ಸಿಆರ್ಪಿಎಫ್ ಯೋಧ ಹುತಾತ್ಮ
ಶ್ರೀನಗರ, ಸೆ. 24: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಛದೂರಾ ಎಂಬ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದು, ಓರ್ವ ಸಿಆರ್ಪಿಎಫ್ ಯೋಧ ಹುತಾತ್ಮರಾಗಿದ್ದಾರೆ. ಛದೂರಾ ಎಂಬ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್ಪಿಎಫ್ ಪಡೆಯ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಘಟನೆಯಲ್ಲಿ ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಗಾಯಗೊಂಡಿದ್ದ ಯೋಧನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯೋಧ ಹುತಾತ್ಮರಾಗಿದ್ದಾರೆ. ತಲೆಮರೆಸಿಕೊಂಡಿರುವ ಉಗ್ರರಿಗಾಗಿ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.
ಬಾಲಸುಬ್ರಮಣ್ಯಂ ಸ್ಥಿತಿ ಗಂಭೀರ
ಚೆನೈ, ಸೆ. 24: ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಕಳೆದ 24 ಗಂಟೆಯಲ್ಲಿ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಚೆನೈನ ಎಂಜಿಎಂ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಕಳೆದ ಆಗಸ್ಟ್ 5 ರಂದು ಆಸ್ಪತ್ರೆಗೆ ದಾಖಲಾಗಿದ್ದ ಎಸ್.ಪಿ. ಬಾಲಸುಬ್ರಮಣ್ಯಂ ಅವರು ಈಗಲೂ ಇಸಿಎಂಒ ಮತ್ತು ಲೈಫ್ ಸಪೆÇೀರ್ಟ್ನಲ್ಲಿದ್ದಾರೆ ಎಂದು ಎಂಜಿಎಂ ಆಸ್ಪತ್ರೆ ತಿಳಿಸಿದೆ. ಕಳೆದ 24 ಗಂಟೆಯಲ್ಲಿ ಅವರ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದು, ಗರಿಷ್ಠ ಲೈಫ್ ಸಪೆÇೀರ್ಟ್ ನೀಡಲಾಗಿದೆ. ಆಸ್ಪತ್ರೆಯ ತಜ್ಞರ ತಂಡ ಅವರ ಆರೋಗ್ಯ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಎಂಜಿಎಂ ಆಸ್ಪತ್ರೆ ತಿಳಿಸಿದೆ.
ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ
ಬೆಂಗಳೂರು, ಸೆ. 24: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಇಂದು ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದೆ. ನಿನ್ನೆ ನಿಧನರಾದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ಸಂತಾಪ ಸೂಚಿಸಿ ಮುಂದೂಡಲ್ಪಟ್ಟ ಕಲಾಪ ಮತ್ತೆ ಸಮಾವೇಶಗೊಂಡಾಗ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿಯಮ 367ರಡಿ ನೋಟೀಸ್ ಕಳುಹಿಸಿದ್ದೇನೆ ಎಂದು ಸ್ಪೀಕರ್ ಗಮನಕ್ಕೆ ತಂದರು, ಇದಕ್ಕೆ ಉತ್ತರಿಸಿದ ಸಭಾಧ್ಯಕ್ಷರು, ನೋಟೀಸ್ ತಲುಪಿದೆ ಎಂದು ಹೇಳಿದರು. ಯಡಿಯೂರಪ್ಪನವರ ಮಂತ್ರಿಮಂಡಲದ ಮೇಲೆ ವಿಶ್ವಾಸವಿಲ್ಲ ನಮಗೆ, ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೊಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಆಗ ಸ್ಪೀಕರ್ ಅವಿಶ್ವಾಸ ನಿರ್ಣಯ ಮಂಡನೆಗೆ ಒಪ್ಪಿಗೆ ನೀಡಿದರು.
ತನ್ನ ಪಕ್ಷದವರಿಂದಲೇ ಸರ್ಕಾರ ತರಾಟೆಗೆ
ಬೆಂಗಳೂರು, ಸೆ. 24: ಕೊರೊನಾ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೆಪದಲ್ಲಿ ಲೂಟಿ ಹೊಡೆಯುತ್ತಿವೆ ಸರ್ಕಾರ, ಆರೋಗ್ಯ ಇಲಾಖೆ ಏನು ಮಾಡುತ್ತಿದೆ? ಎಂದು ಆಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ. ಇಂದು ವಿಧಾನಸಭೆಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಸಂತಾಪ ನಿರ್ಣಯ ಚರ್ಚೆಯ ಮೇಲೆ ಮಾತನಾಡಿದ ಯತ್ನಾಳ್, ತಮ್ಮ ಅನುಭವವನ್ನು ಎಳೆ, ಎಳೆಯಾಗಿ ಕೆಲವೇ ನಿಮಿಷದಲ್ಲಿ ಸದನ ಮುಂದೆ ಬಿಚ್ಚಿಟ್ಟರು. ನನಗೆ ಹೀಗಾದರೆ ಜನಸಾಮಾನ್ಯರ ಪಾಡೆನು? ಸರ್ಕಾರ, ಆರೋಗ್ಯ ಇಲಾಖೆ ಏನು ಮಾಡುತ್ತಿದೆ ಎಂದರು. ಬಸವನಗೌಡ ಪಾಟೀಲ್ ಯತ್ನಾಳ್, ಸುರೇಶ್ ಅಂಗಡಿ ನಿಧನದಿಂದ ಆಘಾತಗೊಂಡಿದ್ದೇನೆ. ಏಮ್ಸ್ ನಂತಹ ದೊಡ್ಡ ಸಂಸ್ಥೆಯಲ್ಲಿಯೇ ಅವರ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರೆ ನಾವು ಕೋವಿಡ್ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದರು.
ವೀಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ
ನವದೆಹಲಿ, ಸೆ. 24: ಫಿಟ್ನೆಸ್ ಐಕಾನ್ಗಳೆಂದು ಪರಿಗಣಿಸಲಾಗಿರುವ ಕೆಲವು ಪ್ರಮುಖ ವ್ಯಕ್ತಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ವೀಡಿಯೋ ಕಾನ್ಫರೆನ್ಸ್ ನಡೆಸಿದರು. ಮಿಲಿಂದ್ ಸೋಮನ್, ವಿರಾಟ್ ಕೊಹ್ಲಿ ಸೇರಿದಂತೆ ಇನ್ನೂ ಹಲವು ಗಣ್ಯರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. 'ಫಿಟ್ ಇಂಡಿಯಾ' ಅಭಿಯಾನದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಅವರು ಈ ವೀಡಿಯೋ ಕಾನ್ಫರೆನ್ಸ್ ನಡೆಸಿದರು. ಈ ಸಂದರ್ಭ ಪ್ರಧಾನಿ ಮೋದಿ, ಖ್ಯಾತ ಪೌಷ್ಟಿಕಾಂಶಗಳ ತಜ್ಞ ರಜುತಾ ದಿವಾಕರ್ ಅವರೊಂದಿಗೆ ಮಾತನಾಡಿ, ಕುತೂಹಲಕಾರಿ ವಿಷಯವಾಗಿರುವ, ತಮ್ಮ ಆಹಾರದ ಡಯಟ್ ಕುರಿತ ರಹಸ್ಯವನ್ನು ಬಹಿರಂಗಪಡಿಸಿದರು. ವಾರದಲ್ಲಿ ಎರಡು ದಿನ ನನ್ನ ತಾಯಿ ನನಗೆ ದೂರವಾಣಿ ಕರೆ ಮಾಡುತ್ತಾರೆ. ನನ್ನ ಯೋಗ ಕ್ಷೇಮ ಕೇಳುತ್ತಾರೆ. ಫೋನ್ ಕರೆ ಮಾಡಿದಾಗಲೆಲ್ಲಾ, ಪ್ರತಿ ದಿನ ಹರಿಶಿನ ಬಳಸುತ್ತಿದ್ದೀಯಾ..? ಎಂದು ಕೇಳುತ್ತಾರೆ. ನಾನು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿಶಿನ ಬಳಸುವ ಬಗ್ಗೆಯೂ ಬಹಳಷ್ಟು ಬಾರಿ ಮಾತನಾಡಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟೀಸ್
ಮಂಗಳೂರು, ಸೆ. 24: ಮಂಗಳೂರು ಪೊಲೀಸರ ಬಂಧನದಲ್ಲಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ಆತನ ಆಪ್ತ ತರುಣ್ ಹೇಳಿಕೆಯನ್ನಾಧರಿಸಿ ನಿರೂಪಕಿ ಅನುಶ್ರೀ ಅವರಿಗೆ ವಾಟ್ಸಪ್ ಮೂಲಕ ಸಿಸಿಬಿ ನೋಟೀಸ್ ನೀಡಿದೆ. ಬಂಧನದಲ್ಲಿರುವ ಕಿಶೋರ್ ಶೆಟ್ಟಿ, ತರುಣ್ ವಿಚಾರಣೆ ವೇಳೆ ಮಹತ್ವದ ವಿಷಯಗಳು ಬಯಲಿಗೆ ಬಂದಿವೆ. ಇಂದು ಬಂಧನವಾಗಿರುವ ತರುಣ್ ಜೊತೆ ಅನುಶ್ರೀ ನಿರಂತರ ಸಂಪರ್ಕದಲ್ಲಿದ್ದರು. ಅನುಶ್ರೀ ಡ್ರಗ್ಸ್ ಪೆಡ್ಲರ್ಗಳ ಜೊತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಅನ್ಲಾಕ್ ಬಳಿಕ ಮಂಗಳೂರಿಗೆ ತೆರಳಿದ್ದ ಅನುಶ್ರೀ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿರುವ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ. ಆದರೆ ಅನುಶ್ರೀ ನನಗೆ ಯಾವುದೇ ನೋಟೀಸ್ ಬಂದಿಲ್ಲ. ಯಾವ ನೋಟೀಸ್ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ನೀವು ಹೇಳುತ್ತಿರುವ ರೀತಿಯಲ್ಲಿ ಯಾವುದೇ ನೋಟೀಸ್ ತಲುಪಿಲ್ಲ. ನನ್ನ ಮೊಬೈಲಿಗೆ ಸಮನ್ಸ್ ಸಹ ಬಂದಿಲ್ಲ. ಮಂಗಳೂರಿನ ಮನೆಯಲ್ಲಿಯೂ ನಾವು ಯಾರೂ ಇಲ್ಲ. ಸುದ್ದಿ ಬಿತ್ತರವಾಗುತ್ತಿದ್ದಂತೆ ನಾನು ಮಂಗಳೂರಿನ ಮನೆಯ ಬಳಿ ಕೆಲವರನ್ನ ಕಳಿಸಿ ವಿಚಾರಿಸಿದೆ. ನಾನು, ಅಮ್ಮ ಮತ್ತು ತಮ್ಮ ಬೆಂಗಳೂರಿನಲ್ಲಿಯೇ ಇದ್ದೇವೆ ಎಂದು ಹೇಳಿದ್ದಾರೆ.
ತಿರುಮಲದಲ್ಲಿ ಕರ್ನಾಟಕ ಯಾತ್ರಾರ್ಥಿ ಭವನ
ಬೆಂಗಳೂರು, ಸೆ. 24: ಕರ್ನಾಟಕ ರಾಜ್ಯ ಸರ್ಕಾರ ಸುಮಾರು ರೂ. 200 ಕೋಟಿ ವೆಚ್ಚದಲ್ಲಿ ತಿರುಮಲದಲ್ಲಿ ನಿರ್ಮಿಸಲಿರುವ ಯಾತ್ರಾರ್ಥಿಗಳ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಗುರುವಾರ ಬೆಳಿಗ್ಗೆ ಜಂಟಿಯಾಗಿ ಭೂಮಿಪೂಜೆ ನೆರೆವೇರಿಸಿದರು. ತಿರಮಲದಲ್ಲಿರುವ ಕರ್ನಾಟಕ ಚಾರೀಟೀಸ್ಗೆ 7.5 ಎಕರೆ ಭೂಮಿಯನ್ನು 50 ವರ್ಷಗಳ ಅವಧಿಗೆ 2008 ರಲ್ಲಿ ತಿರುಮಲ ತಿರುಪತಿ ದೇವಸ್ಥಾನ ಗುತ್ತಿಗೆಗೆ ನೀಡಿದೆ. ಈ ಸ್ಥಳದಲ್ಲಿ ಟಿಟಿಡಿ ನಿಬಂಧನೆಗಳಂತೆ ರೂ. 200 ಕೋಟಿ ವೆಚ್ಚದಲ್ಲಿ ಯಾತ್ರಾರ್ಥಿಗಳ ಭವನ ನಿರ್ಮಿಸಲು ಕಳೆದ ಜುಲೈನಲ್ಲಿ ಕರ್ನಾಟಕ ರಾಜ್ಯ ಸರ್ಕಾರ, ಟಿಟಿಡಿ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕರ್ನಾಟಕ ಸರ್ಕಾರದ ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ನೂತನವಾಗಿ ನಿರ್ಮಿಸಲಿರುವ ಯಾತ್ರಾರ್ಥಿ ಭವನದ ವಿವರ ನೀಡಿದರು. 242 ಯಾತ್ರಿಕರ ಕೊಠಡಿಗಳು, 32 ಸೂಟ್ ರೂಂ ಗಳು, 12 ಡಾರ್ಮೆಟರಿಗಳು, ಕಲ್ಯಾಣ ಮಂಟಪ ಮತ್ತಿತರ ವ್ಯವಸ್ಥೆಗಳಿರುತ್ತವೆ.
ಅಲ್ಹಾಜ್ ಪಿ.ಎಂ ಇಬ್ರಾಹಿಂ ಮುಸ್ಲಿಯಾರ್ ನಿಧನ
ಮಂಗಳೂರು, ಸೆ. 24: ಹಿರಿಯ ಮುಸ್ಲೀಂ ವಿದ್ವಾಂಸ ಮತ್ತು ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳ ಕ್ವಾಜಿ ಆಗಿದ್ದ ಅಲ್ಹಾಜ್ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಗುರುವಾರ ನಗರದಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಬೇಕಲ್ ಅವರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸುನ್ನಿ ಜಂಇಯ್ಯತುಲ್ ರಾಜ್ಯಾಧ್ಯಕ್ಷರಾಗಿದ್ದ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಅವರು ಜಾಮಿಯ ಸಅದಿಯ ಅರಬಿಯಾ ಶರೀಅತ್ ಕಾಲೇಜಿನ ಪ್ರಾಚಾರ್ಯರು, ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರ ಸದಸ್ಯರಾಗಿ, ಅಲ್ ಅನ್ಸಾರ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.