ಸೋಮವಾರಪೇಟೆ, ಸೆ. 24: ಕಳೆದ 5 ದಶಕಗಳಿಂದ ಜಿಲ್ಲೆಯಲ್ಲಿ ಶಿಕ್ಷಣ, ಹೋರಾಟ, ಸಂಘಟನೆಯ ಧ್ಯೇಯದೊಂದಿಗೆ ಕೆಲಸ ಮಾಡುತ್ತಿದ್ದ ದಲಿತ ಸಂಘರ್ಷ ಸಮಿತಿಗಳು ಇತ್ತೀಚೆಗೆ ಒಡೆದ ಮನೆಯಂತಾಗಿದ್ದು, ಇವುಗಳನ್ನು ಒಟ್ಟುಗೂಡಿಸಿ ಸಂಘಟಿತ ಹೋರಾಟ ನಡೆಸುವ ನಿಟ್ಟಿನಲ್ಲಿ ತಾ. 27ರಂದು ಶನಿವಾರಸಂತೆಯಲ್ಲಿ ಜಿಲ್ಲಾ ಮಟ್ಟದ ಪರಿಶಿಷ್ಟರ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಯೋಜಕ ಜೆ.ಆರ್. ಪಾಲಾಕ್ಷ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಪರಿಶಿಷ್ಟರ ಪರ ಸಂಘಟನೆಗಳ ಒಗ್ಗೂಡುವಿಕೆ ಮತ್ತು ಪುನಶ್ಚೇತನದ ಉದ್ದೇಶದಿಂದ ತಾ. 27ರಂದು ಪೂರ್ವಾಹ್ನ 9 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ಶನಿವಾರಸಂತೆಯ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಸಂಘಟನೆಗಳು ಒಡೆದ ಮನೆಯಂತಾಗಿರುವ ಹಿನ್ನೆಲೆ ಪರಿಶಿಷ್ಟರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮರುಕಳಿಸುತ್ತಿವೆ. ಇವುಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಕಾರ್ಯಾಗಾರದ ಮೂಲಕ ಪುನಶ್ಚೇತನ ನೀಡಲಾಗುವದು. ಜಿಲ್ಲೆಯಾದ್ಯಂತ ಇರುವ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪಾಲಾಕ್ಷ ತಿಳಿಸಿದರು.
ಕಾರ್ಯಾಗಾರವನ್ನು ಶನಿವಾರಸಂತೆ ಠಾಣಾಧಿಕಾರಿ ದೇವರಾಜ್ ಉದ್ಘಾಟಿಸಲಿದ್ದು, ಮೈಸೂರಿನ ವಿಚಾರವಾದಿ ಪ್ರಭುಸ್ವಾಮಿ ವಿಚಾರ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ 3 ರಿಂದ ಸಂಜೆ 5ರವರೆಗೆ ಅಭಿಪ್ರಾಯ ಮಂಡನೆ ಮತ್ತು ಸಂವಾದ ನಡೆಯಲಿದೆ ಎಂದರು.
ಶನಿವಾರಸಂತೆ ಹೋಬಳಿ ದ.ಸಂ.ಸ ಅಧ್ಯಕ್ಷ ಎಸ್.ಎಸ್. ಶಿವಲಿಂಗ ಅಧ್ಯಕ್ಷತೆ ವಹಿಸಲಿದ್ದು, ಮಡಿಕೇರಿ ನಗರ ಸಭೆ ಮಾಜಿ ಅಧ್ಯಕ್ಷ ನಂದಕುಮಾರ್, ಸಂಘಟನೆಗಳ ಮುಖಂಡರಾದ ಜಯಪ್ಪ ಹಾನಗಲ್ಲು, ಹನುಮಯ್ಯ, ಶಿವಶಂಕರ್, ಮೋಹನ್ ಮೌರ್ಯ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಘಟನೆಗಳ ಪ್ರಮುಖರಾದ ವಿರೂಪಾಕ್ಷ ಸಂದೀಪ್, ಎಂ.ಜಿ. ಶಿವಶಂಕರ್, ಎಸ್.ಜೆ. ರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.