ಗೋಣಿಕೊಪ್ಪಲು, ಸೆ.23: ಮೇಯಲು ಬಿಟ್ಟಿದ್ದ ಮೂರು ಎಮ್ಮೆಗಳು ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಬಾಳೆಲೆ ಹೋಬಳಿಯ ದೇವನೂರು ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಎಂದಿನಂತೆ ತಮ್ಮ ಎಮ್ಮೆಗಳನ್ನು ಮಾಲೀಕರಾದ ಆದೇಂಗಡ ಟಿ.ದಿನೇಶ್ ಅವರು ಕಾರ್ಮಿಕರ ಮೂಲಕ ಮೇಯಲು ಬಿಟ್ಟಿದ್ದರು. ಈ ಸಂದರ್ಭದಲ್ಲಿ ವಿದ್ಯುತ್ ಕಂಬದಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಎಮ್ಮೆಗಳು ಸ್ಥಳದಲ್ಲಿಯೇ ಮೃತಪಟ್ಟಿವೆ.
ಸುದ್ದಿ ತಿಳಿದ ರೈತ ಸಂಘದ ಬಾಳೆಲೆ ಹೋಬಳಿಯ ಅಧ್ಯಕ್ಷರಾದ ಮೇಚಂಡ ಕಿಶ ಮಾಚಯ್ಯ, ಆದೇಂಗಡ ಲೆಹರ್ ಬಿದ್ದಪ್ಪ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಚೆಸ್ಕಾಂ ಇಲಾಖೆಯು ವಿದ್ಯುತ್ ತಂತಿಯನ್ನು ದುರಸ್ತಿಪಡಿಸದೆ ಇದ್ದ ಕಾರಣ ದುರ್ಘಟನೆ ನಡೆದಿರುವುದು ಗೊತ್ತಾಗಿದೆ.
ಸುಮಾರು ಒಂದೂವರೆ ಲಕ್ಷ ಬೆಲೆ ಬಾಳುವ ಮೂರು ಎಮ್ಮೆಗಳು ಮೃತಪಟ್ಟ ಹಿನ್ನಲೆಯಲ್ಲಿ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಿಸುವಂತೆ ಹಾಗೂ ನಿರ್ಲಕ್ಷ್ಯ ವಹಿಸಿದ ಚೆಸ್ಕಾಂ ಇಲಾಖೆಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಡಿ.ಕುಮಾರ್ ಅವರಿಗೆ ರೈತ ಸಂಘದ ಪದಾಧಿಕಾರಿಗಳು ದೂರು ಸಲ್ಲಿಸಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು.
ಸ್ಥಳದಿಂದ ದೂರವಾಣಿ ಮೂಲಕ ಚೆಸ್ಕಾಂ ಅಧಿಕಾರಿ ಸೋಮಶೇಖರ್ ಅವರನ್ನು ಸಂಪರ್ಕಿಸಿದ ರೈತ ಸಂಘದ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್ ಹಾಗೂ ಪದಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಬೇಕು.ಠಾಣಾಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನೊಂದ ರೈತನಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ರೈತ ಮುಖಂಡರ ಮನವಿಗೆ ಸ್ಪಂದಿಸಿದ ಚೆಸ್ಕಾಂ ಇಇ ಸೋಮಶೇಖರ್ ರೈತನಿಗೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭ ರೈತ ಸಂಘದ ಮಾಯಮುಡಿ ಸಂಚಾಲಕ ಪುಚ್ಚಿಮಾಡ ರಾಯ್ ಮಾದಪ್ಪ,ಪೊನ್ನಂಪೇಟೆ ಅಧ್ಯಕ್ಷ ಚೊಟ್ಟೆಕಾಳಪಂಡ ಮನು,ಗಾಡಾಂಗಡ ಉಮೇಶ್,ಕಿರುಗೂರಿನ ರೈತ ಮುಖಂಡರಾದ ಕೊಕ್ಕೆಂಗಡ ಹರೀಶ್, ಚೆಪ್ಪುಡೀರ ರೋಶನ್, ಮಹಿಳಾ ಮುಖಂಡರಾದ ದಿವ್ಯ, ಧರಣಿ, ಅಶ್ವಿನಿ, ಕಮಲ, ಗೌರಮ್ಮ, ಮುಂತಾದವರು ಹಾಜರಿದ್ದರು.