ಮಡಿಕೇರಿ, ಸೆ. 25: ಜಾಗತಿಕ ಕೊರೊನಾ ನಡುವೆ ಒಂದೆಡೆ ಕೂಲಿಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನತೆ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಮನುಷ್ಯನಿಗೆ ಅತ್ಯಗತ್ಯವಿರುವ ನಿತ್ಯೋಪಯೋಗಿ ವಸ್ತುಗಳು, ಆಹಾರ ಧಾನ್ಯಗಳು, ಹಣ್ಣು ಹಂಪಲು, ಸೊಪ್ಪು ತರಕಾರಿ ಸಹಿತ ಎಣ್ಣೆ, ಕಾಳುಗಳ ಬೆಲೆ ಸದ್ದಿಲ್ಲದೆ ಗಗನಕ್ಕೆ ಏರತೊಡಗಿದೆ. ಇಲ್ಲಿಯೂ ಕೃಷಿಕರು ಬೆಳೆಯುವ ಉತ್ಪನ್ನಗಳಿಗೆ ಬೆಲೆÉ ಲಭಿಸುತ್ತಿಲ್ಲ; ಬದಲಾಗಿ ತೀರಾ ಕಡಿಮೆ ಬೆಲೆಗೆ ರೈತರಿಂದ ಮಧ್ಯವರ್ತಿಗಳು ಖರೀದಿಸಿ ಗ್ರಾಹಕರಿಗೆ ದುಬಾರಿ ಬೆಲೆಗೆ ಮಾರಾಟಗೊಳಿಸುತ್ತಿರುವ ಆರೋಪವಿದೆ.

ಉದಾಹರಣೆಗೆ ಪ್ರಸ್ತುತ ತುಂಬಾ ಬೇಡಿಕೆಯಿರುವ ಮಾಡ ಹಾಗಲಕಾಯಿಗೆ; ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಸ್ಯಕ್ಷೇತ್ರದಲ್ಲಿ (ಮೊದಲ ಪುಟದಿಂದ) ಕೆ.ಜಿ.ಯೊಂದಕ್ಕೆ ರೂ. 60 ರಂತೆ ಮಾರಾಟಗೊಳಿಸಲಾಗುತ್ತಿದೆ. ಇದೇ ಮಾಡ ಹಾಗಲವನ್ನು ವ್ಯಾಪಾರಿಗಳು ಗ್ರಾಹಕರಿಗೆ ಕೆ.ಜಿ. ಯೊಂದಕ್ಕೆ ರೂ. 200 ಬೆಲೆಗೆ ವಿತರಿಸುತ್ತಿದ್ದಾರೆ. ಇದೇ ರೀತಿ ಬೀನ್ಸ್ (ಚೆಟ್ಟು) ಕೆ.ಜಿ.ಯೊಂದಕ್ಕೆ 160 ರಿಂದ 180 ರಂತೆ ಮಾರಾಟಗೊಳಿಸುತ್ತಿದ್ದು, ಟೊಮೊಟೋ ಕೆ.ಜಿ.ಗೆ ರೂ. 50 ರಿಂದ 80ಕ್ಕೆ ವ್ಯಾಪಾರ ನಡೆಯುತ್ತಿದೆ. ಹೀಗೆ ತರಕಾರಿ ದರ ಏರಿಕೆಯಿಂದ ಮಧ್ಯಮ ವರ್ಗ, ಬಡವರು ಬೇಸತ್ತು ಹೋಗಿದ್ದಾರೆ.

