ಕುಶಾಲನಗರ, ಸೆ. 25: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುಶಾಲನಗರ ಪಟ್ಟಣ ಪಂಚಾಯಿತಿ, ರೋಟರಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಪೆÇೀಷಣ ಅಭಿಯಾನ ಮತ್ತು ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕುಶಾಲನಗರ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಅಧ್ಯಕ್ಷ ಕೆ.ಪಿ. ಚಂದ್ರಶೇಖರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಆಧುನಿಕ ಜೀವನಶೈಲಿಯಿಂದ ಜನಸಾಮಾನ್ಯರಲ್ಲಿ ಆರೋಗ್ಯ ಕ್ಷೀಣಿಸುತ್ತಿದೆ. ರಾಸಾಯನಿಕ ಬಳಕೆಯಿಂದ ಹಣ್ಣು ತರಕಾರಿ ಮಾಂಸಹಾರ ವಿಷಕಾರಿಯಾಗುತ್ತಿವೆ. ದಿನಬಳಕೆ ವಸ್ತುಗಳು ಕೂಡ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡುವ ಸಾಧ್ಯತೆಯಿದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಆರೋಗ್ಯ ವೃದ್ಧಿಸುವ ಸಾವಯವ ಆಹಾರ ಪದಾರ್ಥಗಳ ಬಳಕೆಗೆ ಮುಂದಾಗಬೇಕಿದೆ. ಆರೋಗ್ಯ ವೃದ್ಧಿಗೆ ಸಿರಿಧಾನ್ಯಗಳನ್ನು ಆಹಾರದಲ್ಲಿ ಹೆಚ್ಚು ಬಳಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ನೆರವೇರಿಸಲಾಯಿತು. ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕುಶಾಲನಗರ ಪಪಂ ಸದಸ್ಯ ವಿ.ಎಸ್.ಆನಂದಕುಮಾರ್, ರೋಟರಿ ಕಾರ್ಯದರ್ಶಿ ಉಲ್ಲಾಸ್ ಕೃಷ್ಣ, ಆರೋಗ್ಯ ಇಲಾಖೆಯ ಜಿಲ್ಲಾ ಶುಶ್ರೂಷಣ ಅಧಿಕಾರಿ ಸುಶೀಲಾ, ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಗೌರವ್ವ, ಸಾವಿತ್ರಿ, ಆರೋಗ್ಯ ಸಹಾಯಕರಾದ ವಿಜಯೇಂದ್ರ, ಮುಖೇಶ್ ವಾಲಿಕರ್, ಡಿ.ಎಂ.ಸುಶೀಲಾ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಾದ ಸುಚಿತ್ರ, ಚಂದ್ರಿಕಾ, ಸರಸ್ವತಿ ಮತ್ತಿತರರು ಇದ್ದರು.