ಕಣಿವೆ, ಸೆ. 24: ಕಳೆದ ಕೆಲವು ವರ್ಷಗಳಿಂದ ಸುರಿಯುವ ವ್ಯಾಪಕ ಮಳೆಯಿಂದಾಗಿ ಅರಣ್ಯಗಳಲ್ಲಿ ಉತ್ಪನ್ನವಾಗುವ ಮರದ ಪಾಚಿ, ಸೀಗೆ, ಕಾಡು ನೆಲ್ಲಿ, ಜೇನು ಮೊದಲಾದ ಕಿರು ಅರಣ್ಯ ಉತ್ಪನ್ನಗಳು ಕ್ಷೀಣಿಸುತ್ತಿವೆ ಎನ್ನಲಾಗಿದೆ. ಇದರಿಂದಾಗಿ ಅರಣ್ಯಗಳಲ್ಲಿ ಬದುಕು ಕಟ್ಟಿಕೊಂಡು ವಾಸಿಸುವ ಗಿರಿಜನರ ಪ್ರಮುಖ ಆದಾಯದ ಮೂಲಕ್ಕೆ ಹೊಡೆತ ಬಿದ್ದಿದೆ. ಸಾಮಾನ್ಯವಾಗಿ ಅರಣ್ಯಗಳಲ್ಲಿ ಮರಗಳ ಮೇಲೆ ಕಟ್ಟುವ ‘ಪಾಚಿ’ ಪ್ರಮುಖವಾದ ಕಿರು ಅರಣ್ಯ ಉತ್ಪನ್ನವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಮಳೆ ಹೆಚ್ಚು ಸುರಿಯುವ ಕಾರಣದಿಂದ ಮರಗಳಲ್ಲಿ ಪಾಚಿಯೇ ಬೆಳೆಯುತ್ತಿಲ್ಲ ಎನ್ನುತ್ತಾರೆ ಹೆರೂರು ಗಿರಿಜನ ಹಾಡಿಗಳು. ಈ ಪಾಚಿ ಹೆಚ್ವು ಬೆಳೆಯುವ ಮರ ಎಂದರೆ ತೇಗ, ಬೀಟೆ, ಹೊನ್ನೆ ಮರಗಳಲ್ಲಿ ಬೆಳೆಯುತ್ತದೆ. ಆದರೆ ಕಳೆದ ಕೆಲವು ದಶಕಗಳಿಂದ ಅರಣ್ಯಗಳಲ್ಲಿ ಈ ಮರಗಳೇ ಕಣ್ಮರೆಯಾಗುತ್ತಿರುವುದು ಒಂದೆಡೆಯಾದರೆ, ಸುಡು ಬೇಸಗೆಯಲ್ಲಿ ಅರಣ್ಯಗಳಲ್ಲಿ ಬಾಧಿಸುವ ಕಾಡ್ಗಿಚ್ಚಿಗೆ ಪಾಚಿ ನಾಶವಾಗುತ್ತದೆ ಎನ್ನುತ್ತಾರೆ ಅರಣ್ಯ ವಾಸಿಗಳು. ಕುಶಾಲನಗರದ ಬಳಿಯ ಬಸವನಹಳ್ಳಿಯಲ್ಲಿರುವ ಸೋಮವಾರಪೇಟೆ ತಾಲೂಕು ಗಿರಿಜನರ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಸಂಗ್ರಹಿತ ಮರದ ಪಾಚಿಯನ್ನು ಅರಣ್ಯವಾಸಿಗಳಿಂದ ಕೆ.ಜಿ. 1ಕ್ಕೆ ತಲಾ 290 ರೂ.ಗಳಿಗೆ ಖರೀದಿಸಲಾಗುತ್ತದೆ. ಒಬ್ಬ ಅರಣ್ಯವಾಸಿ ಒಂದು ದಿನಕ್ಕೆ ಹೆಚ್ಚು ಎಂದರೆ ಎರಡರಿಂದ ಮೂರು ಕೆ.ಜಿ. ಮರದ ಪಾಚಿ ಸಂಗ್ರಹಿಸಲು ಸಾಧ್ಯ ಎನ್ನುವ ಹೆರೂರಿನ ಮಣಿಕಂಠ, ರಾಜೇಶ ಹಾಗೂ ಅರುಣ ಮೊದಲಿಗರು, ‘ಮರದಲ್ಲಿನ ಪಾಚಿಯನ್ನು ಸಂಗ್ರಹಿಸುವುದು ಬಲು ಕಷ್ಟ ಸರ್, ಮರದ ರೆಂಬೆ ಮೇಲೆಲ್ಲಾ ಹತ್ತಿ ಸಂಗ್ರಹಿಸಬೇಕು. ಏನೋ ಕುಲಕಸುಬು. ಹಾಗಾಗಿ ಈ ಪಾಚಿಯನ್ನು ಆಗಿಂದಾಗ್ಗೆ ಸಂಗ್ರಹ ಮಾಡಿಟ್ಟು ನಂತರ ನಮಗೆ ಹತ್ತಿರದ ಬಸವನಹಳ್ಳಿ ಸಂಘಕ್ಕೆ ತಂದು ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಇವರು. ಈ ಮರದ ಪಾಚಿಯನ್ನು ಬಣ್ಣ ತಯಾರಿಸಲು ಬಳಸಲಾಗುತ್ತದೆ. ಜೊತೆಗೆ ಸಾಂಬಾರ ಪದಾರ್ಥಗಳ ಜೊತೆಯಲ್ಲಿಯೂ ಈ ಪಾಚಿಯನ್ನು ಬಳಸಲಾಗುತ್ತದೆ ಎನ್ನುವ ಈ ಗಿರಿವಾಸಿಗಳು, ಪಲಾವ್ ಸಿದ್ಧಗೊಳಿಸಲು ಪಲಾವ್ಗೆ ಹಾಕುವ ಪಲಾವ್ ಎಲೆ ಮಾದರಿಯಲ್ಲಿ ಪಾಚಿಯನ್ನು ಹಾಕಿದರೆ ಎಂತಹ ಸ್ವಾದಿಷ್ಟಮಯ ರುಚಿ ಗೊತ್ತಾ ಎನ್ನುತ್ತಾರೆ ಇವರು. ಮರದ ಪಾಚಿಯಂತೆಯೇ ಕಾಡು ನೆಲ್ಲಿ, ಸೀಗೆ ಕಾಯಿ ಹಾಗೂ ಜೇನನ್ನು ಕೂಡ ಅರಣ್ಯಗಳಲ್ಲಿ ಸಂಗ್ರಹಿಸಿ ಇಲ್ಲಿ ತಂದು ಮಾರಾಟ ಮಾಡಲಾಗುತ್ತದೆ. ಆದರೆ ಕಳೆದ ಹತ್ತು ವರ್ಷಗಳ ಈಚೆಗೆ ಜೇನು ಉತ್ಪನ್ನವೂ ಗಣನೀಯವಾಗಿ ಕುಂಠಿತವಾಗಿದೆ. ಅರಣ್ಯಗಳಿಗೆ ಬೇಸಿಗೆಯಲ್ಲಿ ಬೀಳುವ ಕಾಡ್ಗಿಚ್ಚು ಜೇನು ಸಂತಾನವನ್ನೇ ನಾಶ ಮಾಡಿರುವುದು ಒಂದೆಡೆಯಾದರೆ, ಅರಣ್ಯಗಳಲ್ಲಿ ಈ ಹಿಂದೆ ಕಾಣಸಿಗುತ್ತಿದ್ದ ಪುಷ್ಪವನಗಳು ಕೂಡ ಸಂಪೂರ್ಣವಾಗಿ ನಾಶ ಹೊಂದಿವೆ. ಇನ್ನು ಅರಣ್ಯದೊಳಕ್ಕೆ ನಾಡಿನ ಜಾನುವಾರುಗಳು ಬಂದು ಗಿಡ ಸಸ್ಯಗಳನ್ನು ತಿಂದು ಬುಡ ಸಹಿತ ಹಾಳು ಮಾಡುವ ಕಾರಣ ಹೂವಾಗುವ ಗಿಡಗಳು ಮರಗಳೇ ಕಾಣುತ್ತಿಲ್ಲ. ಹಾಗಾಗಿ ಜೇನುಹುಳು ಮಧು ಹೀರಿ ಸಂಗ್ರಹಿಸಲು ಬಹು ದೂರ ಸಾಗುವ ಸ್ಥಿತಿ ಉಂಟಾಗಿದೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲೆಲ್ಲೂ ಜನವಸತಿ ಪ್ರದೇಶ ವ್ಯಾಪಕವಾದೊಡನೆ ವಾಹನಗಳ ಬಳಕೆ ಹಾಗೂ ಓಡಾಟ ಸಹಜವಾಗಿಯೇ ಹೆಚ್ಚುತ್ತದೆ. ಈ ವಾಹನಗಳು ಉಗುಳುವ ಹೊಗೆಯ ದುಷ್ಪರಿಣಾಮ ಜೇನುಹುಳು ಸಂತತಿ ಕ್ಷೀಣವಾಗುತ್ತದೆ ಎನ್ನುತ್ತಾರೆ ಗಿರಿಜನ ಮುಖಂಡ ಹಾಗೂ ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು. ನಮ್ಮ ಸಹಕಾರ ಸಂಘದಲ್ಲಿ ಈ ಹಿಂದೆ ಜೇನು ಸುಮಾರು ಮೂರರಿಂದ ನಾಲ್ಕು ಸಾವಿರ ಕೆ.ಜಿ.ಗಳಷ್ಟು ಸಂಗ್ರಹವಾ ಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಂಪೂರ್ಣವಾಗಿ ಇಳಿಮುಖವಾಗಿದೆ. ಅರಣ್ಯ ವಾಸಿಗಳು ಸಂಗ್ರಹಿಸಿ ತರುವ ಜೇನಿಗೆ ಕೆ.ಜಿ.ಗೆ ತಲಾ ರೂ. 400, ಪಾಚಿಗೆ ರೂ. 290, ಸೀಗೆಗೆ ರೂ. 30 ಕೊಟ್ಟು ಖರೀದಿಸಲಾಗುತ್ತಿದೆ. ಗಿರಿಜನ ಯುವಕರಿಗೆ ಆದಾಯದ ಮತ್ತೊಂದು ಮೂಲವಾಗಿರುವ ಈ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಚಂದ್ರು ಹೇಳುತ್ತಾರೆ.
- ಕೆ.ಎಸ್. ಮೂರ್ತಿ.