ಶ್ರೀಮಂಗಲ, ಸೆ. 25: ಕೊಡಗು ಜಿಲ್ಲೆಯ ಎಲ್ಲಾ ಬೆಳೆಗಾರರ ಸಮಸ್ಯೆಗಳಿಗೆ ಒಗ್ಗಟ್ಟಾಗಿ ಸರಕಾರವನ್ನು ಪ್ರತಿನಿಧಿಸಲು ರಚಿಸಿದ ಕೊಡಗು ಸರ್ವ ಬೆಳೆಗಾರರ ಸಂಘಟನೆಯು ಶೇ.98.5ರಷ್ಟಿರುವ ಸಣ್ಣ - ಮಧ್ಯಮ ಬೆಳೆಗಾರರ ಬೇಡಿಕೆಗಳನ್ನು ನಿರ್ಲಕ್ಷಿಸಿ ಶೇ. 1.5ರಷ್ಟಿರುವ ಕಾಫಿ ತೋಟ ಹೊಂದಿರುವ ಕಾಪೆರ್Çರೇಟ್ ಸಂಸ್ಥೆಗಳು - ದೊಡ್ಡ ಬೆಳೆಗಾರರ ಬೇಡಿಕೆಗಳನ್ನು ಸರಕಾರದ ಮುಂದಿಟ್ಟು ಸಣ್ಣ ಬೆಳೆಗಾರರ ಸಂಘಟನೆಯನ್ನು ಬಳಸಿಕೊಂಡು ತಮ್ಮ ಬೇಡಿಕೆ ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಿರುವುದಕ್ಕೆ ಕೊಡಗು ಬೆಳೆಗಾರರ ಒಕ್ಕೂಟದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಬೆಳೆಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಗೋಣಿಕೊಪ್ಪಲುವಿನಲ್ಲಿ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಕ್ಷೇಪ ವ್ಯಕ್ತವಾಯಿತು. ಈ ಹಿಂದಿನ ಸಭೆಯಲ್ಲಿ ಸಣ್ಣ - ಮಧ್ಯಮ ಬೆಳೆಗಾರರ ಸಾಲ ಮನ್ನಾ ಮತ್ತು ದೊಡ್ಡ ಬೆಳೆಗಾರರ ಬಡ್ಡಿ ಮನ್ನಾ ಮಾಡಲು ಒಮ್ಮತದ ತೀರ್ಮಾನವನ್ನು ಸರಕಾರದ ಮುಂದಿಡಲು ನಿರ್ಣಯ ಕೈಗೊಂಡು ಅದನ್ನು ಸರಕಾರದ ಮಟ್ಟಕ್ಕೆ ತಲುಪಿಸಲು ಸರ್ವ ಬೆಳೆಗಾರರ ಮುಖಂಡರಿಗೆ ಪ್ರತಿನಿಧಿಸಲು ಅಧಿಕಾರ ನೀಡಲಾಗಿತ್ತು, ಆದರೆ ಸಣ್ಣ ಬೆಳೆಗಾರರಿಗೆ ಬಡ್ಡಿ ಮನ್ನಾದಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದರೂ ಸಹ ಇದನ್ನು ನಿರ್ಲಕ್ಷಿಸಿ ಸಂಘಟನೆಯ ಪ್ರಮುಖರು ಸಾಲ ಮನ್ನಾದ ಬೇಡಿಕೆಯನ್ನು ಕೈಬಿಟ್ಟು ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲ್, ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ಪಿಯುಷ್ ಘೋಯಲ್ ಅವರಿಗೆ ಮನವಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಇದರಿಂದ ಸಣ್ಣ ಹಾಗೂ ಮಧ್ಯಮ ಬೆಳೆಗಾರರಿಗೆ ಅನ್ಯಾಯವಾಗುವುದರಿಂದ ಮುಂದಿನ ದಿನಗಳಲ್ಲಿ ಕೊಡಗು ಬೆಳೆಗಾರರ ಒಕ್ಕೂಟ ಪ್ರತ್ಯೇಕವಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವಂತೆ ಬೆಳೆಗಾರರು ಒತ್ತಾಯಿಸಿದರು.

ಸರ್ವ ಬೆಳೆಗಾರರ ಸಂಘಟನೆ ಸರಕಾರದ ಮುಂದಿಟ್ಟಿರುವ ಬಡ್ಡಿ ಮನ್ನಾದ ಪ್ರಸ್ತಾಪಕ್ಕೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಸಣ್ಣ ಬೆಳೆಗಾರರ ಒಟ್ಟು ಅಸಲು ಸಾಲಕ್ಕಿಂತ, ದೊಡ್ಡ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಜಾಸ್ತಿ ಇರುವುದರಿಂದ ತಮಗೆ ಉಪಯೋಗವಾಗುವ ರೀತಿಯಲ್ಲಿ ಸಂಘಟನೆಯ ಪ್ರಮುಖರು ಸರಕಾರ ಮಟ್ಟದಲ್ಲಿ ಪ್ರಯತ್ನಿಸುತ್ತಿರುವುದಕ್ಕೆ ಸಭೆಯಲ್ಲಿ ಖಂಡಿಸಲಾಯಿತು.

