ಕುಶಾಲನಗರ, ಸೆ. 24: ಮಾದಕ ವಸ್ತುಗಳ ಮಾರಾಟ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪ್ರಮುಖ ಆರೋಪಿ ವಿದೇಶಿ ಪ್ರಜೆ ಒಪೊಂಗ್ ಸ್ಯಾಮ್ಸನ್‍ನನ್ನು ಮೂರು ದಿನಗಳ ಕಾಲ ಪೊಲೀಸ್ ಸುಪರ್ದಿಗೆ ವಹಿಸಲಾಗಿದೆ. ತಾ. 22 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಮಡಿಕೇರಿ ಜಿಲ್ಲಾ ಅಪರಾಧ ಪತ್ತೆದಳ ಪೊಲೀಸರು ಹೆಚ್ಚಿನ ತನಿಖೆಗೆ ಪೊಲೀಸ್ ಸುಪರ್ದಿಗೆ ವಹಿಸುವಂತೆ ಮನವಿ ಮಾಡಿದ್ದರು.

(ಮೊದಲ ಪುಟದಿಂದ) ಆಗಸ್ಟ್ 29 ರ ಮುಂಜಾನೆ ಮಡಿಕೇರಿಯಿಂದ ಕಾರಿನಲ್ಲಿ ತಪ್ಪಿಸಿಕೊಂಡಿದ್ದ ಸ್ಯಾಮ್ಸನ್ ಸೇರಿದಂತೆ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಈ ಸಂದರ್ಭ ಕಾರಿನಲ್ಲಿ ಮಾದಕ ವಸ್ತುಗಳು ಕೂಡ ಪತ್ತೆಯಾಗಿತ್ತು. ಕುಶಾಲನಗರದಲ್ಲಿ ಪರಾರಿಯಾದ ಸ್ಯಾಮ್ಸನ್ ಮತ್ತು ಇಬ್ಬರು ಮಹಿಳೆಯರು ಪಟ್ಟಣದ ಲಾಡ್ಜ್ ಒಂದರಲ್ಲಿ ತಂಗಿದ್ದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೊಟೇಲ್ ಸಿಬ್ಬಂದಿಗಳಿಂದ ಮಾಹಿತಿ ಪಡೆಯುವುದರೊಂದಿಗೆ ಆರೋಪಿಯೊಂದಿಗೆ ಸ್ಥಳ ಮಹಜರು ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ತನಿಖಾ ತಂಡ ಆರೋಪಿಯೊಂದಿಗೆ ಮಡಿಕೇರಿ ಮತ್ತು ಕುಶಾಲನಗರದಲ್ಲಿ ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.