ಮಡಿಕೇರಿ,ಸೆ.25: ಕೆಲವು ಗ್ರಾಮ ಪಂಚಾಯಿತಿಯ ಪಿ.ಡಿ.ಒ.ಗಳು ಹೋಂ ಸ್ಟೇಗಳೆಲ್ಲವೂ ಭೂ ಪರಿವರ್ತನೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಒತ್ತಾಯ ಹೇರುತ್ತಿದ್ದು, ಇದು ಕಾನೂನಿನ ಅರಿವಿನ ಕೊರತೆಯಾಗಿದೆ ಎಂದು ಕೂರ್ಗ್ ಹೋಂ ಸ್ಟೇ ಅಸೋಸಿ ಯೇಷನ್ ಅಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದ್ದಾರೆ.ಭೂಪರಿವರ್ತನೆಯ ವಿಚಾರದ ಕುರಿತು ಇಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಘವೇಂದ್ರ ಅವರನ್ನು ಭೇಟಿ ಮಾಡಿದ ಅಸೋಸಿಯೇಷನ್ ಸದಸ್ಯರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸೆಪ್ಟೆಂಬರ್ 2019ರಲ್ಲಿ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಈ ಕುರಿತು ನಡೆದ ತೀರ್ಮಾನದ ಕುರಿತು ಮನವರಿಕೆ ಮಾಡಿದರು. ಭೂಪರಿವರ್ತನೆ ಒಮ್ಮೆಗೇ ಹೇರುವದು ಸರಿಯಲ್ಲ ಎಂದು ಅಸೋಸಿಯೇಷನ್ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿತ್ತು.

ಸಭೆಯಲ್ಲಿ 2018 ಡಿಸೆಂಬರ್‍ಗೆ ಮೊದಲು ನೋಂದಾಯಿತ ಅರ್ಜಿಸಲ್ಲಿಸಿದ್ದ ಹೋಂ ಸ್ಟೇಗಳು ಮನೆದಳವನ್ನು ಪರಿವರ್ತನೆ ಮಾಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಗಳು ಒಪ್ಪಿ, ನಡವಳಿಕೆ ಅನುಮೋದಿ ಸಲಾಗಿತ್ತು. ಈ ಕುರಿತು ರಾಘವೇಂದ್ರ ಅವರು ಇಂದು

(ಮೊದಲ ಪುಟದಿಂದ) ಕಡತ ಪರಿಶೀಲಿಸಿ ಒಪ್ಪಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಈವರೆಗೆ 935 ಅರ್ಜಿಗಳು ಹೋಂಸ್ಟೇ ನಡೆಸಲು ಬಂದಿದ್ದು, ಇದರಲ್ಲಿ 482 ಮಾತ್ರ ಅನುಮತಿ ಪಡೆದಿವೆ.

ಮಿಕ್ಕ ಹೋಂಸ್ಟೇಗಳನ್ನು ಪರಿಶೀಲಿಸಿ ಅನುಮತಿ ನೀಡಬೇಕಾಗಿದ್ದು, ಪ್ರವಾಸೋದ್ಯಮ ಇಲಾಖೆ ಒಂದೇ ಈ ಜವಾಬ್ದಾರಿ ನಿರ್ವಹಿಸಲು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಆಯಾಯ ಪಿ.ಡಿ.ಓಗಳಿಗೆ ಜವಾಬ್ದಾರಿ ಹಸ್ತಾಂತರಿಸಲಾಗಿದೆ. ಹಲವೆಡೆ ಹೋಂಸ್ಟೇ ಕಾನೂನಿನ ಅರಿವಿನ ಕೊರತೆಯಿಂದ ಕೆಲವು ಪಿ.ಡಿ.ಓಗಳು ವ್ಯತಿರಿಕ್ತ ಬೇಡಿಕೆಗಳನ್ನು ಒಡ್ಡುತ್ತಿರುವದಾಗಿ ನೋಂದಾಯಿತ ಹೋಂಸ್ಟೇಗಳು ದೂರುತ್ತಿದ್ದು, ಅಂತಹವರು ಹೋಂಸ್ಟೇ ಕಚೇರಿಯಿಂದ ಕಾನೂನು ಪ್ರತಿಗಳನ್ನು ಹೊಂದಿಕೊಳ್ಳಬಹುದು ಎಂದು ಬಿ.ಜಿ. ಅನಂತಶಯನ ಹೇಳಿದ್ದಾರೆ.

ಅಸೋಸಿಯೇಷನ್ ಪದಾಧಿಕಾರಿಗಳಾದ ಕೆ.ಎಂ. ಕರುಂಬಯ್ಯ ಮತ್ತು ಎ.ಕೆ. ನವೀನ್ ಹಾಜರಿದ್ದರು.