂಡವ ವಂಶಜರು ಸಾಮ್ರಾಜ್ಯ ವಿಸ್ತರಣೆಯ ನಿಮಿತ್ತ ಉತ್ತರದಿಂದ ದಕ್ಷಿಣದ ಕಡೆಗೆ ಬಂದಲ್ಲಿ... ಕೊಡಗಿನ ರಮ್ಯ ರಮಣೀಯ ಪ್ರಾಕೃತಿಕ ಸೊಬಗಿಗೆ ಮರುಳಾಗುತ್ತಾರೆ. ಸತ್ಯ ಸಂಧರೂ, ಪರಾಕ್ರಮಿಗಳೂ ಆಗಿದ್ದ ಕ್ಷತ್ರಿಯ ಪರಂಪರೆಯ ಕೊಡವ ಮುಖಂಡರನ್ನು ಭೇಟಿಯಾಗಿ, ತಮ್ಮ ಸಾಮ್ರಾಜ್ಯ ವಿಸ್ತರಣೆ ಯೋಜನೆಯಂತೆ ಸಹ್ಯಾದ್ರಿ ಪರ್ವತ ಶ್ರೇಣಿಯ ಭೂ ಭಾಗದ ಒಡೆತನವನ್ನು ತಮ್ಮ ಸ್ವಾಧೀನಕ್ಕೆ ಒಪ್ಪಿಸಬೇಕೆಂದೂ; ತಪ್ಪಿದಲ್ಲಿ ಯುದ್ಧಾದಿ ಕ್ರಮಗಳ ಮೂಲಕ ಸ್ವಾಧೀನ ಪಡಿಸಿ ಕೊಳ್ಳಲು ಮುಂದಾಗ ಬೇಕಾಗುತ್ತದೆ ಎಂದೂ ಅಗ್ರಹಿಸುತ್ತಾರೆ.

ಅನಿರೀಕ್ಷಿತವಾದ ಈ ಪ್ರಸಂಗದಿಂದ ವಿಚಲಿತರಾದ ಕೊಡವ ಮುಖಂಡರು, ಮುಂದಿನ ಕ್ರಮದ ಮಾರ್ಗ ದರ್ಶನಕ್ಕಾಗಿ ಶ್ರೀ ಕಾವೇರಿಯ ಮೊರೆ ಹೋಗುತ್ತಾರೆ. ಆಗ ಕಾವೇರಿದೇವಿ... ಈ ಪ್ರಕರಣ ಇತ್ಯರ್ಥಗೊಳಿಸಲು ಮುಂದಿನ ವರ್ಷ ಇದೇ ಸಮಯದಲ್ಲಿ... ಕಾವೇರಿ ಸಂಕ್ರಮಣ ಸಂದರ್ಭದಲ್ಲಿ ಕೊಡಗಿಗೆ ಆಗಮಿಸುವಂತೆ ಪಾಂಡವ ಪ್ರತಿನಿಧಿಗಳಿಗೆ ಬಿನ್ನವಿಸುವಂತೆ ಸೂಚಿಸುತ್ತಾಳೆ. ಪಾಂಡವ ಪ್ರತಿನಿಧಿಗಳು ನಿರ್ಗಮಿಸಿದ ನಂತರ ಕಾವೇರಿದೇವಿ ಕೊಡವರಿಗೆ ಧಾರ್ಮಿಕ ಸೂತ್ರವೊಂದನ್ನು ಪ್ರಸ್ತಾಪಿಸುತ್ತಾಳೆ. ಕಾವೇರಿ ಸಂಕ್ರಮಣ ಸಂದರ್ಭದಲ್ಲಿ ಮನೆ-ಮಾರು, ಹೊಲ-ಗದ್ದೆ, ಕಣ-ಕೊಟ್ಟಿಗೆ, ಬಾವಿ-ಕೆರೆ ಇತ್ಯಾದಿ ಎಲ್ಲಾ ಸ್ಥಿರ ಆಸ್ತಿಗೆ ``ಬೊತ್ತ್'' ಚುಚ್ಚುವುದನ್ನು ವಿವರಿಸುತ್ತಾಳೆ. ಇದರಂತೆ ರೈತಾಪಿ ಜನರು ``ಬೊತ್ತ್‍ಸೂತ್ರ'' ಪ್ರಯೋಗಿಸುತ್ತಾರೆ.