ಎಣ್ಣೆ ದುಬಾರಿ : ಇನ್ನು ಎಣ್ಣೆ ವಿಚಾರಕ್ಕೆ ಬಂದಾಗ ಸಹಜವಾಗಿ ಎಲ್ಲರೂ ಮದ್ಯದ ಕಡೆಗೆ ಯೋಚಿಸುವವರೇ ಹೆಚ್ಚು! ಆದರೆ ಈ ಕೊರೊನಾ ನಡುವೆ ಮೂರು ಹೊತ್ತು ಮನೆಯೊಳಗೆ ಬಿಸಿ ಬಿಸಿ ಆಹಾರ ಸಿದ್ಧಗೊಳಿಸುವ ಗೃಹಿಣಿಯರಿಗೆ ಅಡುಗೆ ಎಣ್ಣೆ ಬೆಲೆ ಶಾಕ್ ನೀಡಿದೆ. ರೂಪಾಯಿ 80 ರಿಂದ 90ಕ್ಕೆ ಲಭ್ಯವಿದ್ದ ಅಡುಣೆ ಎಣ್ಣೆ ಒಂದೇ ಬಾರಿಗೆ ರೂಪಾಯಿ 120 ರಿಂದ 135ಕ್ಕೆ ಅಂಗಡಿಗಳಲ್ಲಿ ಲೀಟರ್‍ಗೆ ಮಾರಾಟಗೊಳ್ಳುತ್ತಿದೆ. ಎಷ್ಟು ಏರಿಕೆ ಏಕೆಂದು ವರ್ತಕರನ್ನು ಗ್ರಾಹಕರು ವಿಚಾರಿಸಿದರೆ, ಅದು ಮೈಸೂರು, ಬೆಂಗಳೂರಿನಂತಹ ಕಡೆಗಳಿಂದ ಸಗಟು ವ್ಯಾಪಾರಿಗಳನ್ನು ಕೇಳಬೇಕು, ಅವರು ನೀಡುವ ದರಕ್ಕೆ ನಾವು ಮಾರುತ್ತಿದ್ದೇವೆ ಎಂಬ ಉತ್ತರ ಲಭಿಸಲಿದೆ.

ಇನ್ನು ದೇವರ ದೀಪಕ್ಕೆ ಬಳಸುವ ಎಣ್ಣೆಳ್ಳೆ ಇತ್ಯಾದಿ ತೀರಾ ಕಲಬೆರಕೆಯೊಂದಿಗೆ ಲೀಟರ್‍ವೊಂದಕ್ಕೆ ರೂ. 125 ರಿಂದ 150ಕ್ಕೆ ಜಿಗಿತಗೊಂಡು 90 ರಿಂದ 100 ರೂಪಾಯಿ ಒಳಗಿದ್ದ ದರ ಗ್ರಾಹಕರನ್ನು ಬೆಚ್ಚುವಂತೆ ಮಾಡಿದೆ. ಹೀಗೆ ಪ್ರಸ್ತುತ ಮಾರುಕಟ್ಟೆ ಅಥವಾ ವರ್ತಕರ ಮಳಿಗೆಗಳಲ್ಲಿ ಯಾವದೇ ವಸ್ತು ಖರೀದಿಗೆ ತೆರಳಿದರೆ ಬಾಯಿಗೆ ಬಂದಂತೆ ಬೆಲೆ ಹೇಳುವುದು ಕಂಡುಬರುತ್ತಿದೆ. ಬೀದಿ ವ್ಯಾಪಾರಿಗಳ ಕತೆಯೂ ಇದೇ ಆಗಿದೆ.

ಹೀಗಾಗಿ ಗಗನಕ್ಕೆ ಏರುತ್ತಿರುವ ಬೆಲೆ ಏರಿಕೆಗೆ ಕಾರಣ ಅಥವಾ ಜವಾಬ್ದಾರಿ ಯಾರೆಂದು ತಿಳಿಯದಾಗಿದೆ. ಬದಲಾಗಿ ಕೊರೊನಾ ನಡುವೆಯೂ ಬದುಕು ಸವೆಸುತ್ತಿರುವ ಮಾನವ ಮಾತ್ರ ಮೌನದಿಂದಲೇ ಎಲ್ಲದಕ್ಕೂ ಒಗ್ಗಿಕೊಳ್ಳುವಂತಾಗಿದೆ.