ವೀರಾಜಪೇಟೆ, ಸೆ. 23: ಪಕ್ಷ ಸಂಘಟನೆಯಲ್ಲಿ ಕಾರ್ಯಕರ್ತರು, ಮುಖಂಡರಲ್ಲಿ ಏನೇ ಭಿನ್ನಾಭಿಪ್ರಾಯ ಗಳಿದ್ದರೂ ಬಹಿರಂಗವಾಗಿ ಚರ್ಚಿಸದೆ ಪಕ್ಷದ ಆಂತರಿಕ ವೇದಿಕೆಯಲ್ಲಿ ವಿಚಾರ ವಿನಿಮಯ ಮಾಡಿಕೊಂಡು ಬಗೆಹರಿಸಿಕೊಂಡರೆ ಪಕ್ಷ ಸಂಘಟನೆಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯ ಸಮಿತಿಯ ಉಪಾಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ರಾಜೇಂದ್ರಕುಮಾರ್ ಹೇಳಿದರು.

ವೀರಾಜಪೇಟೆ ನಗರ ಹಾಗೂ ತಾಲೂಕು ಬಿ.ಜೆ.ಪಿ. ವತಿಯಿಂದ ಇಲ್ಲಿನ ಪುರಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟು ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಸೇವಾ ಸಪ್ತಾಹದ ಅಂಗವಾಗಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಉತ್ತಮವಾಗಿದ್ದು ಪಕ್ಷದ ಹಿರಿಯರು, ಅನುಭವಸ್ಥರ ನಡುವೆ ಕೆಲಸ ನಿರ್ವಹಿಸಲು ಸಂತೋಷವಾಗುತ್ತದೆ ಎಂದು ಹೇಳಿದರು.

ಪಕ್ಷದ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಮಾತನಾಡಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬ ಸೇರಿದಂತೆ ದೇಶದ ಇಬ್ಬರ ಮಹಾನ್ ನಾಯಕರುಗಳ ಹುಟ್ಟು ಹಬ್ಬವನ್ನು ತಾ. 15 ರಿಂದ ಅಕ್ಟೊಬರ್ 2 ರವರೆಗೆ ವಿವಿಧ ಮೋರ್ಚಾಗಳ ಸಹಕಾರದೊಂದಿಗೆ ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ, ಬೂತ್ ಮಟ್ಟದಲ್ಲಿ ಗಿಡಗಳನ್ನು ನೆಡುವ ವಿವಿಧ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಪ್ರಧಾನಿ ಮೋದಿಗೆ 70 ವರ್ಷ ಆದ ಕಾರಣ 70 ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು. ತಾಲೂಕು ಸಮಿತಿ ಅಧ್ಯಕ್ಷ ನೆಲ್ಲಿರ ಚಲನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂಞಗಡ ಅರುಣ್ ಭೀಮಯ್ಯ, ಸೇವಾ ಸಪ್ತಾಹದ ಸಂಚಾಲಕ ಮೂಕೊಂಡ ಶಶಿ ಸುಬ್ರಮಣಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ, ನಗರ ಸಮಿತಿ ಅಧ್ಯಕ್ಷ ಟಿ.ಪಿ. ಕೃಷ್ಣ, ಹಾಸನ ಜಿಲ್ಲಾ ಉಸ್ತುವಾರಿ ರೀನಾ ಪ್ರಕಾಶ್, ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ತಾಲೂಕು ಕಾರ್ಯದರ್ಶಿ ವಾಟೇರಿರ ಬೋಪಣ್ಣ ಉಪಸ್ಥಿತರಿದ್ದರು. ಈ ಸಂದರ್ಭ ಬಿಜೆಪಿ ಒ.ಬಿ.ಸಿ. ಘಟಕದಿಂದ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.