ಕೂಡಿಗೆ, ಸೆ. 25: ಕೂಡಿಗೆಯ ದಂಡಿನಮ್ಮ ಮತ್ತು ಬಸವೇಶ್ವರ ದೇವಾಲಯ ಸೇವಾ ಸಮಿತಿಯ ವತಿಯಿಂದ ಕೂಡಿಗೆ ಗ್ರಾಮ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಕೆರೆ ಮತ್ತು ವಿವಿಧ ರಸ್ತೆಗಳ ತೆರವಿಗೆ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಗಿದೆ.

ಮುಖ್ಯವಾಗಿ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ 16 ಎಕರೆ ಪ್ರದೇಶದ. ದಂಡಿನಮ್ಮನ ಕೆರೆ ಒತ್ತುವರಿ ಯಾಗಿರುವ ಜಾಗವನ್ನು ಸರ್ವೆ ನಡೆಸಿ ತೆರವುಗೊಳ್ಳಿಸುವುದು ಮತ್ತು ಕೂಡಿಗೆಯಲ್ಲಿರುವ ಕಾವೇರಿ-ಹಾರಂಗಿ ನದಿಗಳು ಸಂಗಮವಾಗುವ ಸ್ಥಳಕ್ಕೆ ಹೋಗುವ ದಾರಿ, ಗೌರಿಗರ ಬೀದಿಯ ರಸ್ತೆ, ಸೋಮವಾರಪೇಟೆ ಮುಖ್ಯ ರಸ್ತೆಯ ಮಸೀದಿ ಸಮೀಪದ ರಸ್ತೆ, ಹೆಗ್ಗಡಹಳ್ಳಿ ಬಸವೇಶ್ವರ ದೇವಸ್ಥಾನದಿಂದ ಜಮೀನಿಗೆ ಹೋಗುವ ರಸ್ತೆ ಕಾವೇರಿ ನದಿಗೆ ಹೋಗುವ ರಸ್ತೆ, ಅಲ್ಲದೆ ಕೂಡಿಗೆ ಹಿರಿಯ ಪ್ರಾಥಮಿಕ ಶಾಲೆಯ ಎದುರು ಗ್ರಾಮದ ಒಳಗಡೆಗೆ ಹೋಗುವ ರಸ್ತೆ ಗಳನ್ನು ಕಂದಾಯ ಇಲಾಖೆಯ ವತಿಯಿಂದ ಸರ್ವೆ ನಡೆಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೂಡಿಗೆ - ಹೆಗ್ಗಡಹಳ್ಳಿ ಗ್ರಾಮಗಳಲ್ಲಿ ಕೆರೆ ಮತ್ತು ರಸ್ತೆಗಳನ್ನು ಸಾರ್ವಜನಿಕರು ಒತ್ತುವರಿ ಮಾಡಿಕೊಂಡಿದ್ದು, ಗ್ರಾಮಸ್ಥರು ರೈತರುಗಳು ಸರಕು ಸಾಗಾಣಿಕೆ ಮಾಡಲು ದನ-ಕರುಗಳನ್ನು ಹೊಲ ಗದ್ದೆಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಈ ಒತ್ತುವರಿ ಮಾಡಿ ಕೊಂಡಿರುವ ರಸ್ತೆಗಳನ್ನು ಸರ್ವೆ ಮಾಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಲಾಗಿದೆ. ಈ ಸಂದರ್ಭ ದಂಡಿನಮ್ಮ ಮತ್ತು ಬಸವೇಶ್ವರ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಕೆ. ಕೆ. ಭೀಮಣ್ಣ, ಕಾರ್ಯದರ್ಶಿ ಕೆ.ಎಸ್. ಚಂದ್ರಶೇಖರ್, ಮಾಜಿ ಅಧ್ಯಕ್ಷ ಮತ್ತು ಸಲಹೆಗಾರ ಕೆ.ಪಿ. ಸೋಮಣ್ಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರ, ಸಮಿತಿಯ ನಿರ್ದೇಶಕರುಗಳಾದ ಈಶ್ವರ, ವಾಸು, ಕೆ.ಕೆ. ಕೃಷ್ಣ, ಕೆ.ಬಿ. ಪ್ರಕಾಶ್ ಮತ್ತಿತರರು ಇದ್ದರು.