ಸಂಪಾಜೆ, ಸೆ. 24: ಉತ್ತರ ಕೊಡಗು ಗಡಿ ಗ್ರಾಮಗಳಾದ ಸಂಪಾಜೆ ಹೋಬಳಿಯ ಮರಿಕೆ, ಚಡಾವು, ಅರೆಕಲ್ಲು, ಕುಂಟಿಕಾನ, ಕಲಾಯ್, ಕಲ್ಲಾಳ, ಕೊಯನಾಡು ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ಹಾವಳಿಯಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ. ನಿರಂತರ ದಾಳಿಯಿಡುತ್ತಿರುವ ಕಾಡಾನೆಗಳು ತೆಂಗು, ಬಾಳೆ, ಇನ್ನಿತರ ಕೃಷಿ ಫಸಲು ತಿನ್ನುವುದರೊಂದಿಗೆ ಧ್ವಂಸಗೊಳಿಸಿರುವ ದೃಶ್ಯ ಗೋಚರಿಸಿದೆ.ಎಪಿಎಂಸಿ ಸದಸ್ಯ ಹಾಗೂ ವಿಎಸ್‍ಎಸ್‍ಎನ್ ಅಧ್ಯಕ್ಷ ಎನ್.ಸಿ. ಅನಂತೇಶ್ವರ, ಗ್ರಾ.ಪಂ. ಮಾಜಿ ಸದಸ್ಯೆ ರಮಾದೇವಿ ಕಳಗಿ, ಮಯಿಲಪ್ಪ ಹಾಗೂ ಕುಮಾರ್ ಮತ್ತಿತರರು ಕಾಡಾನೆ ಹಾವಳಿ ನಿಯಂತ್ರಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮದೊಂದಿಗೆ ರೈತರಿಗೆ ನಷ್ಟ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ.ಕಾಡಾನೆ ಉಪಟಳದಿಂದ ತುಂಬಾ ಸಮಸ್ಯೆಯೊಂದಿಗೆ ಭಯದ ವಾತಾವರಣ ಎದುರಾಗಿದೆ ಎಂದು ‘ಶಕ್ತಿ’ಯೊಂದಿಗೆ ಕಳವಳ ವ್ಯಕ್ತಪಡಿಸಿದ್ದಾರೆ.

-ಚಿತ್ರ, ವರದಿ : ಶಭರೀಶ್.