*ಸಿದ್ದಾಪುರ, ಸೆ.24: ವಾಲ್ನೂರು- ತ್ಯಾಗತ್ತೂರು ಗ್ರಾ.ಪಂ ಯ 2019- 20 ನೇ ಸಾಲಿನ ಜಮಾಬಂದಿ ಸಭೆ ಆಡಳಿತಾಧಿಕಾರಿಯಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ.ಪಾಂಡು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಕಾಮಗಾರಿಗಳಿಗೆ ವಿನಿಯೋಗವಾದ ಅನುದಾನದಲ್ಲಿನ ಗೊಂದಲಗಳ ಬಗ್ಗೆ ಗ್ರಾ.ಪಂ ಮಾಜಿ ಸದಸ್ಯರುಗಳು ಗಮನ ಸೆಳೆದರು.

ಜ್ಯೋತಿ ನಗರದಲ್ಲಿ 14 ನೇ ಹಣಕಾಸು ಯೋಜನೆಯಡಿ ಗುರುವ ಎಂಬವರ ಮನೆಯಿಂದ ನೀರಿನ ಟ್ಯಾಂಕ್ ವರೆಗೆ ಮತ್ತು ಜನಾರ್ಧನ ಅವರ ಮನೆಯವರೆಗೆ ಪೈಪ್ ಲೈನ್ ಅಳವಡಿಸಲಾಗಿದೆ ಎಂದು ಸುಮಾರು ರೂ.90 ಸಾವಿರವನ್ನು ಪಾವತಿಸ ಲಾಗಿದೆ. ಆದರೆ ಕಾಮಗಾರಿಯೇ ನಡೆದಿಲ್ಲವೆಂದು ಮಾಜಿ ಸದಸ್ಯ ಅಂಚೆಮನೆ ಸುಧಿ ಆರೋಪಿಸಿದರು. ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆ ದಾರರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಅತ್ತಿಮಂಗಲ ಕೆರೆ ಹಾಗೂ ಒಂಟಿಯಂಗಡಿ ತೋಡಿನ ಹೂಳೆತ್ತಲಾಗಿದೆ. ಆದರೆ ಕೆಲಸ ಮಾಡಿದವರಿಗೆ ಇಲ್ಲಿಯವರೆಗೆ ಹಣ ಪಾವತಿಯಾಗಿಲ್ಲವೆಂದು ಸುಧಿ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಈಗಾಗಲೇ ಹಣವನ್ನು ಬಿಡುಗಡೆ ಮಾಡಲಾಗಿದ್ದು, ಮಾಜಿ ಸದಸ್ಯರೊಬ್ಬರ ಬಳಿ ಇದೆ ಎಂದು ತಿಳಿಸಿದರು. ಆದರೆ ಆ ಸದಸ್ಯರು ಸಭೆಗೆ ಗೈರು ಹಾಜರಾದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸುಧಿ ತಕ್ಷಣ ಹಣವನ್ನು ಕೆಲಸ ಮಾಡಿದವರಿಗೆ ತಲುಪಿಸುವ ಕೆಲಸ ಮಾಡಿ ಎಂದು ಒತ್ತಾಯಿಸಿದರು.

ಗ್ರಾಮಸ್ಥರು ವಿವಿಧ ವಿಚಾರಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಉದ್ಯೋಗ ಖಾತ್ರಿ ಯೋಜನಾಧಿಕಾರಿ ಪ್ರೀತಂ ಯೋಜನೆಯ ಮಾಹಿತಿ ನೀಡಿದರು.

ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್, ಪಂಚಾಯಿತಿ ಕಾರ್ಯದರ್ಶಿ ರವಿ, ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.