ಸುಂಟಿಕೊಪ್ಪ, ಸೆ. 25: ಇಲ್ಲಿಗೆ ಸಮೀಪದ ಚೆಟ್ಟಳ್ಳಿ ಪಂಚಾಯಿತಿಯ ಅಬ್ಯಾಲದಿಂದ ಭೂತನ ಕಾಡು ಸಂಪರ್ಕ ರಸ್ತೆ ಬದಿಯ ತಡೆಗೋಡೆ ಜರಿದು ವಾಹನ ಚಾಲಕರಿಗೆ ತೊಂದರೆಯಾಗಿದೆ. ಕಳೆದ 30 ವರ್ಷಗಳ ಹಿಂದೆ ನಿರ್ಮಿಸಿದ್ದ ತಡೆಗೋಡೆ ಜರಿಯುವ ಹಂತದಲ್ಲಿದೆ. ಇದನ್ನು ಸರಿಪಡಿಸಿ ಎಂದು ಗ್ರಾಮ ಪಂಚಾಯಿತಿಗೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರಿಗೆ ಈ ಭಾಗದ ಗ್ರಾಮಸ್ಥರು ಮನವಿಗಳನ್ನು ಸಲ್ಲಿಸಿದ್ದರೂ; ಕಡೆಗಣಿಸಿರುವುದರಿಂದ ಈಗ ಮಳೆಸುರಿದ ಸಂದರ್ಭ ತಡೆಗೋಡೆ ಕುಸಿದಿದೆ.
ಈ ಭಾಗದಲ್ಲಿ ಸುಮಾರು 50 ಕುಟುಂಬಗಳ ವಾಹನ ಚಾಲಕರು ತೊಂದರೆ ಅನುಭವಿಸುತ್ತಿದ್ದು, ಸಾರ್ವಜನಿಕ ರಸ್ತೆ ಬದಿಯ ತಡೆಗೋಡೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಈ ಭಾಗದ ಗ್ರಾಮಸ್ಥರು ಪ್ರತಿಭಟನೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.