ಕೂಡಿಗೆ, ಸೆ. 24: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭೇಟಿ ನೀಡಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹಣೆ, ನಿರ್ವಹಣೆ ಕುರಿತು ಅಧಿಕಾರಿಗಳಿಂದ ಸಂಪೂರ್ಣವಾದ ಮಾಹಿತಿಯನ್ನು ಪಡೆದರು.
ಈ ಸಂದರ್ಭ ಉಪ ವಿಭಾಗಾಧಿಕಾರಿ ಈಶ್ವರ್ ಖಂಡು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಾಧಿಕಾರಿ ಭಂವರ್‍ಸಿಂಗ್ ಮೀನಾ ಸೇರಿದಂತೆ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜೇಗೌಡ ಇಂಜಿನಿಯರ್ ನಾಗರಾಜ್, ಕಿರಣ್ ಸೇರಿದಂತೆ ಕಂದಾಯ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಆಸ್ಪತ್ರೆಗೆ ಭೇಟಿ
ಹಾರಂಗಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಅನೀಸ್ ಕಣ್ಮಣಿ ಜಾಯ್ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು. ನೀರಾವರಿ ನಿಗಮದ ಅಧೀನದಲ್ಲಿದ್ದ ಆಸ್ಪತ್ರೆ ಸರಿಯಾದ ನಿರ್ವಹಣೆ ಇಲ್ಲದೇ ರೋಗಿಗಳ ಪಾಲಿಗೆ ಇದ್ದೂ ಇಲ್ಲವಾಗಿತ್ತು. ಖಾಯಂ ವೈದ್ಯ ಸಿಬ್ಬಂದಿಗಳನ್ನು ನೇಮಿಸಬೇಕೆಂದು ಗ್ರಾಮಸ್ಥರು ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದರು. ಸದ್ಯಕ್ಕೆ ವಾರದಲ್ಲಿ ಮೂರು ದಿನ ವೈದ್ಯರು ಲಭ್ಯವಿರಲಿದ್ದಾರೆ. ಒಂದು ದಿನ ಮಹಿಳಾ ವೈದ್ಯರು ಬರಲಿದ್ದಾರೆ. ವೈದ್ಯರ ಕೊರತೆ ಇರುವ ಕಾರಣ; ಇರುವ ವೈದ್ಯರನ್ನು ಸೇವೆಗೆ ನಿಯೋಜಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಸಮಸ್ಯೆಯ ಪರಿಹಾರಕ್ಕಾಗಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.