*ಸಿದ್ದಾಪುರ, ಸೆ. 24: ಹಾಡಿಗಳಿಗೆ ಸರ್ಕಾರದ ವತಿಯಿಂದ ಪೌಷ್ಟಿಕ ಆಹಾರವನ್ನು ಸರಬರಾಜು ಮಾಡಲಾಗುತ್ತಿದ್ದು, ಇವುಗಳನ್ನು ಸಕಾಲದಲ್ಲಿ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಹಾಡಿ ಮುಖಂಡರು ಒತ್ತಾಯಿಸಿದ್ದಾರೆ.
ಕಳೆದ ಆರು ತಿಂಗಳುಗಳಿಂದ ಹಾಡಿಗಳಿಗೆ ಆಹಾರ ಸಾಮಗ್ರಿ ಸರಬರಾಜಾಗಿರಲಿಲ್ಲ. ಚೆನ್ನಯ್ಯನಕೋಟೆ ಗ್ರಾ.ಪಂ. ಮಾಜಿ ಸದಸ್ಯ ಮತ್ತು ಅಪ್ಪಾಜಿ ಅವರು ಜಿಲ್ಲಾಧಿಕಾರಿಗಳು ಹಾಗೂ ಗಿರಿಜನ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ನೀಡಿದ್ದರು. ನಂತರ ಆಹಾರವನ್ನು ವಿತರಿಸಲಾಗಿತ್ತಾದರೂ ಆಹಾರ ಸಾಮಗ್ರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಕೆಲವರು ಆರೋಪಿಸಿದ್ದರು.
ದೂರಿನ ಹಿನ್ನೆಲೆ ದಿಡ್ಡಳ್ಳಿ, ಚೊಟ್ಟೆಪಾರೆ, ರೇಷ್ಮೆಹಡ್ಲು ಮತ್ತಿತರ ಹಾಡಿಗಳಿಗೆ ಪೊನ್ನಂಪೇಟೆ ಆಹಾರ ನಿರೀಕ್ಷಕ ನವೀನ್ ಕುಮಾರ್ ಹಾಗೂ ಆಹಾರ ಸಾಮಗ್ರಿ ಗುತ್ತಿಗೆದಾರ ಮೋಹನ್ ಕುಮಾರ್ ಅವರುಗಳು ಭೇಟಿ ನೀಡಿ ಆಹಾರದ ಗುಣಮಟ್ಟ ಪರಿಶೀಲಿಸಿದರು.
ಈ ಸಂದರ್ಭ ಮಾತನಾಡಿದ ಮುಖಂಡರುಗಳಾದ ಜೆ.ಕೆ. ರಾಮು ಹಾಗೂ ಜೆ.ಕೆ. ಮುತ್ತ ಆಹಾರ ಸಾಮಗ್ರಿ ಗುಣಮಟ್ಟದಿಂದ ಕೂಡಿದ್ದು, ಕೆಲವರು ಮಾಡಿರುವ ಆರೋಪದಂತೆ ಕಳಪೆ ಮಟ್ಟದ ಆಹಾರ ಸರಬರಾಜಾಗಿಲ್ಲವೆಂದು ಸ್ಪಷ್ಟಪಡಿಸಿದರು. ಆದರೆ ಸಕಾಲದಲ್ಲಿ ಆಹಾರವನ್ನು ಒದಗಿಸಲು ಗುತ್ತಿಗೆದಾರ ಸಂಸ್ಥೆಗೆ ಸೂಚನೆ ನೀಡಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.