ಕಣಿವೆ, ಸೆ. 24 : ಹಾರಂಗಿ ಜಲಾಶಯದ ನಿರ್ಮಾಣದ ಸಂದರ್ಭದಲ್ಲಿ ಅಮೂಲ್ಯವಾದ ಮನೆ, ತೋಟಗಳನ್ನು ಜಲಾಶಯಕ್ಕೆ ಬಿಟ್ಟು ಕೊಟ್ಟು ಬಂದ ಅತ್ತೂರು ಗ್ರಾಮ ನಿವಾಸಿಗಳಿಗೆ ಕಾಡಾನೆಗಳ ಕಾಟ ದಿನಂಪ್ರತಿ ಕಾಡುತ್ತಿದೆ. ಸುತ್ತಲೂ ಇರುವ ಅರಣ್ಯದ ನಡುವೆ ಜನವಸತಿ ಕಲ್ಪಿಸಿದ ಸರ್ಕಾರ ನಮಗೆ ನೆಮ್ಮದಿ ಇಲ್ಲದಂತೆ ಮಾಡಿದೆ ಎಂದು ದೂರುವ ಇಲ್ಲಿನ ಗ್ರಾಮಸ್ಥರು, ನಮ್ಮನ್ನು ಕಾಡಾನೆಗಳ ಸಂಕೋಲೆಯಿಂದ ಪಾರು ಮಾಡಿ, ಇಲ್ಲವೇ ಬೇರೆಡೆ ಬದಲೀ ಕೃಷಿ ಭೂಮಿಯನ್ನು ಕೊಡಿ ಎಂದು ಗ್ರಾಮಸ್ಥರಾದ ಡಿ.ಎಂ. ಲೋಕೇಶ, ಗಿರೀಶ, ವಿಶ್ವನಾಥ, ಜೋಯಪ್ಪ, ಕೆ.ಎಸ್. ರಮೇಶ ಮೊದಲಾದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

ನಂಜರಾಯಪಟ್ಟಣ ವ್ಯವಸಾಯ ಸಹಕಾರ ಸಂಘದಿಂದ ಕೃಷಿ ಸಾಲ ಮಾಡಿ ಎರಡೂವರೆ ಎಕರೆಯಲ್ಲಿ ಬೆಳೆದ ಜೋಳದ ಫಸಲನ್ನು ಕಾಡಾನೆಗಳು ತುಳಿದು ಧ್ವಂಸ ಮಾಡಿವೆ. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ನಾವು ಏನು ಮಾಡುವುದು. ಎಲ್ಲಿಗೆ ಹೋಗುವುದು ? ಎಂದು ಬೆಳೆ ಸಂತ್ರಸ್ತ ಲೋಕೇಶ್ ಅಳಲು ತೋಡಿಕೊಂಡಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳು ನಮಗೆ ಬೆಳೆ ಪರಿಹಾರ ನೀಡಬೇಕು. ಕಾಡಾನೆಗಳ ಕಾಟವನ್ನು ಶಾಶ್ವತವಾಗಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಅವರು ಕೋರಿದ್ದಾರೆ.

- ಮೂರ್ತಿ