ಸಂಸದರ ನಿಲುವಿಗೆ ಆಕ್ಷೇಪ

ಲೋಕಸಭಾ ಅಧಿವೇಶನದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಕಾಫಿ ಬೆಳೆಗಾರರ ಬಡ್ದಿ ಮನ್ನಾ ಮತ್ತು ಎರಡು ವರ್ಷ ಸಾಲ ಮರುಪಾವತಿಸುವ ಅವಧಿಯನ್ನು ವಿಸ್ತರಿಸಲು ಪ್ರಸ್ತಾಪ ಮಾಡಿದ್ದು, ಇದು ಸಹ ಸಣ್ಣ ಬೆಳೆಗಾರರಿಗೆ ಅನ್ಯಾಯವಾಗುತ್ತದೆ. ಸಂಸದರು 2014ರ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸಂಕಷ್ಟದಲ್ಲಿರುವ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದರು. ತದನಂತರ 2016-17ರಲ್ಲಿ ತೀವ್ರ ಬರಗಾಲ, 2018ರಿಂದ ಸತತ 3 ವರ್ಷ ಅತಿವೃಷ್ಟಿ ಪ್ರಾಕೃತಿಕ ವಿಕೋಪ ಮತ್ತು ಕಳೆದ 4 ವರ್ಷದಿಂದ ಶೇ. 60ರಷ್ಟು ಕುಸಿತವಾಗಿರುವ ಕಾಳುಮೆಣಸು ದರದಿಂದ ಕಳೆದ ಎರಡೂವರೆ ದಶಕದಲ್ಲಿ ಅತ್ಯಂತ ದುಸ್ಥಿತಿಯನ್ನು ಕಾಫಿ ಬೆಳೆಗಾರರು ಎದುರಿಸುತ್ತಿದ್ದಾರೆ. 6 ವರ್ಷದ ಹಿಂದೆ ಸಾಲ ಮನ್ನಾ ಮಾಡುವ ಭರವಸೆ ನೀಡಿದ ಸಂಸದರು ಮತ್ತಷ್ಟು ಸಂಕಷ್ಟದ ಸ್ಥಿತಿಯಲ್ಲಿರುವ ಈ ಸಮಯದಲ್ಲಿ ಬಡ್ಡಿ ಮನ್ನಾ ಮಾಡುವ ಪ್ರಸ್ತಾವನೆ ಮಂಡಿಸಿರುವುದಕ್ಕೆ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಯಿತು.

ಸಣ್ಣ ಬೆಳೆಗಾರರು ತಮ್ಮ ಸಾಲ ಕಟ್ಟಲಾಗದೇ ಇರುವುದರಿಂದ ಬ್ಯಾಂಕಿನವರು ಸಾಲದ ಮೇಲಿನ ಬಡ್ಡಿಯನ್ನು ಪ್ರತಿವರ್ಷ ಅಸಲು ಸಾಲಕ್ಕೆ ಸೇರಿಸಿ ಅಸಲು ರೂಪದಲ್ಲಿ ಸಾಲ ನವೀಕರಣವಾಗುತ್ತಿರುವು ದರಿಂದ ಸಣ್ಣ ಬೆಳೆಗಾರರಿಗೆ ಯಾವುದೇ ಬಡ್ಡಿ ಇರುವುದಿಲ್ಲ. ಬಡ್ಡಿ ಮನ್ನಾದಿಂದ ಸಣ್ಣ ಹಾಗೂ ಮಧ್ಯಮ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಣ್ಣ ಮಧ್ಯಮ ಬೆಳೆಗಾರರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಸಾಲ ಮನ್ನಾ ಮಾಡಲು ಸಂಸದರು ಮುಂದಾಗಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಸಂಸದರ ಸಾಲ ಮನ್ನಾದ ಪ್ರಣಾಳಿಕೆಯಿಂದ ಬೆಳೆಗಾರರಲ್ಲಿ ಭರವಸೆ ಮೂಡಿದ್ದು, ಆದರೆ ಏಕಾಏಕಿ ಸಂಸದರು ಇದೀಗ ಸಾಲ ಮನ್ನಾ ಕೈಬಿಟ್ಟು ತಮ್ಮ ಪ್ರಣಾಳಿಕೆಯನ್ನು ಮರೆತು ಬಡ್ಡಿ ಮನ್ನಾ ಪ್ರಸ್ತಾಪ ಮಾಡಿರುವುದು ಸಣ್ಣ ಬೆಳೆಗಾರರಿಗೆ ತೀವ್ರ ಆಘಾತ ಮೂಡಿಸಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಕೇಂದ್ರ ಸರಕಾರದ ಎ.ಪಿ.ಎಂ.ಸಿ ಕಾಯಿದೆ ತಿದ್ದುಪಡಿ, ಕೃಷಿ ಕಾಯಿದೆ, ಮುಕ್ತ ಮಾರುಕಟ್ಟೆ, ಗುತ್ತಿಗೆ ಕೃಷಿ ಒಪ್ಪಂದದ ಬಗ್ಗೆ ಬೆಳೆಗಾರ ಮಾಚಿಮಾಡ ರಾಜ ತಿಮ್ಮಯ್ಯ ಅವರು ಪ್ರಾಥಮಿಕ ಮಾಹಿತಿ ನೀಡಿದರು.

ಸಭೆಯಲ್ಲಿ ಬೆಳೆಗಾರರ ಅಭಿಪ್ರಾಯಕ್ಕೆ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ ಸಹಮತ ವ್ಯಕ್ತಪಡಿಸಿದ್ದು, ಸಭೆಯ ತೀರ್ಮಾನದಂತೆ ಮತ್ತು ಸಣ್ಣ ಬೆಳೆಗಾರರ ಸಾಲ ಮನ್ನಾ ಮಾಡುವ ನಿಟ್ಟಿನಲ್ಲಿ ಬೆಳೆಗಾರರ ಒಕ್ಕೂಟ ಪ್ರತ್ಯೇಕವಾಗಿ ಪ್ರಯತ್ನ ನಡೆಸಲಿದ್ದು, ಸಾಲ ಮನ್ನಾ ಬೇಡಿಕೆಯನ್ನು ನಿರ್ಲಕ್ಷಿಸಿ ಕೊಡಗು ಸರ್ವ ಬೆಳೆಗಾರರ ಸಂಘಟನೆಯ ಪ್ರಮುಖರು ನೀಡಿರುವ ಮನವಿಗೆ ಒಕ್ಕೂಟದಿಂದ ಯಾವುದೇ ಮಾನ್ಯತೆ ನೀಡುವುದಿಲ್ಲ ಎಂದು ಪ್ರಕಟಿಸಿದರು.

ಸಭೆಯ ಆರಂಭದಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಮನೆಯಪಂಡ ಡಬ್ಲ್ಯೂ. ಅಯ್ಯಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವೇದಿಕೆಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸಂಘಟನಾ ಕಾರ್ಯದರ್ಶಿ ಬೊಳ್ಳೇರ ರಾಜ ಸುಬ್ಬಯ್ಯ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದಾ ದೇವಯ್ಯ, ಖಜಾಂಚಿ ಮಾಣೀರ ವಿಜಯನಂಜಪ್ಪ ಹಾಜರಿದ್ದರು. ಒಕ್ಕೂಟದ ತಾಂತ್ರಿಕ ಸಲಹೆಗಾರರಾದ ಚೆಪ್ಪುಡೀರ ಶರಿ ಸುಬ್ಬಯ್ಯ, ಡಾ. ಅಜ್ಜನಿಕಂಡ ಗಣಪತಿ, ಸಮಿತಿ ಸದಸ್ಯರಾದ ಕಡೇಮಾಡ ಕುಸುಮಾ ಜೋಯ್ಯಪ್ಪ, ಆಶಾ ಜೇಮ್ಸ್, ಬೆಳೆಗಾರರಾದ ಅರಮಣಮಾಡ ಸತೀಶ್ ದೇವಯ್ಯ, ತೀತಿಮಾಡ ಲಾಲ ಭೀಮಯ್ಯ, ಎಂ.ಬಿ. ಗಣಪತಿ, ಐಚೆಟ್ಟೀರ ಕುಟ್ಟಯ್ಯ, ರೋಮೆಲ್, ಕರ್ತಮಾಡ ನಂದಾ, ಬೊಳ್ಳೆರ ಪೆÇನ್ನಪ್ಪ, ಮದ್ರಿರ ಗಿರೀಶ್, ಕಾಳಿಮಾಡ ರಶಿಕ್, ಅಣ್ಣಳಮಾಡ ಮುತ್ತಣ್ಣ, ಅಳಮೇಂಗಡ ಮೋಟಯ್ಯ, ನಿವೃತ್ತ ವಿಂಗ್ ಕಮಾಂಡರ್ ಚೇಂದಿರ ಅಪ್ಪಣ್ಣ, ಮಿದೇರಿರ ಕವಿತಾ ಮಾತನಾಡಿದರು.