ಪಾಂಡವ ಪ್ರತಿನಿಧಿಗಳು ಮುಂದಿನ ವರ್ಷ ತುಲಾ ಸಂಕ್ರಮಣ ಸಂದರ್ಭದಲ್ಲಿ ಕೊಡಗಿಗೆ ಆಗಮಿಸಿ, ಸಮಗ್ರ ಭೂಮಿಯನ್ನು ತಮಗೊಪ್ಪಿಸುವಂತೆ ಆಗ್ರಹಿಸುತ್ತಾರೆ. ಆಗ ಕೊಡವ ಮುಖಂಡರು ತಮ್ಮ ಮನೆ-ಮಾರು, ಹೊಲ-ಗದ್ದೆ, ಬಾಣೆ-ಬಯಲು, ಕಣ-ಕೊಟ್ಟಿಗೆ, ಬಾವಿ-ಕೆರೆ ಎಲ್ಲದಕ್ಕೂ ಶ್ರೀ ಕಾವೇರಮ್ಮೆಯ ದಿವ್ಯಾಜ್ಞೆಯಂತೆ ಶಾಸ್ತ್ರೋಕ್ತವಾಗಿ ಬೊತ್ತು ಚುಚ್ಚಿರುವುದನ್ನು ತೋರಿಸುತ್ತಾರೆ. ಇವೆಲ್ಲವೂ ಆದಿಶ್ರೀ ಕಾವೇರಮ್ಮೆಯ ಆವಾಸಸ್ಥಾನಕ್ಕೆ ಒಳಪಟ್ಟುದುದೆಂದೂ; ಶ್ರೀಮಾತೆಯ ಆಣತಿಯಂತೆ, ಆಕೆಯ ಮೇಲುಸ್ತುವಾರಿಕೆ ಕುರುಹಾಗಿ ``ಧಾರ್ಮಿಕ ಬೊತ್ತ್' ಚುಚ್ಚ ಲಾಗಿದೆಯೆಂದೂ ವಿನಮ್ರವಾಗಿ ವಿವರಿಸುತ್ತಾರೆ. ಶ್ರೀ ಪಾರ್ವತಿ ದೇವಿಯ ಅವತಾರದ ಶ್ರೀ ಕಾವೇರಮ್ಮೆಯ ದಿವ್ಯ ವೃತ್ತಾಂತ ವನ್ನು ಕೇಳಿದ ಪಾಂಡವ ವಂಶದವರು ಅಲ್ಲಿಂದ ವಾಪಸಾಗುತ್ತಾರೆ. ಅಂದಿನಿಂದ ಇಂದಿನ ವರೆಗೂ ಈ ಬೊತ್ತ್ ಸಂಪ್ರದಾಯ ನಡೆಯುತ್ತಿದೆ.

