ಮಡಿಕೇರಿ, ಸೆ. 23: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ 300 ಮಂದಿ ಯುವಕರ ವಿಪತ್ತು ನಿರ್ವಹಣಾ ತಂಡ ರಚಿಸಲಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲಾ ಕಾರ್ಯದರ್ಶಿ ಡಾ.ಎ.ಯೋಗೀಶ್ ತಿಳಿಸಿದ್ದಾರೆ. ಅವರು ಮಡಿಕೇರಿಯಲ್ಲಿ ನಡೆದ ವೇದಿಕೆಯ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಮರುಕಳಿಸುತ್ತಿದ್ದು ಈ ಸಂದರ್ಭ ಪರಿಹಾರ ಕಾರ್ಯದಲ್ಲಿ ಅಧಿಕಾರಿಗಳು, ವಿಶೇಷ ಪಡೆಗಳು ಮಾತ್ರ ಕಾರ್ಯಾಚರಣೆ ನಡೆಸಬೇಕಾದ ಪ್ರಮೇಯ ಸೃಷ್ಠಿಯಾಗಿದೆ. ಇದನ್ನು ಮನಗಂಡು ಕ್ಷೇತ್ರದ ಯೋಜನೆ ಮೂಲಕ ಪ್ರತಿ ಜಿಲ್ಲೆಗಳಲ್ಲಿ ಯುವಕರ ವಿಪತ್ತು ನಿರ್ವಹಣಾ ತಂಡ ರಚನೆಯಾಗಿದೆ. ಬಹುತೇಕ ಜಿಲ್ಲೆಗಳಲ್ಲಿ ಈ ತಂಡಕ್ಕೆ ಎನ್‍ಡಿಆರ್‍ಎಫ್ ಮೂಲಕ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೂಡ ಇದರ ಅಗತ್ಯವಿದೆ. ಪ್ರತಿ 50 ಜನರ ತಂಡ ಅವಶ್ಯಕತೆಯಿರುವ ಪ್ರದೇಶಗಳಿಗೆ ಸಾಗಿ ಕೂಡಲೆ ಪರಿಹಾರ ಕಾರ್ಯದಲ್ಲಿ ಪಾಲ್ಗೊಳ್ಳುವ ಕಾರ್ಯಾಚರಣೆ ನಡೆಯಲಿದೆ. ಇದಕ್ಕೆ ಬೇಕಾದ ಎಲ್ಲಾ ಅಗತ್ಯ ಪರಿಕರಗಳನ್ನು ಕ್ಷೇತ್ರದ ಯೋಜನೆ ಕಲ್ಪಿಸಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಈಗಾಗಲೆ ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಯುವಕರ ತಂಡಕ್ಕೆ ಜಿಲ್ಲೆಗೆ ಆಗಮಿಸಿರುವ ಎನ್‍ಡಿಆರ್‍ಎಫ್ ಮೂಲಕ ತರಬೇತಿ ನೀಡಲು ಕೋರಲಾಗಿದೆ ಎಂದು ಮಾಹಿತಿ ನೀಡಿದರು.

ವೇದಿಕೆಯ ಅಧ್ಯಕ್ಷ ಸತೀಶ್ ಹೊನ್ನವಳ್ಳಿ, ವೇದಿಕೆ ಉಪಾಧ್ಯಕ್ಷ ಎಂ.ಎನ್.ಚಂದ್ರಮೋಹನ್, ದೇವರಾಜ್, ಧನಂಜಯ, ಕೋಶಾಧಿಕಾರಿ ಎ.ಟಿ.ರಂಗಸ್ವಾಮಿ ಮತ್ತು ಸದಸ್ಯರುಗಳು ಹಾಗೂ ಯೋಜನಾಧಿಕಾರಿಗಳಾದ ಸತೀಶ್ ಶೆಟ್ಟಿ, ಸದಾಶಿವಗೌಡ, ಕೆ.ಜಯಂತಿ, ವೈ.ಪ್ರಕಾಶ್ ಮತ್ತಿತರರು ಇದ್ದರು.