ಕಣಿಪೂಜೆ : ಕಾವೇರಿ ಪುಣ್ಯ ತೀರ್ಥೋದ್ಭವದ ಮರುದಿನ ಪ್ರಾತಃಕಾಲ ಕಾವೇರಿ ಕಣಿಪೂಜೆ ಜರುಗುತ್ತದೆ. ತಲಕಾವೇರಿ ಯಲ್ಲಿ ಪುಣ್ಯತೀರ್ಥ ದರ್ಶನದ ನಂತರ, ಕುಲಮಾತೆಗೆ ಭಕ್ತಿಪೂರ್ವಕ ಧಾರ್ಮಿಕ ಕೃತಜ್ಞತೆಯನ್ನು ಅರ್ಪಿಸಲೋಸುಗ ಈ ಆಚರಣೆ ನಡೆಯುತ್ತದೆ. ಶುದ್ಧಮುದ್ರಿಕೆಯಲ್ಲಿ ಕಾವೇರಿ ದೇವಿಯನ್ನು ಕಣಿ ರೂಪದಲ್ಲಿಟ್ಟು, ಪೂಜಿಸಲು : ತಳಿಯಕ್ಕಿ ಬೊಳಕ್, ಕೆಂಪು ರೇಶ್ಮೆ ವಸ್ತ್ರ, ತೆಂಗಿನಕಾಯಿ ಅಥವಾ ಸೌತೆ, ವೀಳ್ಯ, ಹೂವು-ಆಭರಣಾದಿಗಳನ್ನು ಓರಣವಾಗಿ ಜೋಡಿಸಿಟ್ಟು, ನೆಲ್ಲಕ್ಕಿ ನಡುಬಾಡೆಯಲ್ಲಿ ಧೂಪ-ದೀಪಗಳಿಂದ ಭಕ್ತಿಯಿಂದ ಪೂಜಿಸಿ, ದೇವಿಯ ಆಶೀರ್ವಾದ ಬೇಡಿ ನಮಿಸುತ್ತಾರೆ. ಅದರ ಬಳಿಕ ಕಿರಿಯರು ಅಲ್ಲಿ ನೆರೆದಿರುವ ಹಿರಿಯರ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಬಳಿಕ ಮನೆಯ ಮುತ್ತೈದೆ ಕ್ರಮಾನುಸಾರ ಸಮೀಪದ ಬಾವಿಗೆ ತೆರಳಿ, ಗಂಗಾಪೂಜೆ ನೆರವೇರಿಸಿ, ದೋಸೆಹಿಟ್ಟು, ಕುಂಬಳಸಾರು ಸೇರಿದ ನೈವೇದ್ಯ ಎಡೆಯನ್ನು ಬಾವಿ ಪಕ್ಕದ ``ಬೊತ್ತ್ ಬಡಿಯ''ದ ಮೇಲಿಟ್ಟು, ದೇವಿಗೆ... ಭೂಮಿ ತಾಯಿಗೆ ಮನಸಾರೆ ನಮಿಸಿ, ಆ ಬಾವಿಯಿಂದ ಶುದ್ಧ ನೀರನ್ನು ಮನೆಗೆ ಕೊಂಡೊಯ್ಯುತ್ತಾಳೆ. ಕಾವೇರಿ ತೀರ್ಥೋದ್ಭವದ ಸಂದರ್ಭದಲ್ಲಿ... ನಾಡಿನ ಎಲ್ಲಾ ಬಾವಿ, ಕೆರೆಗಳಾದಿ ಜಲಮೂಲದಲ್ಲಿ ಕಾವೇರಿ ತೀರ್ಥವು ಒಳಗೊಂಡಿರು ತ್ತದೆ ಎಂಬುದು ಸ್ಥಳೀಯರ ನಂಬಿಕೆ. ಹೀಗಾಗಿ ಕಣಿಪೂಜೆ-ಗಂಗಾಪೂಜೆಯ ಬಳಿಕ ಬಾವಿಯ ತೀರ್ಥದಿಂದೊಡಗೂಡಿದ ನೀರಿನಲ್ಲಿ ಅಡಿಗೆ ಪ್ರಾರಂಭಿಸುವುದು ಹಳೆಯ ಸಂಪ್ರದಾಯ. ಇದೇ ಸಂದರ್ಭದಲ್ಲಿ, ಮನೆಯ ಪುರುಷರು ಎಡೆಯ ಸ್ವಲ್ಪ ಭಾಗವನ್ನು ಗದ್ದೆಗೆ ತೆಗೆದುಕೊಂಡು ಹೋಗಿ, ಅಲ್ಲಿ ನೆಟ್ಟಿರುವ ಬೊತ್ತ್‍ನ ಮೇಲಿಟ್ಟು, ಮೂರುಬಾರಿ ಕೂಗಿನ ಮೂಲಕ ದೇವಿಯನ್ನು... ಭೂದೇವಿಯನ್ನು ಭಕ್ತಿಯಿಂದ ನಮಿಸಿ, ಮನೆಗೆ ಹಿಂತಿರುಗುತ್ತಾರೆ. ಪತ್ತಾಲೋದಿ : ಕಾವೇರಿ ಸಂಕ್ರಮಣ ಹಬ್ಬದ ಬಳಿಕ ಹತ್ತನೇ ದಿನ ``ಪತ್ತಾಲೋದಿ'' ಎಂಬ ಆಚರಣೆ (ಪತ್ತ್+ಓದಿ = ಪತ್ತಾಲೋದಿ; ಪತ್ತ್=ಹತ್ತು, ಓದಿ=ಕೆಟ್ಟು; ಪತ್ತಾಲೋದಿ... ಹತ್ತನೇ ದಿನದ ಕೆಟ್ಟು; ಕೂಪೆÇದಿ = ಕೂಳ್‍ರ ಕೆಟ್ಟ್ = ಅನ್ನದ ಬುತ್ತಿ; ಪತ್ತಾಲೋದಿ... ಹತ್ತನೇ ದಿನದ ಬುತ್ತಿಕೆಟ್ಟು) ಕಣ್ಮರೆ ಆಗಿರುವ ಕುಟುಂಬದ ಮೂಲ ಪುರುಷ... ತಲೆಮಾರಿನ ಹಿರಿಯರಿಗೆ ಎಡೆ ಇಡುವ ಶಾಸ್ತ್ರ. ಮನೆಯವರು ಮತ್ತು ತವರುಮನೆ ಸ್ತ್ರೀಯರ ಸಂಸಾರದವರು ಒಟ್ಟಾಗಿ ಕೈಮಡದಲ್ಲಿ ಸೇರುತ್ತಾರೆ. ``ಕಾರಣಂಗ್ ಕೊಡ್‍ಪೆÇ'' ಎನ್ನುವ ಇದಕ್ಕೆ ಪೂರ್ವಸಿದ್ಧತೆಯಾಗಿ : ಬಾಳೆಗೊನೆ, ಕೋತ್ರಿ, ಚಳ್ಳೆ, ಕೊಡಿ ಬಾಳೆಎಲೆ, ಕೋಳಿ, ಮೀನು, ಏಡಿ, ಮದ್ಯ, ಅಡಿಗೆಸಾಮಾನು, ತರಕಾರಿ ಇತ್ಯಾದಿಗಳನ್ನು ಸಂಗ್ರಹಿಸುತ್ತಾರೆ. ಅಂದು ನಿರ್ದಿಷ್ಟ ಕೋಳಿಯ ಸಾರನ್ನು ತವರು ಮನೆ ಸ್ತ್ರೀ ಒಬ್ಬರು ಶುದ್ದಮುದ್ರಿಕೆಯಲ್ಲಿ ಮಾಡುತ್ತಾರೆ. ಎಲ್ಲಾ ತಯಾರಿಸಿದ ನಂತರ ಶಾಸ್ತ್ರೋಕ್ತವಾಗಿ ಎಡೆ ಅರ್ಪಿಸಿ, ಕಾರೋಣನಿಗೆ ವಿಧಿವತ್ತಾಗಿ ನಮಿಸಿ, ಆಶೀರ್ವಾದ ಬೇಡಿ, ಬಳಿಕ ಮನೆಯಲ್ಲಿ ಊಟೋಪಚಾರ ಮಾಡುತ್ತಾರೆ. ಹೀಗೆ ಕುಲದೇವಿ ಕಾವೇರಮ್ಮೆಯ ಭಕ್ತಿಗಾಗಿ... ಆಶೀರ್ವಾದಕ್ಕಾಗಿ ವರ್ಷದ ತುಲಾಮಾಸದಲ್ಲಿ ಈ ಬಗೆಯ ವಿಶಿಷ್ಟ ಧಾರ್ಮಿಕ ಆಚರಣೆ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. - ಜೈ ಕಾವೇರಮ್ಮೆ.

-ಉಳ್ಳಿಯಡ ಎಂ. ಪೂವಯ್ಯ

ಮಡಿಕೇರಿ (9448720168)